ಸರ್ಕಾರದ ಮನಸೋಇಚ್ಛೆಯ ಕ್ರಮಗಳಿಗೆ ಜನಪ್ರಿಯ ಬಹುಮತ ಎಂಬುದು ರಕ್ಷಣೆಯಲ್ಲ: ಸಿಜೆಐ ಎನ್ ವಿ ರಮಣ

'ಭಾರತೀಯ ನ್ಯಾಯಾಂಗ - ಭವಿಷ್ಯದ ಸವಾಲುಗಳು' ವಿಷಯದ ಕುರಿತು ಮಾತನಾಡುವಾಗ ನ್ಯಾ. ರಮಣ ಅವರು ನ್ಯಾಯಾಂಗ ವಿಮರ್ಶೆಯನ್ನು 'ನ್ಯಾಯಾಂಗ ಅತಿಕ್ರಮಣ' ಎಂದು ಬಿಂಬಿಸುವುದು ತಪ್ಪು ಎಂಬುದಾಗಿ ಹೇಳಿದರು.
CJI NV Ramana, Parliament

CJI NV Ramana, Parliament

ಸರ್ಕಾರದ ಮನಸೋಇಚ್ಛೆಯ ಕ್ರಮಗಳಿಗೆ ಜನಪ್ರಿಯ ಬಹುಮತ ಎಂಬುದು ರಕ್ಷಣೆಯಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ತಿಳಿಸಿದ್ದಾರೆ.

ವಿಜಯವಾಡದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ದಿವಂಗತ ಶ್ರೀ ಲವು ವೆಂಕಟೇಶ್ವರಲು ಸ್ಮಾರಕ ಐದನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಭಾರತೀಯ ನ್ಯಾಯಾಂಗ-ಭವಿಷ್ಯದ ಸವಾಲುಗಳು' ವಿಷಯದ ಕುರಿತು ಅವರು ಮಾತನಾಡಿದರು.

ಸರ್ಕಾರ ಮತ್ತು ಸಂಸತ್ತಿನ ಪ್ರತಿಯೊಂದು ಕ್ರಿಯೆಯೂ ಸಂವಿಧಾನಬದ್ಧವಾಗಿ ನಡೆಯಬೇಕು. ನ್ಯಾಯಾಂಗ ಪರಾಮರ್ಶೆಯ ಅಧಿಕಾರದಿಂದ ಅದನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ನ್ಯಾಯಾಂಗಕ್ಕೆ ವಹಿಸಲಾಗಿದೆ ಎಂದು ಸಿಜೆಐ ಹೇಳಿದರು.

Also Read
ರಾಷ್ಟ್ರೀಯ ಕಾನೂನು ವಿವಿಗಳ ಕೆಲವೇ ಕೆಲವು ಪದವೀಧರರು ದಾವೆ ಕ್ಷೇತ್ರ ಆಯ್ದುಕೊಳ್ಳುತ್ತಾರೆ: ಸಿಜೆಐ ಎನ್‌ ವಿ ರಮಣ ಬೇಸರ

"ಸರ್ಕಾರದ ಮನಸೋಇಚ್ಛೆಯ ಕ್ರಮಗಳಿಗೆ ಜನಪ್ರಿಯ ಬಹುಮತವು ರಕ್ಷಣೆಯಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಪ್ರತಿಯೊಂದು ಕ್ರಿಯೆಯೂ ಕಡ್ಡಾಯವಾಗಿ ಸಂವಿಧಾನಕ್ಕೆ ಬದ್ಧವಾಗಿರಬೇಕು. ನ್ಯಾಯಾಂಗವು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಹೊಂದಿರದೇ ಇದ್ದರೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಯೋಚಿಸಲಾಗದು ”ಎಂದು ಅವರು ಹೇಳಿದರು.

ಅಲ್ಲದೆ "ಕಾರ್ಯಾಂಗದ ವತಿಯಿಂದ ನ್ಯಾಯಾಲಯದ ಆದೇಶಗಳನ್ನು ಕಡೆಗಣಿಸುವ ಮತ್ತು ಅಗೌರವಿಸುವ ಪ್ರವೃತ್ತಿ ಬೆಳೆಯುತ್ತಿದೆ" ಎಂದು ಅವರು ಹೇಳಿದರು.

ಇದು ಎಲ್ಲರಿಗೂ ತಿಳಿದಿರುವ ಸತ್ಯ. ಸರ್ಕಾರದ ಮನಸೋಇಚ್ಛೆಯ ಕ್ರಮಗಳಿಗೆ ಜನಪ್ರಿಯ ಬಹುಮತವು ರಕ್ಷಣೆಯಲ್ಲ.

ನ್ಯಾ. ಎನ್‌ ವಿ ರಮಣ, ಸಿಜೆಐ

ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಂಗ ವಿಮರ್ಶೆಯನ್ನು ಸಾಮಾನ್ಯವಾಗಿ 'ನ್ಯಾಯಾಂಗ ಅತಿಕ್ರಮಣ' ಎಂದು ಹೇಗೆ ಬಿಂಬಿಸಲಾಗುತ್ತದೆ ಎಂಬುದರ ಕುರಿತು ಅವರು ಮಾತನಾಡಿದರು.

"ಇಂತಹ ಸಾಮಾನ್ಯೀಕರಣಗಳು ತಪ್ಪುದಾರಿಗೆಳೆಯುತ್ತವೆ. ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಸಮಾನ ಅಂಗಗಳನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ ಇತರ ಎರಡು ಅಂಗಗಳು ತೆಗೆದುಕೊಂಡ ಕ್ರಮಗಳ ಕಾನೂನುಬದ್ಧತೆಯನ್ನು ಪರಿಶೀಲಿಸುವ ಪಾತ್ರವನ್ನು ನ್ಯಾಯಾಂಗಕ್ಕೆ ನೀಡಲಾಗಿದೆ” ಎಂದು ಅವರು ಹೇಳಿದರು.

ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯನ್ನು ನಿರ್ಬಂಧಿಸಲು ಅಧಿಕಾರ ವಿಭಜನೆಯ ಪರಿಕಲ್ಪನೆಯನ್ನು ಬಳಸಲಾಗದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

Also Read
ಕಣ್ಮರೆಯಾಗುತ್ತಿರುವ ತನಿಖಾ ಪತ್ರಿಕೋದ್ಯಮ: ಮಾಧ್ಯಮಗಳ ಆತ್ಮಾವಲೋಕನಕ್ಕೆ ಕರೆ ನೀಡಿದ ಸಿಜೆಐ ಎನ್ ವಿ ರಮಣ

"ಈ ಪರಿಕಲ್ಪನೆಯು ಪ್ರಾಮಾಣಿಕ ಕಾನೂನು ಕ್ರಮಗಳನ್ನು ಮಾತ್ರ ರಕ್ಷಿಸುತ್ತದೆ. ಪ್ರಜಾಪ್ರಭುತ್ವದ ಸುಗಮ ಕೆಲಸಗಳಿಗಾಗಿ ಶಾಸಕಾಂಗ ಮತ್ತು ಕಾರ್ಯಾಂಗ ಕ್ಷೇತ್ರಗಳು ಸಂವಿಧಾನದ ಅಡಿಯಲ್ಲಿ ತಮ್ಮ ಮಿತಿಗಳನ್ನು ಗುರುತಿಸಿಕೊಳ್ಳುವ ಅಗತ್ಯವಿದೆ" ಎಂದು ಅವರು ಹೇಳಿದರು.

ನ್ಯಾಯಾಂಗ ವಿಮರ್ಶೆಯನ್ನು 'ನ್ಯಾಯಾಂಗ ಅತಿಕ್ರಮಣ' ಎಂದು ಬ್ರಾಂಡ್ ಮಾಡುವುದು ದಾರಿತಪ್ಪಿದ ಸಾಮಾನ್ಯೀಕರಣ.

ಸಿಜೆಐ ಎನ್‌ವಿ ರಮಣ

ನ್ಯಾಯಾಂಗವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಬದಲಾಗುತ್ತಿರುವ ಕಾಲದಿಂದಾಗಿ ಕೆಲ ಸವಾಲುಗಳು ಎದುರಾಗಿದ್ದರೆ, ಇನ್ನೂ ಕೆಲವು ಸವಾಲುಗಳನ್ನು ಈಗಾಗಲೇ ನಾವು ಎದುರಿಸುತ್ತಿದ್ದೇವೆ. ಇಂತಹುವುಗಳಲ್ಲಿ ಒಂದು ಕಾರ್ಯಾಂಗದ ಅಸಹಕಾರ ಎಂದರು.

ತನ್ನ ನಿರ್ದೇಶನಗಳನ್ನು ಜಾರಿಗೊಳಿಸಲು ಬಲಪ್ರಯೋಗ ಅಥವಾ ಹಣಪ್ರಯೋಗ ಮಾಡುವ ಶಕ್ತಿ ನ್ಯಾಯಾಲಯಗಳಿಗೆ ಇಲ್ಲ ಎಂದು ಅವರು ವಿವರಿಸಿದರು. "ಕಾರ್ಯಗತಗೊಂಡಾಗ ಮಾತ್ರ ನ್ಯಾಯಾಲಯದ ಆದೇಶಗಳು ಚೆನ್ನಾಗಿರುತ್ತವೆ. ದೇಶದಲ್ಲಿ ನ್ಯಾಯಿಕ ಆಡಳಿತ ಚಾಲ್ತಿಯಲ್ಲಿರಲು ಕಾರ್ಯಾಂಗ ಸಹಾಯ ಮತ್ತು ಸಹಕಾರ ನೀಡಬೇಕಾಗುತ್ತದೆ. ಆದರೂ, ನ್ಯಾಯಾಲಯದ ಆದೇಶಗಳನ್ನು ಕಾರ್ಯಾಂಗ ನಿರ್ಲಕ್ಷಿಸುವ ಮತ್ತು ಅಗೌರವಿಸುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ನ್ಯಾಯವನ್ನು ಒದಗಿಸುವುದು ಕೇವಲ ನ್ಯಾಯಾಂಗದ ಜವಾಬ್ದಾರಿಯಲ್ಲ ಎಂದ ಅವರು "ಇತರ ಎರಡು ಸಮನ್ವಯ ಅಂಗಗಳು ನ್ಯಾಯಾಂಗದ ಖಾಲಿ ಹುದ್ದೆಗಳನ್ನು ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡದೆ, ಪ್ರಾಸಿಕ್ಯೂಟರ್‌ ನೇಮಕ, ಮೂಲಸೌಕರ್ಯ ಬಲವರ್ಧನೆ ಹಾಗೂ ಖಚಿತ ದೂರದೃಷ್ಟಿ ಮತ್ತು ಮಧ್ಯಸ್ಥಗಾರರ ವಿಶ್ಲೇಷಣೆಯೊಂದಿಗೆ ಕಾನೂನು ರೂಪಿಸದೆ, ನ್ಯಾಯಾಂಗವನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುಲಾಗದು" ಎಂದು ಸಿಜೆಐ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಇಲ್ಲಿ ಓದಿ:

Attachment
PDF
Sri_Lavu_Venkateswarlu_Endowment_Lecture.pdf
Preview

Related Stories

No stories found.
Kannada Bar & Bench
kannada.barandbench.com