ಬಾಣಂತಿ ಸನ್ನಿ ಎಂಬ ಏಕೈಕ ಕಾರಣಕ್ಕೆ ಮಗುವನ್ನು ತಾಯಿಯ ಸುಪರ್ದಿಯಿಂದ ಶಾಶ್ವತವಾಗಿ ಹಿಂಪಡೆಯುವಂತಿಲ್ಲ ಎಂದು ಈಚೆಗೆ ತಿಳಿಸಿರುವ ಕೇರಳ ಹೈಕೋರ್ಟ್ ಮಗುವನ್ನು ಪರಿತ್ಯಕ್ತ ಪತ್ನಿಯ ಬದಲು ಮಗುವಿನ ತಂದೆಗೆ ನೀಡುವ ಆದೇಶ ರದ್ದುಗೊಳಿಸಿದೆ.
ಕೌಟುಂಬಿಕ ನ್ಯಾಯಾಲಯದ ತೀರ್ಪು ತಾಯಿ ಬಾಣಂತಿ ಸನ್ನಿಯಿಂದ ಬಳಲುತ್ತಿದ್ದಾರೆ ಎಂಬ ಕುರಿತಂತೆ ಫೆಬ್ರವರಿ 2023ರಷ್ಟು ಹಳೆಯ ವೈದ್ಯಕೀಯ ದಾಖಲೆ ಆಧರಿಸಿದೆ ಎಂದು ನ್ಯಾಯಾಲಯ ಹೇಳಿದೆ.
ತಾಯಿ ಈಗಲೂ ಬಾಣಂತಿ ಸನ್ನಿಯಿಂದ ಬಳಲುತ್ತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಇನ್ನಷ್ಟು ತನಿಖೆ ನಡೆಸಬೇಕಿತ್ತು ಎಂದು ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ಎಂ ಬಿ ಸ್ನೇಹಲತಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
"ಅರ್ಜಿದಾರೆ- ಪತ್ನಿ ಇನ್ನೂ ಬಾಣಂತಿ ಸನ್ನಿಯಿಂದ ಬಳಲುತ್ತಿದ್ದು ಮಗುವಿನ ಆರೈಕೆಗೆ ಸಿದ್ಧರಿಲ್ಲ ಎಂಬ ಆರೋಪವನ್ನು ನಿಸ್ಸಂಶಯವಾಗಿ ದೃಢ ಮತ್ತು ವಿಶ್ವಾಸಾರ್ಹ ವಿಧಾನಗಳ ಮೂಲಕ ಸಾಬೀತುಪಡಿಸಬೇಕಿತ್ತು. ಆದರೆ ನಮ್ಮ ದೃಢ ದೃಷ್ಟಿಯಲ್ಲಿ ಕೌಟುಂಬಿಕ ನ್ಯಾಯಾಲಯ ಅದನ್ನು ಗಮನಿಸಿಲ್ಲ. ಬದಲಿಗೆ ಕೇವಲ ಹಳೆಯ ದಾಖಲೆಗಳನ್ನು ಆಧರಿಸಿ ಅದು ತೀರ್ಪು ನೀಡಿದೆ" ಎಂಬುದಾಗಿ ನ್ಯಾಯಾಲಯ ವಿವರಿಸಿದೆ.
ಬಾಣಂತಿ ಸನ್ನಿ ಸಾಮಾನ್ಯ ಮತ್ತು ತಾತ್ಕಾಲಿಕ ಸ್ಥಿತಿಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. "ಬಾಣಂತಿ ಸನ್ನಿ ಕೆಲವು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಮತ್ತು ಇದು ಶಾಶ್ವತವಾಗಿ ಮುಂದುವರಿಯುವ ಪರಿಸ್ಥಿತಿಯಲ್ಲ ಎಂದು ವೈಜ್ಞಾನಿಕ ಅಧ್ಯಯನಗಳ ಮುಖೇನ ಸುಸ್ಥಾಪಿತ ಕಾನೂನಿನ ಮೂಲಕ ಈಗಾಗಲೇ ಇತ್ಯರ್ಥಗೊಂಡಿದೆ ಎಂಬುದನ್ನು ಅರಿಯಬೇಕು" ಎಂದು ನವೆಂಬರ್ 8ರ ಆದೇಶ ಹೇಳಿದೆ.
ಪ್ರಸವೋತ್ತರ ಖಿನ್ನತೆ ಸೇರಿದಂತೆ ತಾಯಿಯ (ಪರಿತ್ಯಕ್ತ ಪತ್ನಿ) ಮನೋವೈದ್ಯಕೀಯ ಅಸ್ವಸ್ಥತೆಗಳು ತನ್ನ ಒಂದು ವರ್ಷದ ಮಗುವನ್ನು ನೋಡಿಕೊಳ್ಳಲು ಅನರ್ಹವಾಗುವಂತೆ ಮಾಡಿದೆ ಎಂದು ದೂರಿ ಕೌಟುಂಬಿಕ ನ್ಯಾಯಾಲಯಕ್ಕೆ ಆಕೆಯ ಪತಿ ಅರ್ಜಿ ಸಲ್ಲಿಸಿದ್ದರು. ಕೆಲ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ್ದ ಕೌಟುಂಬಿಕ ನ್ಯಾಯಾಲಯ ತಂದೆಯೇ ಮಗುವನ್ನು ಶಾಶ್ವತವಾಗಿ ಪಾಲನೆ ಮಾಡುವಂತೆ ಆದೇಶಿಸಿತ್ತು.
ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ತಾಯಿ ತಾನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದೇನೆ ಎಂಬುದು ಆಧಾರರಹಿತ ಎಂದು ವಾದಿಸಿದರು. ಈಗಲೂ ಮಗುವನ್ನು ತಾನು ಪೋಷಿಸುತ್ತಿದ್ದು ಮಗು ತನ್ನ ತಂದೆ ಬಳಿಗೆ ತೆರಳಲು ಬಯಸದು. ಮಗುವಿಗೆ ತಾಯಿಯ ಆರೈಕೆ ಇಲ್ಲದಂತೆ ಮಾಡುವುದು ಗಮನಾರ್ಹ ಭಾವನಾತ್ಮಕ ಆಘಾತ ಉಂಟು ಮಾಡುತ್ತದೆ. ಬಾಣಂತಿ ಸನ್ನಿ ಆರೋಪ ತನ್ನ ಈಗಿನ ಮಾನಸಿಕ ಸ್ಥಿತಿಯನ್ನು ಬಿಂಬಿಸುವುದಿಲ್ಲ ಎಂದು ಅವರು ಹೇಳಿದ್ದರು.
ಅಲ್ಲದೆ ತಾನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂಬುದನ್ನು ಸಾರಲು ವೈದ್ಯಕೀಯ ತಪಾಸಣೆಗೂ ಸಿದ್ಧ ಎಂದಿದ್ದರು. ಅಂತೆಯೇ ಆಕೆಯ ಮಾನಸಿಕ ಸ್ವಾಸ್ಥ್ಯದ ಕುರಿತು ವರದಿ ನೀಡುವಂತೆ ಎರ್ನಾಕುಲಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಮಂಡಳಿಗೆ ಹೈಕೋರ್ಟ್ ಸೂಚಿಸಿತ್ತು. ವರದಿ ನೀಡಿದ್ದ ವೈದ್ಯಕೀಯ ಮಂಡಳಿ ಆಕೆಯಲ್ಲಿ ಮಹತ್ವದ ಮಾನಸಿಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ ಎಂದಿತ್ತು.
ಮಗುವನ್ನು ನೋಡಿಕೊಳ್ಳಲು ತಾಯಿ ಅನರ್ಹರು ಎಂದು ತೀರ್ಮಾನಕ್ಕೆ ಬರಲು ಕೌಟುಂಬಿಕ ನ್ಯಾಯಾಲಯ ಹಳೆಯ ವೈದ್ಯಕೀಯ ಪುರಾವೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಹೈಕೋರ್ಟ್ ಅಂತಿಮವಾಗಿ ತೀರ್ಮಾನಿಸಿತು. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿದ ಅದು ಎರಡೂ ಕಡೆಯವರನ್ನು ಪುನಃ ಆಲಿಸಿ ಪ್ರಕರಣವನ್ನು ಮರುಪರಿಶೀಲಿಸುವಂತೆ ಆದೇಶಿಸಿತು.