ನ್ಯಾಯಾಂಗ ನಿಂದನಾ ಪ್ರಕರಣದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಭೂಷಣ್

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ತಮ್ಮ ಎರಡು ಟ್ವೀಟ್‌ ಗಳಿಂದ ಕಳೆದ ಆಗಸ್ಟ್‌ ನಲ್ಲಿ ಸುಪ್ರೀಂ ಕೋರ್ಟ್‌ ನ ತ್ರಿಸದಸ್ಯ ಪೀಠದಿಂದ ನ್ಯಾಯಾಂಗ ನಿಂದನಾ ಶಿಕ್ಷೆಗೆ ಗುರಿಯಾಗಿದ್ದಾರೆ.
Prashant Bhushan was fined Re 1 for contempt of court
Prashant Bhushan was fined Re 1 for contempt of court
Published on

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನಾ ಶಿಕ್ಷೆಗೆ ಗುರಿಯಾಗಿರುವವರು, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಒಳಗೊಂಡು ಎಲ್ಲರೂ ಇಂಟ್ರಾ ಕೋರ್ಟ್ (ವಿಸ್ತೃತವಾದ ಮತ್ತು ಬೇರೆಯ ಸುಪ್ರೀಂ ಕೋರ್ಟ್ ಪೀಠ) ಮೇಲ್ಮನವಿ ಹಕ್ಕು ಹೊಂದಿದ್ದಾರೆ ಎಂದು ಘೋಷಿಸುವಂತೆ ಕೋರಿ ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಹಿಂದಿನ ಸಿಜೆಐಗಳ ವಿರುದ್ಧ ಮಾಡಿದ್ದ ಎರಡು ಟ್ವೀಟ್‌ಗಳಿಗಾಗಿ ಕಳೆದ ಆಗಸ್ಟ್‌ನಲ್ಲಿ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ತ್ರಿಸದಸ್ಯ ಪೀಠವು ಭೂಷಣ್ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಬಳಿಕ ಅವರಿಗೆ ಸಾಂಕೇತಿಕವಾಗಿ ₹1 ಜುಲ್ಮಾನೆಯನ್ನೂ ನ್ಯಾಯಾಲಯ ವಿಧಿಸಿತ್ತು.

ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ವ್ಯಕ್ತಿಯು ಇಂಟ್ರಾ ಕೋರ್ಟ್ ಮೇಲ್ಮನವಿ ಸಲ್ಲಿಸಲು ಮತ್ತು ಅದನ್ನು ವಿಸ್ತೃತ ಪೀಠ ಆಲಿಸಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಭೂಷಣ್ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಮೂಲ ನ್ಯಾಯಾಂಗ ನಿಂದನಾ ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟದ್ದರ ವಿರುದ್ಧ ಇಂಟ್ರಾ ಕೋರ್ಟ್ ಮೇಲ್ಮನವಿಗೆ ಸಂಬಂಧಿಸಿದಂತೆ ನಿಯಮ ಮತ್ತು ಮಾರ್ಗಸೂಚಿ ರೂಪಿಸಲು ನಿರ್ದೇಶಿಸುವಂತೆ ಭೂಷಣ್ ಪರ ವಕೀಲೆ ಕಾಮಿನಿ ಜೈಸ್ವಾಲ್ ಮನವಿ ಮಾಡಿದ್ದಾರೆ.

ಸದರಿ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ವಿಭಿನ್ನ ಪೀಠದ ಮೂಲಕ ನಡೆಸುವಂತೆ ಭೂಷಣ್ ಕೋರಿದ್ದಾರೆ. ಭಾರತದ ಸಂವಿಧಾನದ ಪರಿಚ್ಛೇದ 14, 19 ಮತ್ತು 21ರ ಅಡಿ ಖಾತರಿ ಪಡಿಸಿರುವಂತೆ ಮೂಲಭೂತ ಹಕ್ಕನ್ನು ಕಾಪಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅಸ್ತಿತ್ವದಲ್ಲಿರುವ ಕಾನೂನುಗಳು ಭೂಷಣ್ ಅವರ ಕೋರಿಕೆಗಳಿಗೆ ವಿರುದ್ಧವಾಗಿಲ್ಲ. ಬದಲಿಗೆ “ ಇಂತಹ ಕಾರ್ಯವಿಧಾನವನ್ನು ಜಾರಿಗೊಳಿಸುವುದು ನ್ಯಾಯಾಂಗ ನಿಂದನಾ ಕಾಯಿದೆ-1971ರ ಆಶಯಗಳಿಗೆ ಪೂರಕವಾಗಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ಸೀಮಿತ ತಳಹದಿಯ ಮೇಲೆ ಸುಪ್ರೀಂ ಕೋರ್ಟ್‌ನ ಕೆಲವು ಅಂತಿಮ ತೀರ್ಪುಗಳ ವಿರುದ್ಧ ಈ ಗೌರವಾನ್ವಿತ ನ್ಯಾಯಾಲಯವು ಹಿಂದೆ ಮರಣ ದಂಡನೆಯಂಥ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನಿಯಮಗಳನ್ನು ರೂಪಿಸಿದೆ. ಅಲ್ಲದೇ ಕ್ಯೂರೇಟಿವ್ ಅರ್ಜಿಯ ರೂಪದಲ್ಲಿ ವಿಶೇಷ ಪರಿಹಾರನ್ನೂ ಸೂಚಿಸಿದೆ,” ಎಂದು ಮನವಿಯಲ್ಲಿ ವಿವರಿಸಲಾಗಿದೆ.

“... ಹಿತಾಸಕ್ತಿಯ ಸಂಘರ್ಷ ಅಂತರ್ಗತವಾಗಿದೆ ಎಂಬುದನ್ನು ಪರಿಗಣಿಸಿ ನ್ಯಾಯಾಂಗ ನಿಂದನಾ ದೋಷಿಯ ಸ್ವಾತಂತ್ತ್ಯಕ್ಕೆ ಅಪಾಯವಿರುವುದರಿಂದ ಕೆಲವು ಮೂಲಭೂತ ಸುರಕ್ಷತಾ ಕ್ರಮಗಳನ್ನು ರೂಪಿಸುವುದು ಅಗತ್ಯವಾಗಿದ್ದು, ಅದರಿಂದ ಅನಿಯಂತ್ರಿತ, ಪ್ರತೀಕಾರತೆಯಿಂದ ಕೂಡಿದ ಮತ್ತು ಸ್ವೇಚ್ಛಾಚಾರದಿಂದ ಕೂಡಿದ ತೀರ್ಮಾನಗಳನ್ನು ಮಿತಿಗೊಳಿಸುವ ಸಾಧ್ಯತೆ ಇರುತ್ತದೆ.”

“ಆರೋಪಿಯನ್ನು ದೋಷಿ ಎಂದು ಘೋಷಿಸಿ ಆತನಿಗೆ ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗೆ ಅಗಾಧವಾದ ಮತ್ತು ಅನಿಯಂತ್ರಿತ ಅಧಿಕಾರವಿರುತ್ತದೆ. ಯಾರೂ ಏಕಕಾಲಕ್ಕೆ ಅರ್ಜಿದಾರ ಮತ್ತು ನ್ಯಾಯಮೂರ್ತಿಯಾಗಲಾಗದು. ಆದ್ದರಿಂದ ಅಂತರ ನ್ಯಾಯಾಲಯದಲ್ಲಿ ಮೇಲ್ಮನವಿಗೆ ಅವಕಾಶ ಕಲ್ಪಿಸಬೇಕು.”

“ಕ್ರಿಮಿನಲ್ ನ್ಯಾಯಾಂಗ ನಿಂದನೆಯಲ್ಲಿ ದೋಷಿಯಾದಾತ ಹೇಳುವ “ಸತ್ಯ”ವನ್ನು ಮೊದಲಿಗೆ ನ್ಯಾಯಾಲಯ ಒಪ್ಪದಿರಬಹುದು. ವಿಸ್ತೃತ ಅಥವಾ ವಿಭಿನ್ನ ಪೀಠವು ಅದನ್ನು ವಾಸ್ತವದಿಂದ ಕೂಡಿದ ಸರಿಯಾದ ಮಾಹಿತಿ ಎಂದು ಪರಿಗಣಿಸಬಹುದು. ಇಂಥ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕು ಸಿಗದಿದ್ದರೆ, ವಾಸ್ತವವನ್ನು ಸತ್ಯ ಎಂದು ನಿರ್ಣಯಿಸಲ್ಪಡುವ ಹಕ್ಕು ಕಳೆದುಹೋಗಲಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
ಭ್ರಷ್ಟಾಚಾರದ ಬಗ್ಗೆ ಚರ್ಚಿಸದಿದ್ದರೆ, ನ್ಯಾಯಾಂಗದಲ್ಲಿ ಸುಧಾರಣೆ ತರುವುದು ಹೇಗೆ? ಪ್ರಶಾಂತ್ ಭೂಷಣ್

ನ್ಯಾಯಾಂಗವನ್ನು ವಿಮರ್ಶಿಸಿದ್ದ ಪ್ರಶಾಂತ್ ಭೂಷಣ್ ಅವರ ಎರಡು ಟ್ವೀಟ್‌ಗಳನ್ನು ಆಧರಿಸಿದ ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿತ್ತು. ಬಳಿಕ ಭೂಷಣ್ ಅವರಿಗೆ ಬೇಷರತ್ ಕ್ಷಮೆ ಕೋರಲು ನ್ಯಾಯಾಲಯವು ಅವಕಾಶ ಮಾಡಿಕೊಟ್ಟಿತ್ತು. ಆದರೆ, ಅವರು ಕ್ಷಮೆ ಕೋರಲು ನಿರಾಕರಿಸಿದ್ದರಿಂದ ಆಗಸ್ಟ್‌ 31ರಂದು ಶಿಕ್ಷೆ ಪ್ರಕಟಿಸುವ ಮೂಲ ಅವರಿಗೆ ಸಾಂಕೇತಕವಾಗಿ ₹1 ಜುಲ್ಮಾನೆ ವಿಧಿಸಿತ್ತು.

Kannada Bar & Bench
kannada.barandbench.com