ಬಿಹಾರದಲ್ಲಿ ಮಹಿಳೆಯರಿಗೆ ₹10,000 ನಗದು: ಸುಪ್ರೀಂ ಕೋರ್ಟ್‌ನಲ್ಲಿ ಜನ್‌ ಸುರಾಜ್ ಪಕ್ಷದ ತಕರಾರು

ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯ ಸರ್ಕಾರ ಹೊಸ ಯೋಜನೆ ಆರಂಭಿಸಿತ್ತು. ಅದರಡಿ ಆಡಳಿತರೂಢ ಪಕ್ಷ ಮಹಿಳಾ ಫಲಾನುಭವಿಗಳ ಖಾತೆಗೆ ₹10,000 ವರ್ಗಾಯಿಸಿತು ಎಂದು ಪಕ್ಷ ದೂರಿದೆ.
Prashant Kishor, Jan Suraaj Party, Supreme Court
Prashant Kishor, Jan Suraaj Party, Supreme Court
Published on

2025ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಸರ್ಕಾರದ ಕಲ್ಯಾಣ ಯೋಜನೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿ ಚುನಾವಣಾ ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಸ್ಥಾಪಿಸಿರುವ ಜನ್‌ ಸುರಾಜ್‌ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ [ಜನ್‌ ಸುರಾಜ್‌ ಪಕ್ಷ ಮತ್ತು ಭಾರತೀಯ ಚುನಾವಣಾ ಆಯೋಗ ನಡುವಣ ಪ್ರಕರಣ].

 2025ರ ಚುನಾವಣೆ ವೇಳೆ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ 242 ಕ್ಷೇತ್ರಗಳಲ್ಲಿ ಕಿಶೋರ್‌ ಅವರ ಪಕ್ಷ ಸ್ಪರ್ಧಿಸಿತ್ತಾದರೂ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಗಿತ್ತು.

Also Read
ಸಿದ್ಧತೆ ಮಾಡಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವ ಸರ್ಕಾರದ ವಕೀಲರು ವಿಚಾರಣೆ ವೇಳೆ ಬಾಯಿ ಬಿಡಲ್ಲ: ಸಿಎಂ ಅಸಮಾಧಾನ

ಚುನಾವಣೆಯ ಹೊಸ್ತಿಲಿನಲ್ಲಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಆರಂಭಿಸಿದ ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಯಡಿ ಸ್ವಯಂ ಉದ್ಯೋಗ ಆರಂಭಿಸಲು ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ನೇರವಾಗಿ ₹10,000 ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೌಲ್ಯಮಾಪನದ ನಂತರ ಹೆಚ್ಚುವರಿಯಾಗಿ ₹2 ಲಕ್ಷ ನೀಡುವ ಭರವಸೆಯನ್ನೂ ಒದಗಿಸಲಾಗಿತ್ತು. ಜೀವಿಕಾ ಎಂಬ ಮಹಿಳಾ ಸ್ವಸಹಾಯ ಸಂಘಗಳ ಜಾಲದ ಮೂಲಕ ಹಣ ವಿತರಿಸಲಾಗಿತ್ತು. ಜೀವಿಕಾ ಸದಸ್ಯರಲ್ಲದ ಮಹಿಳೆಯರೂ ಈ ಪ್ರಯೋಜನ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಜೀವಿಕಾ ಯೋಜನೆಯೊಂದಿಗೆ ಒಂದು ಕೋಟಿ ಮಹಿಳೆಯರು ಸಂಪರ್ಕ ಹೊಂದಿದ್ದರೆ, ನಂತರದ ಪತ್ರಿಕಾ ವರದಿಗಳ ಪ್ರಕಾರ ಒಟ್ಟು 1.56 ಕೋಟಿ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಪಕ್ಷ ದೂರಿದೆ.

ಇದರಿಂದಾಗಿ, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಮತ್ತು ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿಯೇ ಹೊಸ ಫಲಾನುಭವಿಗಳನ್ನು ಸೇರಿಸಿ ಹಣ ಪಾವತಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಚುನಾವಣಾ ಅವಧಿಯಲ್ಲಿ ನಗದು ಸವಲತ್ತು ಬಿಡುಗಡೆ ಮಾಡಿರುವುದು ಆಡಳಿತಾರೂಢ ಸರ್ಕಾರದ ಪರವಾಗಿ ಮತದಾರರನ್ನು ಅನ್ಯಾಯವಾಗಿ ಪ್ರಭಾವಿತಗೊಳಿಸುವ ಸಲುವಾಗಿ ನಡೆಸುವ ಭ್ರಷ್ಟ ಆಚರಣೆಯಾಗಿದೆ. ಇದರಿಂದ ಇತರ ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶ ನಿರಾಕರಿಸಲ್ಪಟ್ಟಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲ ತತ್ವಕ್ಕೆ ಧಕ್ಕೆಯಾಗಿದೆ ಎಂದು ಅರ್ಜಿ ದೂರಿದೆ.

ಅರ್ಜಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಪಾತ್ರವನ್ನೂ ಪ್ರಶ್ನಿಸಲಾಗಿದೆ. ಯೋಜನೆಯ ಫಲಾನುಭವಿಗಳಾದ ಅನೇಕ ಮಹಿಳೆಯರನ್ನು, ಅವರು ಈಗಾಗಲೇ ನಗದು ಪ್ರಯೋಜನ ಪಡೆದಿದ್ದರೂ, ಮತದಾನದ ಎರಡೂ ಹಂತಗಳಲ್ಲಿ ಮತಗಟ್ಟೆಗಳಲ್ಲಿ ನಿಯೋಜಿಸಲಾಗಿದೆ ಎಂದು ಆರೋಪಿಸಲಾಗಿದೆ.

Also Read
"ಇದು ಎಲೆಕ್ಷನ್‌ ಕಮಿಷನ್‌ ಅಲ್ಲ, ವಾಟ್ಸಾಪ್‌ ಕಮಿಷನ್‌" ಸುಪ್ರೀಂನಲ್ಲಿ ಮಮತಾ ಆಕ್ರೋಶ; ಇಸಿಐ ನಡೆಗೆ ತೀವ್ರ ಅಸಮಾಧಾನ

ಅರ್ಜಿಯಲ್ಲಿನ ಮತ್ತೊಂದು ಪ್ರಮುಖ ಆಕ್ಷೇಪ, ಈ ಯೋಜನೆಗೆ ಹಣಕಾಸು ಒದಗಿಸಿದ ವಿಧಾನಕ್ಕೆ ಸಂಬಂಧಿಸಿದೆ. ಈ ಕಾರ್ಯಕ್ರಮವನ್ನು ವಿಧಾನಮಂಡಲದ ಅನುಮೋದನೆ ಇಲ್ಲದೆ ಕೇವಲ ಸಚಿವ ಸಂಪುಟದ ನಿರ್ಣಯದ ಮೂಲಕ ಅನುಮೋದಿಸಲಾಗಿದೆ ಮತ್ತು ಸಂವಿಧಾನದ ಕಲಂ 267ಕ್ಕೆ ವಿರುದ್ಧವಾಗಿ ರಾಜ್ಯದ ತುರ್ತು ನಿಧಿಯ ಹಣ ಪಾವತಿಸಲಾಗಿದೆ. ಈ ಯೋಜನೆ ಸಾಮಾನ್ಯ ಬಜೆಟ್ ಪ್ರಕ್ರಿಯೆಯ ಭಾಗವಾಗಿರಲಿಲ್ಲ ಎಂದೂ ತಿಳಿಸಲಾಗಿದೆ.

ಮಾದರಿ ನೀತಿ ಸಂಹಿತೆಯ ಸ್ಪಷ್ಟ ನಿರ್ದೇಶನಗಳಿದ್ದರೂ ಬಿಹಾರ ಸರ್ಕಾರವು ಚುನಾವಣಾ ಅವಧಿಯಲ್ಲಿ ನಗದು ವರ್ಗಾವಣೆ ಮುಂದುವರಿಸಿದ ಸಂದರ್ಭದಲ್ಲಿ ಚುನಾವಣಾ ಆಯೋಗ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಲು ವಿಫಲವಾಯಿತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅರ್ಜಿ ನಾಳೆ (ಶುಕ್ರವಾರ, ಫೆಬ್ರವರಿ 6) ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅರ್ಜಿಯನ್ನು ವಕೀಲ ಆದಿತ್ಯ ಸಿಂಗ್ ಮೂಲಕ ಸಲ್ಲಿಸಲಾಗಿದೆ.

Kannada Bar & Bench
kannada.barandbench.com