[ಪ್ರವೀಣ್‌ ನೆಟ್ಟಾರು ಪ್ರಕರಣ] ನಿಯೋಜಿತ ಪ್ರಾಧಿಕಾರಿಯ ಜಪ್ತಿ ಆದೇಶ ಕಾನೂನುಬಾಹಿರ: ಎನ್‌ಐಎ ವಿಶೇಷ ನ್ಯಾಯಾಲಯ

“ಮೇಲ್ಮನವಿದಾರರು ಸಲ್ಲಿಸುವ ಮನವಿಯನ್ನು ಪರಿಗಣಿಸಿ, ಅವರಿಗೆ ವಾದ ಮಂಡಿಸಲು ಅವಕಾಶ ಕಲ್ಪಿಸಿದ ಬಳಿಕ ಅಂತಿಮ ಆದೇಶ ಮಾಡಬೇಕು” ಎಂದು ನಿಯೋಜಿತ ಪ್ರಾಧಿಕಾರಿಗೆ ನ್ಯಾಯಾಲಯವು ನಿರ್ದೇಶಿಸಿದೆ.
Praveen Nettaru
Praveen Nettaru

ಮಂಗಳೂರಿನ ಬಿಜೆಪಿಯ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆಯ ವೇಳೆ ಬಂಟ್ವಾಳದ ಇಡಿಕಿಡು ಗ್ರಾಮದಲ್ಲಿರುವ ಫ್ರೀಡಂ ಎಜುಕೇಶನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ ಅನ್ನು ಪಿಎಫ್‌ಐ ಸಂಘಟನೆಯು ಉಗ್ರ ಚಟುವಟಿಕೆಗೆ ಬಳಸುತ್ತಿತ್ತು ಎಂಬ ಆರೋಪದ ಮೇಲೆ ಅದನ್ನು ಜಪ್ತಿ ಮಾಡಿರುವ ಮುಖ್ಯ ತನಿಖಾಧಿಕಾರಿಯ ಆದೇಶವು ಕಾನೂನುಬಾಹಿರ ಎಂದು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಈಚೆಗೆ ಅದನ್ನು ಬದಿಗೆ ಸರಿಸಿದೆ.

ಕೇಂದ್ರ ಗೃಹ ಇಲಾಖೆಯ ನಿಯೋಜಿತ ಪ್ರಾಧಿಕಾರಿಯು ಏಪ್ರಿಲ್‌ 19ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಫ್ರೀಡಂ ಎಜುಕೇಶನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರು ಪುರಸ್ಕರಿಸಿದ್ದು, ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಕೇಂದ್ರ ಗೃಹ ಇಲಾಖೆಯ ನಿಯೋಜಿತ ಪ್ರಾಧಿಕಾರಕ್ಕೆ ಮರಳಿಸಿ, ಆದೇಶಿಸಿದೆ.

“ಮೇಲ್ಮನವಿದಾರರು ಸಲ್ಲಿಸುವ ಮನವಿಯನ್ನು ಪರಿಗಣಿಸಿ, ಅವರಿಗೆ ವಾದ ಮಂಡಿಸಲು ಅವಕಾಶ ಕಲ್ಪಿಸಿದ ಬಳಿಕ ಅಂತಿಮ ಆದೇಶ ಮಾಡಬೇಕು” ಎಂದು ನಿಯೋಜಿತ ಪ್ರಾಧಿಕಾರಿಗೆ ನ್ಯಾಯಾಲಯವು ನಿರ್ದೇಶಿಸಿದೆ.

“ಮೇಲ್ಮನವಿದಾರರು ಸಲ್ಲಿಸಿರುವ ಮನವಿಯನ್ನು ನಿಯೋಜಿತ ಪ್ರಾಧಿಕಾರಿಯು 2023ರ ಏಪ್ರಿಲ್‌ 17ರಂದು ಸ್ವೀಕರಿಸಿದ್ದಾರೆ ಎಂಬುದಕ್ಕೆ ಮೇಲ್ಮನವಿದಾರರು ದಾಖಲೆಗಳನ್ನು ಹಾಜರುಪಡಿಸಿದ್ದಾರೆ. ಮೇಲ್ಮನವಿದಾರರ ಮನವಿಯನ್ನು ಏಪ್ರಿಲ್‌ 19ರಂದು ಹೊರಡಿಸಿರುವ ಆದೇಶದಲ್ಲಿ ನಿಯೋಜಿತ ಪ್ರಾಧಿಕಾರಿಯು ಪರಿಗಣಿಸಬೇಕಿತ್ತು. ನಿಯೋಜಿತ ಪ್ರಾಧಿಕಾರಿಯು ಏಪ್ರಿಲ್‌ 3ರಂದು ಹೊರಡಿಸಿರುವ ಆದೇಶದಲ್ಲಿ ನಿಗದಿತ ಕಾಲಾವಧಿಯಲ್ಲಿ ಮನವಿ ಸಲ್ಲಿಸಬೇಕು ಎಂದು ಹೇಳಿದ್ದು, ಅದರ ಪ್ರಕಾರ ಮೇಲ್ಮನವಿದಾರರು ಮನವಿ ಸಲ್ಲಿಸಿದ್ದಾರೆ. ಅಂತಿಮ ಆದೇಶ ಹೊರಡಿಸುವುದಕ್ಕೂ ಮುನ್ನ ಮೇಲ್ಮನವಿದಾರರ ಮನವಿ ಸ್ವೀಕರಿಸಿದ್ದರೂ ಅದನ್ನು ಪ್ರಾಧಿಕಾರಿ ಪರಿಗಣಿಸಿಲ್ಲ. ಈ ಮೂಲಕ ಆಕ್ಷೇಪಾರ್ಹ ಆದೇಶ ಮಾಡಿ ಪ್ರಾಧಿಕಾರಿ ಪ್ರಮಾದ ಎಸಗಿದ್ದಾರೆ. ಹೀಗಾಗಿ, ಈ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿದ್ದು, ನಿಯೋಜಿತ ಪ್ರಾಧಿಕಾರಿಯು ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಆದೇಶಿಸಿಲು ಇದು ಸೂಕ್ತ ಪ್ರಕರಣವಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಪ್ರವೀಣ್‌ ನೆಟ್ಟಾರು ಕೊಲೆಯ ಹಿನ್ನೆಲೆಯಲ್ಲಿ 2022ರ ಜುಲೈ 27ರಂದು ಮಧುಕುಮಾರ್‌ ಅವರ ನೀಡಿದ ದೂರಿನ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರಿ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 302 ಜೊತೆಗೆ 34 ಅಡಿ ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆಯ ಹಂತದಲ್ಲಿ ಪ್ರಕರಣಕ್ಕೆ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ 17 ಮತ್ತು 18 ಅನ್ನು ಅನ್ವಯಿಸಿದ್ದರು. ತದನಂತರದಲ್ಲಿ ಪ್ರಕರಣದ ವಿಚಾರಣೆಯನ್ನು ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು. ಫ್ರೀಡಂ ಎಜುಕೇಶನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ ಅನ್ನು ಪಿಎಫ್‌ಐ ಉಗ್ರ ಚಟುವಟಿಕೆ ನಡೆಸಲು ಬಳಸುತ್ತಿದೆ ಎಂದು ಆರೋಪಿಸಿ ಎನ್‌ಐಎ ಮಹಾನಿರ್ದೇಶಕರ (ನಿಯೋಜಿತ ಪ್ರಾಧಿಕಾರಿ) ಪೂರ್ವಾನುಮತಿ ಪಡೆದು ಟ್ರಸ್ಟ್‌ನ ಆಸ್ತಿಯನ್ನು ಎನ್‌ಐಎ ತನಿಖಾಧಿಕಾರಿಯು ಜಪ್ತಿ ಮಾಡಿದ್ದರು. ಮುಖ್ಯ ತನಿಖಾಧಿಕಾರಿ (ಸಿಐಒ) ಮಾಹಿತಿ ಆಧರಿಸಿ, ನಿಯೋಜಿತ ಪ್ರಾಧಿಕಾರಿಯು 2023ರ ಏಪ್ರಿಲ್‌ 3ರಂದು ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ 10 ದಿನಗಳ ಒಳಗೆ ಮನವಿ ಸಲ್ಲಿಸಲು ಮೇಲ್ಮನವಿದಾರರಿಗೆ ಆದೇಶಿಸಿದ್ದರು.

ಇದರ ಬೆನ್ನಿಗೇ, ತಮ್ಮ ಸ್ಥಳಗಳನ್ನು ನಿಷೇಧಿತ ಪಿಎಫ್‌ಐ ಸಂಘಟನೆಯು ಉಗ್ರ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿತ್ತು ಎಂದು ಆರೋಪಿಸಿ ಅದನ್ನು ಜಪ್ತಿ ಮಾಡಿ ಗೃಹ ಇಲಾಖೆಯ ನಿಯೋಜಿತ ಪ್ರಾಧಿಕಾರಿಯಾದ ಹೆಚ್ಚುವರಿ ಕಾರ್ಯದರ್ಶಿ 2023ರ ಏಪ್ರಿಲ್‌ 19ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಫ್ರೀಡಂ ಎಜುಕೇಶನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

ಅರ್ಜಿದಾರರ ಪರವಾಗಿ ವಕೀಲ ಮೊಹಮ್ಮದ್‌ ತಾಹೀರ್‌, ಎನ್‌ಐಎ ಪರವಾಗಿ ವಕೀಲ ಪಿ ಪ್ರಸನ್ನಕುಮಾರ್‌ ವಾದಿಸಿದ್ದರು.

Attachment
PDF
Freedom Educational & Charitable Trust Vs Shanmugam.pdf
Preview

Related Stories

No stories found.
Kannada Bar & Bench
kannada.barandbench.com