
ಹಿಂದೂ ಉತ್ತರಾಧಿಕಾರ ಕಾಯಿದೆ- 1956ರ ಸೆಕ್ಷನ್ 22ರ ಅಡಿಯಲ್ಲಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಆದ್ಯತೆಯ ಹಕ್ಕನ್ನು ಅವಿಭಜಿತ ಹಿಂದೂ ಅವಿಭಕ್ತ ಕುಟುಂಬದಲ್ಲಿ ಸಹ-ಪಾಲುದಾರರು ಕೋರಬಹುದು ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಸ್ಪಷ್ಟಪಡಿಸಿದೆ.
ಸೆಕ್ಷನ್ 22ರ ಪ್ರಕಾರ, ಯಾವುದೇ ವರ್ಗ Iಕ್ಕೆ ಸೇರಿರುವ ಉತ್ತರಾಧಿಕಾರಿ ಜಂಟಿಯಾಗಿ ಒಡೆತನದ ಆಸ್ತಿಯಲ್ಲಿ (ಅಥವಾ ವ್ಯವಹಾರದಲ್ಲಿ) ತಮ್ಮ ಪಾಲನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ಬಯಸಿದರೆ, ಇತರ ಸಹ-ವರ್ಗ I ಉತ್ತರಾಧಿಕಾರಿಗಳು ಅಂತಹ ಆಸ್ತಿಯನ್ನು ಬೇರೆಯವರಿಗೆ ವರ್ಗಾವಣೆಗೆ ಲಭ್ಯವಾಗುವಂತೆ ಮಾಡುವ ಮೊದಲು ಅದನ್ನು ಖರೀದಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಆದ್ಯತೆಯ ಹಕ್ಕನ್ನು ಹೊಂದಿರುತ್ತಾರೆ.
ನ್ಯಾಯಮೂರ್ತಿ ಶೈಲೇಶ್ ಬ್ರಹ್ಮೆ ಅವರು ಇದೀಗ ಆಸ್ತಿ ಪೂರ್ವಜರದ್ದಾಗಿದ್ದು ವಿಭಜನೆಯಾಗದೆ ಉಳಿದಿರುವಾಗ, ಸೆಕ್ಷನ್ 22ರಲ್ಲಿ ಉಲ್ಲೇಖಿಸಿರುವಂತೆ " ವರ್ಗ I ಉತ್ತರಾಧಿಕಾರಿಗಳ" ಸ್ಥಿತಿಯನ್ನು ಅವಿಭಕ್ತ ಕುಟುಂಬದಲ್ಲಿ ಯಾವುದೇ ಒಬ್ಬ ತಕ್ಷಣದ ಮರಣ ಹೊಂದಿದ ಕುಟುಂಬ ಸದಸ್ಯರ ಬದಲಿಗೆ ಮೂಲ ಪೂರ್ವಜರನ್ನು (ಪ್ರಪೋಸಿಟಸ್) ಉಲ್ಲೇಖಿಸಿ ನಿರ್ಧರಿಸಬಹುದು ಎಂದು ತೀರ್ಪು ನೀಡಿದ್ದಾರೆ.
ಮೂವರು ಸಹೋದರರು ತಮ್ಮ ಚಿಕ್ಕಪ್ಪ ಮತ್ತು ಮಲಸಹೋದರರು ಅವಿಭಕ್ತ ಕುಟುಂಬದ ಆಸ್ತಿಯ ಪಾಲನ್ನು ಅಪರಿಚಿತರಿಗೆ ಮಾರಾಟ ಮಾಡುವ ಕ್ರಮವನ್ನು ವಿರೋಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿತು.
ವಾದಿಗಳ ತಂದೆ ನಿಧನರಾದ ನಂತರ ಮತ್ತು ಆಸ್ತಿಯಲ್ಲಿ ತಮ್ಮ ಪಾಲನ್ನು ಅವರು ಪಡೆದ ನಂತರ ಈ ಬೆಳವಣಿಗೆ ನಡೆದಿತ್ತು.
ಪ್ರತಿವಾದಿಗಳು ಮಾರಾಟ ಮಾಡಲು ಬಯಸಿದ ಆಸ್ತಿಯನ್ನು ಖರೀದಿಸಲು ತಮಗೆ ಆದ್ಯತೆಯ ಹಕ್ಕಿದೆ ಎಂದು ವಾದಿಗಳು ವಾದಿಸಿದರು, ಆದರೆ ಪ್ರತಿವಾದಿಗಳು ಅದನ್ನು ಅವರಿಗೆ ನಿರಾಕರಿಸಿದರು.
ವಿವಾದ ಹೈಕೋರ್ಟ್‌ಗೆ ತಲುಪುವ ಮೊದಲು ವಾದಿಗಳು ಎರಡು ಸುತ್ತಿನ ಮೊಕದ್ದಮೆಗಳನ್ನು ಗೆದ್ದಿದ್ದರು.
ಅಕ್ಟೋಬರ್ 17ರಂದು, ಹೈಕೋರ್ಟ್ ಕೂಡ ವಾದಿಗಳ ಪರವಾಗಿ ತೀರ್ಪು ನೀಡಿತು, ಪ್ರತಿವಾದಿಗಳು ಮಾರಾಟ ಮಾಡಲು ಬಯಸಿದ ಆಸ್ತಿಯನ್ನು ಖರೀದಿಸಲು ಸೆಕ್ಷನ್ 22ರ ಅಡಿಯಲ್ಲಿ ಅವರಿಗೆ ಆದ್ಯತೆಯ ಹಕ್ಕಿದೆ ಎಂದು ಹೇಳಿತು.
ನ್ಯಾಯಾಲಯದ ಈ ತೀರ್ಪು ಎಲ್ಲಾ ಪಕ್ಷಗಳು ಸಾಮಾನ್ಯ ಮೃತ ಪೂರ್ವಜರ (ಅರ್ಜಿದಾರರ ಅಜ್ಜ) ಸಹ ವರ್ಗ 1 ಉತ್ತರಾಧಿಕಾರಿಗಳು ಎಂಬ ಪ್ರಮೇಯವನ್ನು ಆಧರಿಸಿದೆ.
"ವಾದಿಗಳು ಜನ್ಮಸಿದ್ಧ ಹಕ್ಕನ್ನು ಹೊಂದಿರುವ ಸಹ-ಪಾಲುದಾರರು, ಮತ್ತು ಅವರ ಸ್ಥಾನಮಾನ ಅವರ ಚಿಕ್ಕಪ್ಪಂದಿರ (ಪ್ರತಿವಾದಿಗಳು 6 ಮತ್ತು 7) ಸ್ಥಾನಮಾನಕ್ಕೆ ಹೋಲುತ್ತದೆ. ನನ್ನ ಪರಿಗಣಿತ ಅಭಿಪ್ರಾಯದಲ್ಲಿ, ಅವರು ಕಾಯಿದೆಯ ಸೆಕ್ಷನ್ 22 ರ ಅಡಿಯಲ್ಲಿ ಆದ್ಯತೆಯ ಹಕ್ಕನ್ನು ಹೊಂದಿದ್ದಾರೆ " ಎಂದು ನ್ಯಾಯಮೂರ್ತಿ ಬ್ರಹ್ಮೆ ಹೇಳಿದರು.
ಬೀಡ್ ಜಿಲ್ಲೆಯ ಅಂಬಾಜೋಗೈ ತಾಲ್ಲೂಕಿನ ರಾಡಿ ಗ್ರಾಮದಲ್ಲಿರುವ ಕೃಷಿ ಭೂಮಿಗೆ ಸಂಬಂಧಿಸಿದ ಮೊಕದ್ದಮೆ ಇದಾಗಿದ್ದು, ಮೂಲತಃ ಈ ಆಸ್ತಿಗಳು ಕೇಶವ್ ಎಂಬುವರ ಒಡೆತನದಲ್ಲಿದ್ದು, ಅವರ ಪುತ್ರರಾದ ಬಾಲಕೃಷ್ಣ, ಹರಿಭಾವು ಮತ್ತು ಸದಾಶಿವ ಮತ್ತವರ ವಂಶಸ್ಥರು ಜಂಟಿ ಒಡೆತನದಲ್ಲಿ ಮುಂದುವರೆದರು.
1989ರಲ್ಲಿ ಬಾಲಕೃಷ್ಣರ ಮರಣದ ನಂತರ, ಅವರ ಪುತ್ರರು (ಅರ್ಜಿದಾರರು) ಮತ್ತು ಕುಟುಂಬದ ಇತರ ಸದಸ್ಯರು ಪೂರ್ವಜರ ಭೂಮಿಯಲ್ಲಿ ಕೃಷಿ ನಿರತರಾಗಿದ್ದರು.
1989ರಲ್ಲಿ, 6ರಿಂದ 9ರವರೆಗಿನ ಪ್ರತಿವಾದಿಗಳು - ಅಂದರೆ, ವಾದಿಗಳ ಚಿಕ್ಕಪ್ಪ ಮತ್ತು ಮಲಸಹೋದರರು - ಜಂಟಿ ಆಸ್ತಿಯ ಭಾಗಗಳನ್ನು ಹೊರಗಿನ ಖರೀದಿದಾರರಿಗೆ (ಪ್ರತಿವಾದಿಗಳು 1 ರಿಂದ 5) ₹8,000 ರಿಂದ ₹73,000 ವರೆಗಿನ ಪರಿಗಣನೆಗೆ ವರ್ಗಾಯಿಸುವ ನಾಲ್ಕು ನೋಂದಾಯಿತ ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಿದರು.
ಈ ವಹಿವಾಟುಗಳು ಕಾಯಿದೆಯ ಸೆಕ್ಷನ್ 22ರ ಅಡಿಯಲ್ಲಿ ತಮ್ಮ ಶಾಸನಬದ್ಧ ಆದ್ಯತೆಯ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಆರೋಪಿಸಿ ವಾದಿಗಳು ಮೊಕದ್ದಮೆ ಹೂಡಿದರು. ಆಸ್ತಿಗಳು ಅವಿಭಜಿತ ಜಂಟಿ-ಕುಟುಂಬದ ಆಸ್ತಿಗಳಾಗಿದ್ದು, ಪರಭಾರೆ ಮಾಡುವ ಪ್ರತಿವಾದಿಗಳು ತಮ್ಮ ಅವಿಭಜಿತ ಷೇರುಗಳನ್ನು ಅಪರಿಚಿತರಿಗೆ ಮಾರಾಟ ಮಾಡುವ ಅಧಿಕಾರವ ಹೊಂದಿಲ್ಲ ಎಂದು ಅವರು ವಾದಿಸಿದರು.
ಸಾಕ್ಷಿಗಳು ನುಡಿದ ಸಾಕ್ಷ್ಯ ಮತ್ತು ದಾಖಲೆ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾ. ಬ್ರಹ್ಮೆ ಅವರು ಆ ಜಮೀನುಗಳು ಪೂರ್ವಜರದ್ದಾಗಿದ್ದು, ಕುಟುಂಬವು ಅವಿಭಕ್ತ ಕುಟುಂಬವಾಗಿಯೇ ಉಳಿದಿದೆ ಎಂದು ಖಚಿತಪಡಿಸಿದರು.
ಖರೀದಿದಾರರ ಸ್ವಂತ ಸಾಕ್ಷಿಗಳು ಆಸ್ತಿಯ ಪ್ರತ್ಯೇಕ ಪಾಲನ್ನು ವಿಭಜಿಸಲು ಯಾವುದೇ ಅರ್ಜಿ ಸಲ್ಲಿಸಲಾಗಿಲ್ಲ ಮತ್ತು ಜಂಟಿ ಆಸ್ತಿಯಿಂದ ಖರೀದಿಸಿದ ಪಾಲನ್ನು ಗುರುತಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡರು.
ಹಿಂದಿನ ವಿಚಾರಣೆಗಳಲ್ಲಿಯೂ ಸಹ, ಪ್ರತಿವಾದಿಗಳಾದ 6 ಮತ್ತು 7 (ಅರ್ಜಿದಾರರ ಚಿಕ್ಕಪ್ಪ) ಸ್ವತಃ ಭೂಮಿಗಳು ಪೂರ್ವಜರ ಜಂಟಿ-ಕುಟುಂಬದ ಆಸ್ತಿ ಎಂದು ವಾದಿಸಿದ್ದರು ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಅಂತೆಯೇ ಪೀಠ ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 22ರ ಪ್ರಕಾರ, ಆಸ್ತಿಯ ವರ್ಗ I ವಾರಸುದಾರರಲ್ಲಿ ಯಾರಾದರೂ ತಮ್ಮ ಪಾಲಿನ ಭಾಗವನ್ನು ಮಾರಾಟ ಮಾಡಲು ಬಯಸಿದರೆ, ಇತರ ವರ್ಗ I ವಾರಸುದಾರರಿಗೆ ಮೊದಲ ಖರೀದಿ ಹಕ್ಕು ಇರುತ್ತದೆ.
ಪ್ರಸ್ತುತ ಪ್ರಕರಣದಲ್ಲಿ, ಕೇಶವ್ ಅವರನ್ನು ಮೂಲ ಪೂರ್ವಜ ಎಂದು ಪರಿಗಣಿಸಬೇಕು. ಅವರ ಎಲ್ಲ ಪುತ್ರರು ಹಾಗೂ ಮೊಮ್ಮಕ್ಕಳು ವರ್ಗ Iರ ವಾರಸುದಾರರು ಮತ್ತು ಸಹಪಂಗಡ ಸದಸ್ಯರಾಗಿದ್ದು ವಿಭಜನೆ ಆಗದ ಪೂರ್ವಜರ ಆಸ್ತಿ ಇದಾಗಿರುವುದರಿಂದ, ಉಳಿದ ಸಹಪಂಗಡ ಸದಸ್ಯರಿಗೆ ಸೆಕ್ಷನ್ 22ರ ಅಡಿಯಲ್ಲಿ ಆಸ್ತಿ ಖರೀದಿಸುವ ಹಕ್ಕು ಇದೆ.
ದಾವೆದಾರರು ತಮ್ಮ ಹಕ್ಕು ಬಳಸಬೇಕಾದರೆ ಡಿಸೆಂಬರ್ 31, 1992ರಿಂದ ಶೇ 6ರ ಸರಳ ಬಡ್ಡಿಯೊಂದಿಗೆ ಆಸ್ತಿಯ ಖರೀದಿ ಮೊತ್ತವನ್ನು 90 ದಿನಗಳ ಒಳಗೆ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಈಗಾಗಲೇ ಪಾವತಿಸದಿದ್ದರೆ, 90 ದಿನಗಳ ಒಳಗೆ ಪಾವತಿಸುವಂತೆಯೂ ಅದು ಸೂಚಿಸಿತು