ಲಸಿಕೆ ಪಡೆಯಲು ಪ್ರಧಾನಿ, ರಾಷ್ಟ್ರಪತಿ ಆಸ್ಪತ್ರೆಗೆ ಹೋಗುವುದಾದರೆ ರಾಜ್ಯ ನಾಯಕರಿಗೆ ಏನಾಗಿದೆ? ಬಾಂಬೆ ಹೈಕೋರ್ಟ್‌

“ಪ್ರಮುಖ ರಾಜಕೀಯ ನಾಯಕರು ಮನೆಯಲ್ಲೇ ಲಸಿಕೆ‌ ಪಡೆಯುತ್ತಾರೆ. ರಾಜಕೀಯ ನಾಯಕರು ಮಾತ್ರವೇ ಮನೆಯಲ್ಲಿ ಹೇಗೆ ಲಸಿಕೆ ಪಡೆಯುತ್ತಾರೆ? ಅದು ಇತರರಿಗೆ ಏಕೆ ಸಾಧ್ಯವಿಲ್ಲ? ಎಲ್ಲರಿಗೂ ಒಂದೇ ನಿಯಮ ಇರಬೇಕು” ಎಂದು ನ್ಯಾಯಾಲಯ ಹೇಳಿದೆ.
PM Covid vaccination
PM Covid vaccination

ಮಹಾರಾಷ್ಟ್ರದಲ್ಲಿ ಮನೆಬಾಗಿಲಿಗೆ ತೆರಳಿ ಲಸಿಕೆ ಪಡೆಯುವ ಯೋಜನೆ ಚಾಲ್ತಿಯಲ್ಲಿ ಇಲ್ಲದಿದ್ದರೂ ರಾಜಕೀಯ ನಾಯಕರು ಮನೆಯಲ್ಲೇ ಕೋವಿಡ್‌ ಲಸಿಕೆ ಪಡೆಯುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಬೇಸರ ವ್ಯಕ್ತಪಡಿಸಿದೆ.

ಇತರೆ ಜನರಿಗೆ ಈ ಅನುಕೂಲ ಇಲ್ಲದೇ ಇರುವಾಗ ಯಾವ ಆಧಾರದಲ್ಲಿ ರಾಜಕೀಯ ನಾಯಕರು ಮನೆಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ನೇತೃತ್ವದ ಪೀಠ ಪ್ರಶ್ನಿಸಿದೆ. “ಪ್ರಮುಖ ರಾಜಕೀಯ ನಾಯಕರು ಮನೆಯಲ್ಲೇ ಲಸಿಕೆ‌ ಪಡೆಯುತ್ತಾರೆ. ರಾಜಕೀಯ ನಾಯಕರು ಮಾತ್ರವೇ ಮನೆಯಲ್ಲಿ ಹೇಗೆ ಲಸಿಕೆ ಪಡೆಯುತ್ತಿದ್ದಾರೆ? ಅದು ಇತರರಿಗೆ ಏಕೆ ಸಾಧ್ಯವಿಲ್ಲ?" ಎಂದು ಅಸಮಾಧಾನ ಸೂಚಿಸಿರುವ ನ್ಯಾಯಾಲಯ "ಎಲ್ಲರಿಗೂ ಒಂದೇ ನಿಯಮ ಇರಬೇಕು” ಎಂದು ಹೇಳಿದೆ.

ಮನೆಬಾಗಿಲಿಗೆ ತೆರಳಿ ಲಸಿಕೆ ನೀಡುವ ಯೋಜನೆ ಜಾರಿಗೊಳಿಸಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ರಾಜಕೀಯ ನಾಯಕರು ಮನೆಯಲ್ಲಿ ಲಸಿಕೆ ಪಡೆಯುವ ಪ್ರಕರಣಗಳು ಮರಳಿ ತಮ್ಮ ಗಮನಕ್ಕೆ ಬಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

“ಏನಾಗಿದೆಯೋ ಅದು ನಡೆದು ಹೋಗಿದೆ. ರಾಜಕೀಯ ನಾಯಕರು ಮನೆಯಲ್ಲಿಯೇ ಲಸಿಕೆ‌ ಪಡೆದುಕೊಳ್ಳುವ ವರದಿ ನಮ್ಮ ಗಮನಕ್ಕೆ ಬಂದರೆ ಅದರತ್ತ ದೃಷ್ಟಿ ಹಾಯಿಸುತ್ತೇವೆ. ಪ್ರಧಾನಿಯವರೇ (ನರೇಂದ್ರ ಮೋದಿ) ಲಸಿಕೆ ನೀಡುವ ಕೇಂದ್ರಕ್ಕೆ ತೆರಳಿ ಚುಚ್ಚು ಮದ್ದು ಪಡೆಯಬೇಕಾದರೆ ಮಹಾರಾಷ್ಟ್ರ ನಾಯಕರಿಗೆ ಏಕೆ ಅದು ಸಾಧ್ಯವಾಗುತ್ತಿಲ್ಲ?” ಎಂದು ಪೀಠ ಪ್ರಶ್ನಿಸಿದೆ.

ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ವ್ಯವಸ್ಥೆ ಮಾಡುವಂತೆ ಕೋರಿ ಇಬ್ಬರು ಮುಂಬೈ ಮೂಲದ ವಕೀಲರು ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಮೇಲಿನಂತೆ ಹೇಳಿದೆ.

ಪ್ರಧಾನಿಯವರೇ (ನರೇಂದ್ರ ಮೋದಿ) ಲಸಿಕೆ ನೀಡುವ ಕೇಂದ್ರಕ್ಕೆ ತೆರಳಿ ಚುಚ್ಚು ಮದ್ದು ಪಡೆಯಬೇಕಾದರೆ ಮಹಾರಾಷ್ಟ್ರ ನಾಯಕರಿಗೆ ಏಕೆ ಅದು ಸಾಧ್ಯವಾಗುತ್ತಿಲ್ಲ?”
ಬಾಂಬೆ ಹೈಕೋರ್ಟ್‌

ಕೆಲವು ಸಂಸ್ಥೆಗಳು ಮತ್ತು ಸಮಾಜಗಳ ಕಾಳಜಿಯಿಂದ ಜನರಿಗೆ ಮನೆಯಲ್ಲೇ ಲಸಿಕೆ ನೀಡುವಂತೆ ಮಾಡಲಾಗಿದೆ ಎಂಬ ಸುದ್ದಿಗಳನ್ನು ನೋಡಿರುವುದಾಗಿ ಅರ್ಜಿದಾರೆ ಧೃತಿ ಕಪಾಡಿಯಾ ಅವರು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ದತ್ತಾ ಅವರು, ಲಸಿಕೆ ನೀಡುವ ಕೇಂದ್ರಕ್ಕೆ ಸಮೀಪದಲ್ಲಿ ತುರ್ತು ನಿಗಾ ಘಟಕ (ಐಸಿಯು) ಇರಬೇಕಾಗುತ್ತದೆ. ಹೀಗಾಗಿ ಮನೆ ಬಾಗಿಲಿನಲ್ಲಿ ಲಸಿಕೆ ನೀಡುವುದು ಸಾಧ್ಯವಿಲ್ಲ ಎಂದು ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆಯುಕ್ತ ಇಕ್ಬಾಲ್‌ ಎಸ್‌ ಚಹಾಲ್‌ ತಿಳಿಸಿರುವುದಾಗಿ ಹೇಳಿದರು. ಮುಂದುವರೆದು, "ಹಾಗಾದರೆ ರಾಜಕೀಯ ನಾಯಕರ ಮನೆಗಳಲ್ಲಿ ಐಸಿಯುಗಳು ಇವೆಯೇ?” ಎಂದು ಸಿಜೆ ಪ್ರಶ್ನಿಸಿದರು.

Also Read
ಎಲ್ಲರಿಗೂ ಮನೆಬಾಗಿಲಿಗೆ ಲಸಿಕೆ ಪೂರೈಸಲು ಉತ್ತರ ಪ್ರದೇಶ ಸರ್ಕಾರ ಕ್ರಮಕೈಗೊಳ್ಳಬೇಕು: ಅಲಾಹಾಬಾದ್‌ ಹೈಕೋರ್ಟ್‌

“ರಾಷ್ಟ್ರಪತಿಯವರು ಎಐಐಎಂಎಸ್‌ಗೆ ತೆರಳಿ ಲಸಿಕೆ ಪಡೆಯುತ್ತಾರೆ. ಅವರೇ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬೇಕಾದರೆ ರಾಜಕೀಯ ನಾಯಕರಿಗೆ ಏಕೆ ಆಗುವುದಿಲ್ಲ? ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ರಾಜಕಾರಣಿಗಳದ್ದು ವಿಶೇಷ ವರ್ಗವೇನಲ್ಲ” ಎಂದು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರೂ ಸಹ ಇದೇ ವೇಳೆ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಲಸಿಕೆ ಕೊರತೆ ಇದೆ ಎಂಬ ವಿಚಾರ ಮಾಧ್ಯಮ ವರದಿಯಿಂದ ತಿಳಿದಿದೆ. ಹೀಗಾಗಿ ಅರ್ಜಿಯನ್ನು ಬಾಕಿ ಇಡಲಾಗುವುದು ಎಂದಿರುವ ಪೀಠವು ಲಸಿಕೆ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ, ಹಿರಿಯ ನಾಗರಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಆನ್‌ಲೈನಲ್ಲಿ ರೀತಿ ರಿವಾಜುಗಳನ್ನು ಬದಲಿಸಬಹುದೇ ಎಂದೂ ಪ್ರಶ್ನಿಸಿದೆ. “ಇದು ವಿರೋಧಿ ಕ್ರಮವಲ್ಲ. ಹಿರಿಯ ನಾಗರಿಕರಿಗೆ ಆನ್‌ಲೈನ್‌ ನೀತಿ ನಿಯಮಗಳಲ್ಲಿ ಸಡಿಲಿಕೆ ಮಾಡುವ ಕುರಿತು ಏನನ್ನಾದರೂ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com