ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಎಲ್ಲಾ ಖಾಸಗಿ ಆಸ್ತಿಗಳನ್ನು "ಸಮುದಾಯದ ಭೌತಿಕ ಸಂಪನ್ಮೂಲಗಳು" ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ [ಆಸ್ತಿ ಮಾಲೀಕರ ಸಂಘ ಇನ್ನಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಮತ್ತಿತರರ ನಡುವಣ ಪ್ರಕರಣ] .
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಬಿ ವಿ ನಾಗರತ್ನ, ಸುಧಾಂಶು ಧುಲಿಯಾ, ಜೆ ಬಿ ಪರ್ದಿವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್, ಸತೀಶ್ ಚಂದ್ರ ಶರ್ಮಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಪ್ರಕರಣದಲ್ಲಿ ಒಟ್ಟು ಮೂರು ತೀರ್ಪುಗಳನ್ನು ಬರೆಯಲಾಗಿದೆ. ಸಿಜೆಐ ಚಂದ್ರಚೂಡ್ ಅವರು ಆರು ಇತರ ನ್ಯಾಯಮೂರ್ತಿಗಳೊಂದಿಗೆ ಸೇರಿ ಬಹುಮತದ ತೀರ್ಪು ನೀಡಿದರೆ, ನ್ಯಾ. ನಾಗರತ್ನ ಅವರು ಬಹುಮತಕ್ಕೆ ಭಾಗಶಃ ಒಪ್ಪಿಗೆ ನೀಡಿದ ತೀರ್ಪು ಬರೆದಿದ್ದಾರೆ. ಆದರೆ ನ್ಯಾ. ಧುಲಿಯಾ ಅವರು ಭಿನ್ನ ತೀರ್ಪು ನೀಡಿದ್ದಾರೆ.
"ಭೌತಿಕ ಅಗತ್ಯತೆಗಳ ಅರ್ಹತೆ ಈಡೇರಿಸಿದ ಮಾತ್ರಕ್ಕೆ ಒಬ್ಬ ವ್ಯಕ್ತಿಯ ಒಡೆತನದ ಪ್ರತಿಯೊಂದು ಸಂಪನ್ಮೂಲವನ್ನು ಸಮುದಾಯದ ಭೌತಿಕ ಸಂಪನ್ಮೂಲ ಎಂದು ಕರೆಯಲಾಗದು ಎಂಬುದಾಗಿ ಸಿಜೆಐ ಚಂದ್ರಚೂಡ್ ನೇತೃತ್ವದ ಬಹುಮತದ ತೀರ್ಪು ತಿಳಿಸಿದೆ. ಖಾಸಗಿ ಒಡೆತನದ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲವಾಗಿ ಅರ್ಹತೆ ಪಡೆಯಲು, ಅದು ಮೊದಲು ಕೆಲವು ಪರೀಕ್ಷೆಗಳಲ್ಲಿ ಉತ್ತೀರ್ಣವಾಗಬೇಕು" ಎಂದು ನ್ಯಾಯಾಲಯಅಭಿಪ್ರಾಯಪಟ್ಟಿದೆ
ಸಂವಿಧಾನದ 39(ಬಿ) ಅಡಿ ಬರುವ ಆಕ್ಷೇಪಿತ ಸಂಪನ್ಮೂಲದ ಪರಿಶೀಲನೆಯು ಸ್ಪರ್ಧಾನಿಷ್ಠವಾಗಿದ್ದು, ಕೆಲ ನಿರ್ದಿಷ್ಟ ಅಂಶಗಳ ಗಣನೆಗೆ ಒಳಪಟ್ಟಿರಬೇಕು. ಉದಾಹರಣೆಗೆ, ಸಂಪನ್ಮೂಲದ ಸ್ವರೂಪ, ಅದರ ಗುಣ, ಸಮುದಾಯದ ಹಿತದ ಮೇಲೆ ಅದರ ಪರಿಣಾಮ, ಆ ನಿರ್ದಿಷ್ಟ ಸಂಪನ್ಮೂಲದ ಕೊರತೆ ಮತ್ತು ಅಂತಹ ಸಂಪನ್ಮೂಲವು ಕೆಲವೇ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗುವುದರಿಂದ ಉಂಟಾಗುವ ಪರಿಣಾಮ ಮುಂತಾದವುಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಸಮುದಾಯದ ಭೌತಿಕ ಆಸ್ತಿಯ ವ್ಯಾಪ್ತಿಗೆ ಒಳಪಡುವ ಸಂಪನ್ಮೂಲಗಳನ್ನು ಗುರುತಿಸಲು ಈ ನ್ಯಾಯಾಲಯವು ವಿಕಸಿತಗೊಳಿಸಿರುವ ಸಾರ್ವಜನಿಕ ವಿಶ್ವಸ್ತ ಸಿದ್ಧಾಂತವು ಸಹಾಯಕವಾಗಬಹುದು ಎಂದು ನ್ಯಾಯಾಲಯವು ಹೇಳಿದೆ.
ತಮ್ಮ ನಿರ್ಧಾರವನ್ನು ಓದುವಾಗ, ನ್ಯಾಯಮೂರ್ತಿ ನಾಗರತ್ನ ಅವರು ಕೆಲವು ವಿಷಯಗಳ ಬಗ್ಗೆ ಸಿಜೆಐ ನೇತೃತ್ವದ ಬಹುಮತದ ತೀರ್ಪನ್ನು ಸಮ್ಮತಿಸಿದರೂ ನ್ಯಾ. ಧುಲಿಯಾ ಅವರ ತೀರ್ಪಿಗೆ ಪ್ರತಿಕ್ರಿಯೆಯಾಗಿ ಕೆಲ ಅಭಿಪ್ರಾಯ ಬರೆದಿರುವುದಾಗಿ ತಿಳಿಸಿದರು.
"ಖಾಸಗಿ ಒಡೆತನದ ಭೌತಿಕ ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವು ಸಾಮಾನ್ಯ ಒಳಿತಿಗಾಗಿ ಸೇವೆ ಸಲ್ಲಿಸಲು ಸಮುದಾಯದ ಭೌತಿಕ ಸಂಪನ್ಮೂಲಗಳಾಗಿ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದು ನನ್ನ ತೀರ್ಪಿನ ತಿರುಳು" ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
ಭೌತಿಕ ಸಂಪನ್ಮೂಲಗಳನ್ನು ಹೇಗೆ ನಿಯಂತ್ರಿಸಬೇಕು ಮತ್ತು ವಿತರಿಸಬೇಕು ಎಂಬುದನ್ನು ಗಮನಿಸುವುದು ಸಂಸತ್ತಿನ ವಿಶೇಷ ಹಕ್ಕು ಎಂದು ನ್ಯಾಯಮೂರ್ತಿ ಧುಲಿಯಾ ತಮ್ಮ ಭಿನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ರಸ್ತೆ ಸಾರಿಗೆ ಸೇವೆಗಳ ರಾಷ್ಟ್ರೀಕರಣಕ್ಕೆ ಸಂಬಂಧಿಸಿದಂತೆ 1978 ರಲ್ಲಿ ಸುಪ್ರಿಂ ಕೋರ್ಟ್ ತೆಗೆದುಕೊಂಡ ಎರಡು ವ್ಯತಿರಿಕ್ತದ ನಿಲುವುಗಳಿಗೆ ಕುರಿತಾಗಿ ಪ್ರಸ್ತುತ ಪ್ರಕರಣದ ಉಲ್ಲೇಖ ಇದೆ.
ಸುಪ್ರಸಿದ್ಧ ಕೇಶವಾನಂದ ಭಾರತಿ ಪ್ರಕರಣದಲ್ಲಿ ಎತ್ತಿ ಹಿಡಿದಿರುವ 31 ಸಿ ವಿಧಿ ಜಾರಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ಸರ್ವಾನುಮತದಿಂದ ತೀರ್ಪು ನೀಡಿದೆ .
ಪ್ರಸ್ತುತ ಪ್ರಕರಣದ ಪ್ರಮುಖ ಅರ್ಜಿಯನ್ನು ಮುಂಬೈ ಮೂಲದ ಆಸ್ತಿ ಮಾಲೀಕರ ಸಂಘ (POA) 1992ರಲ್ಲಿ ಸಲ್ಲಿಸಿತು. ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಕಾಯಿದೆಯ VIII-A ಅಧ್ಯಾಯವನ್ನು ಸಂಘ ವಿರೋಧಿಸಿತ್ತು. 70% ನಿವಾಸಿಗಳು ಪುನಃಸ್ಥಾಪನೆ ಉದ್ದೇಶಗಳಿಗಾಗಿ ಅಂತಹ ವಿನಂತಿಯನ್ನು ಮಾಡಿದರೆ, ಸೆಸ್ಡ್ ಕಟ್ಟಡಗಳು ಮತ್ತು ಅವುಗಳನ್ನು ನಿರ್ಮಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರದ ಅಧಿಕಾರಿಗಳಿಗೆ ಕಾಯಿದೆ ಅವಕಾಶ ಕಲ್ಪಿಸಿತ್ತು.