ದೇಶದ ಮೀಟೂ ಆಂದೋಲನಕ್ಕೆ ಐತಿಹಾಸಿಕ ವಿಜಯ ತಂದುಕೊಟ್ಟಂತೆ, ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಕೇಂದ್ರದ ಮಾಜಿ ಸಚಿವ ಎಂ ಜೆ ಅಕ್ಬರ್ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾರಮಣಿ ಅವರನ್ನು ಬುಧವಾರ ಖುಲಾಸೆಗೊಳಿಸಿತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾ. ರವೀಂದ್ರ ಕುಮಾರ್ ಪಾಂಡೆ ಅವರು ನೀಡಿದ ತೀರ್ಪು ಕೆಲಸದ ಸ್ಥಳಗಳಲ್ಲಿನ ಮಹಿಳೆಯರ ಲೈಂಗಿಕ ಶೋಷಣೆಯ ಕುರಿತು ಹಲವು ಮಹತ್ವದ ಅಂಶಗಳನ್ನು ಹೇಳಿದೆ. ಅದನ್ನು ತಿಳಿಯುವುದಕ್ಕೂ ಮುನ್ನ ಪ್ರಕರಣ ಸಾಗಿ ಬಂದ ಹಿನ್ನೆಲೆಯನ್ನು ಚುಟುಕಾಗಿ ಗಮನಿಸೋಣ.
ಒಟ್ಟು ಎರಡು ವರ್ಷಗಳ ಕಾಲ ನಡೆದ ಈ ಪ್ರಕರಣವನ್ನು ಮೂವರು ನ್ಯಾಯಾಧೀಶರು ವಿಚಾರಣೆ ನಡೆಸಿದ್ದರು. 90 ಪುಟಗಳ ತೀರ್ಪು ಬುಧವಾರ ಹೊರಬಿತ್ತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಅಂತಿಮ ವಿಚಾರಣೆ ನಡೆದು ತೀರ್ಪು ಪ್ರಕಟವಾಯಿತು. ಕೋವಿಡ್ ಸಮಯವಾದ್ದರಿಂದ ಎಲ್ಲಾ ವಾದ ಪ್ರತಿವಾದಗಳು ವರ್ಚುವಲ್ ವಿಧಾನದಲ್ಲಿ ನಡೆದಿದ್ದವು. ನ್ಯಾಯಾಧೀಶರಾದ ರವೀಂದ್ರ ಕುಮಾರ್ ಪಾಂಡೆ, ಸಮರ್ ವಿಶಾಲ್ ಹಾಗೂ ವಿಶಾಲ್ ಪಹುಜಾ ಭಿನ್ನ ಅವಧಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದರು.
ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ರೌಸ್ ಅವೆನ್ಯೂ ನ್ಯಾಯಲಯದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಕಳೆದ ಅಕ್ಟೋಬರ್‌ನಲ್ಲಿ ನ್ಯಾ. ಪಹುಜಾ ತಿಳಿಸಿದ್ದರು. ಆದರೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ನಿರಾಕರಿಸಿದರಲ್ಲದೆ ನ್ಯಾ. ಪಹುಜಾ ಸೇರಿದಂತೆ ಇನ್ನೂರು ಮಂದಿ ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರು. ನಂತರ ಅಧಿಕಾರ ವಹಿಸಿಕೊಂಡ ನ್ಯಾ. ಪಾಂಡೆ ಅಂತಿಮ ವಾದ ಆಲಿಸಿ 90 ಪುಟಗಳ ತೀರ್ಪು ನೀಡಿದ್ದಾರೆ.
ತೀರ್ಪಿನ ವೇಳೆ ʼಇಕಾನಮಿಕ್ ಸರ್ವೇ ವರದಿʼ, ʼರಾಮಾಯಣʼ, ʼಮಹಾಭಾರತʼದ ಘಟನೆಗಳು ಕೂಡ ಪ್ರಸ್ತಾಪವಾಗಿದ್ದವು. ಇಕಾನಮಿಕ್ ಸರ್ವೇ ವರದಿ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಶಾಸನಾತ್ಮಕ ಕ್ರಮಗಳನ್ನು ಉಲ್ಲೇಖಿಸಲಾಗಿತ್ತು.
ವಾಲ್ಮೀಕಿ ರಾಮಾಯಣವನ್ನು ಪ್ರಸ್ತಾಪಿಸಿದ್ದ ನ್ಯಾಯಾಧೀಶರು: ಒಮ್ಮೆ ರಾಜಕುಮಾರ ಲಕ್ಷ್ಮಣನಿಗೆ ಸೀತೆಯನ್ನು ವರ್ಣಿಸುವಂತೆ ಕೇಳಲಾಗುತ್ತದೆ. ಆದರೆ ನಾನು ಸೀತೆಯ ಕಾಲನ್ನು ಹೊರತುಪಡಿಸಿ ಏನನ್ನೂ ನೋಡಿಲ್ಲ ಎನ್ನುತ್ತಾನೆ. ʼರಾಮಚರಿತಮಾನಸʼದ ಅರಣ್ಯ ಕಾಂಡದಲ್ಲಿ ಹೆಣ್ಣನ್ನು ಗೌರವಿಸುವ ರಕ್ಷಿಸುವ ಆಕೆಯ ಘನತೆಯನ್ನು ಕಾಪಾಡುವ ಬಗ್ಗೆ ಉಲ್ಲೇಖವಿದೆ. ಸೀತಾಪಹರಣವಾದಾಗ ಆಕೆಯ ರಕ್ಷಣೆಗೆ ಜಟಾಯು ಬರುತ್ತಾನೆ. ಗಾಯಗೊಂಡು ಸಾಯುತ್ತಿದ್ದರೂ ರಾಮ ಲಕ್ಷ್ಮಣರಿಗೆ ಸೀತಾಪಹರಣದ ವಿಚಾರ ತಿಳಿಸಲು ಜಟಾಯು ಕಾದಿರುತ್ತಾನೆ” ಎಂದಿದ್ದಾರೆ.
ಮಹಾಭಾರತದ ಸಭಾಪರ್ವದಲ್ಲಿ ನ್ಯಾಯಕ್ಕಾಗಿ ದ್ರೌಪದಿ ಕುರುರಾಜನ ಸಭೆಗೆ ಮನವಿ ಸಲ್ಲಿಸುವ ಉಲ್ಲೇಖವಿದೆ. ದುಶ್ಶಾಸನ ತನ್ನನ್ನು ಪಗಡೆಯಂಗಳಕ್ಕೆ ಎಳೆದೊಯ್ದ ಘಟನೆಯ ಕಾನೂನಾತ್ಮಕತೆಯನ್ನು ಆಕೆ ಪ್ರಶ್ನಿಸುತ್ತಾಳೆ. ತೀವ್ರ ವೈಯಕ್ತಿಕ ಆಘಾತದ ನಡುವೆಯೂ ಆಕೆ ಕೇಳಿದ ಪ್ರಶ್ನೆಗಳು ಆಕೆಯ ಬುದ್ಧಿಶಕ್ತಿ ಮತ್ತು ತೀಕ್ಷ್ಣವಾದ ಸಾಮರ್ಥ್ಯ ಮತ್ತು ತಾರ್ಕಿಕ ವಿಶ್ಲೇಷಣೆಯನ್ನು ಸೂಚಿಸುತ್ತದೆ” ಎಂದಿದ್ದಾರೆ.
ಖಾಸಗಿಯಾಗಿ ಅಥವಾ ಮುಚ್ಚಿದ ಬಾಗಿಲ ನಡುವೆ ನಡೆದಿದೆ ಎಂಬ ಕಾರಣಕ್ಕಾಗಿ ಲೈಂಗಿಕ ಕಿರುಕುಳ ಮತ್ತು ದುರ್ಬಳಕೆಯ ಘಟನೆಗಳನ್ನು ನಿರ್ಲಕ್ಷಿಸಲಾಗದು.
ಸಮಾಜದಲ್ಲಿ ಕೆಲ ವ್ಯಕ್ತಿಗಳು ಎಷ್ಟೇ ಗೌರವಾನ್ವಿತರಾಗಿದ್ದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಹೆಣ್ಣುಮಕ್ಕಳ ಮೇಲೆ ಕ್ರೌರ್ಯದಿಂದ ವರ್ತಿಸಬಹುದು.
ಘಟನೆ ವೇಳೆ ಲೈಂಗಿಕ ದೌರ್ಜನ್ಯದ ವಿರುದ್ಧ ದೂರುಗಳನ್ನು ಪರಿಹರಿಸುವ ವ್ಯವಸ್ಥೆಯ ಕೊರತೆ ಇರುವುದರಿಂದ ಕೆಲಸದ ಸ್ಥಳದಲ್ಲಿ ವ್ಯವಸ್ಥಿತವಾಗಿ ದೌರ್ಜನ್ಯ ನಡೆಯುತ್ತಿರುತ್ತದೆ.
ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವನ್ನು ಹಾಗೂ ಅದು ಸಂತ್ರಸ್ತರ ಮೇಲೆ ಬೀರುವ ಪರಿಣಾಮವನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.
ಲೈಂಗಿಕ ಕಿರುಕುಳದ ಬಲಿಪಶುಗಳು ಅನೇಕ ವರ್ಷಗಳಿಂದ ದುರುಪಯೋಗದ ಬಗ್ಗೆ ಒಂದು ಮಾತನ್ನೂ ಆಡಿರುವುದಿಲ್ಲ. ಏಕೆಂದರೆ ಕೆಲವೊಮ್ಮೆ ತಾನು ದೌರ್ಜನ್ಯಕ್ಕೆ ಬಲಿಯಾಗಿದ್ದೇನೆ ಎಂದು ಸ್ವತಃ ಆಕೆಗೆ ತಿಳಿದಿರುವುದಿಲ್ಲ. ತನ್ನದೇ ತಪ್ಪು ಎಂದು ಆಕೆ ಅಂದುಕೊಂಡಿರಬಹುದು.
ಕಿರುಕುಳಕ್ಕೊಳಗಾದ ಬಹುತೇಕ ಮಹಿಳೆಯರು ಅವಮಾನದ ಕಾರಣಕ್ಕಾಗಿ ಅಥವಾ ಸಾಮಾಜಿಕ ಕಳಂಕದ ಕಾರಣಕ್ಕಾಗಿ ಅದರ ಬಗ್ಗೆ ಅಥವಾ ಅದರ ವಿರುದ್ಧ ಮಾತನಾಡುವುದಿಲ್ಲ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ನೆಪದಲ್ಲಿ ಕಿರುಕುಳದ ವಿರುದ್ಧ ಧ್ವನಿ ಎತ್ತಿದ ಮಹಿಳೆಯನ್ನು ಶಿಕ್ಷಿಸಲಾಗದು. ಒಬ್ಬ ವ್ಯಕ್ತಿಯ ಘನತೆಯ ಹಕ್ಕನ್ನು ಬಲಿಕೊಟ್ಟು ಮತ್ತೊಬ್ಬ ವ್ಯಕ್ತಿಯ ಪ್ರತಿಷ್ಠೆಯ ಹಕ್ಕನ್ನು ರಕ್ಷಿಸಲಾಗದು.
ಯಾವುದೇ ವೇದಿಕೆಯಲ್ಲಿ ಮತ್ತು ದಶಕದ ನಂತರವೂ ಮಹಿಳೆ ತನ್ನ ನೋವನ್ನು ಹೇಳಿಕೊಳ್ಳುವ ಹಕ್ಕು ಹೊಂದಿದ್ದಾಳೆ.
ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು ಮಹಿಳೆಯರನ್ನು ಗೌರವಿಸಬೇಕೆಂದು ಹೇಳಿದ ನೆಲದಲ್ಲೇ ಆಕೆಯ ವಿರುದ್ಧ ಅಪರಾಧ ಮತ್ತು ಹಿಂಸೆ ನಡೆಯುತ್ತಿರುವುದು ಅವಮಾನಕರ.
ಭಾರತೀಯ ಮಹಿಳೆಯರು ಸಮರ್ಥರು ಆದರೆ ಅವರಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯ ಅಗತ್ಯವಿರುತ್ತದೆ. ಸಮಾನ ಅವಕಾಶ ಮತ್ತು ಸಾಮಾಜಿಕ ಭದ್ರತೆ ಒದಗಿಸದೆ ಆಕೆಯನ್ನು ತಡೆಯುವಂತಿಲ್ಲ.