ಐವತ್ತು ವರ್ಷಗಳ ವರ್ಚಸ್ಸಿಗೆ ಸರಿಪಡಿಸಲಾಗದಷ್ಟು ಹಾನಿಯಾಗಿದೆ; ರಮಣಿಗೆ ಶಿಕ್ಷೆಯಾಗಬೇಕು: ಗೀತಾ ಲೂಥ್ರಾ ವಾದ

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ ಜೆ ಅಕ್ಬರ್‌ ಹೂಡಿರುವ ಮಾನಹಾನಿ ಪ್ರಕರಣದಲ್ಲಿ ಅವರ ಪರ ಹಿರಿಯ ವಕೀಲೆ ಗೀತಾ ಲೂಥ್ರಾ ಬುಧವಾರ ತಮ್ಮ ವಾದ ಸಂಪನ್ನಗೊಳಿಸಿದರು.
MJ Akbar, Geeta Luthra
MJ Akbar, Geeta Luthra

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಪತ್ರಕರ್ತ ಮತ್ತು ಕೇಂದ್ರದ ಮಾಜಿ ಸಚಿವ ಎಂ ಜೆ ಅಕ್ಬರ್‌ ದಾಖಲಿಸಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲೆ ಗೀತಾ ಲೂಥ್ರಾ ಅವರು ಬುಧವಾರ ತಮ್ಮ ಪ್ರತಿವಾದ ಪೂರ್ಣಗೊಳಿಸಿದ್ದಾರೆ (ಎಂ ಜೆ ಅಕ್ಬರ್‌ ವರ್ಸಸ್‌ ಪ್ರಿಯಾ ರಮಣಿ).

ಟ್ವಿಟರ್‌ನಲ್ಲಿ ಎಂ ಜೆ ಅಕ್ಬರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವ ಮೂಲಕ 50 ವರ್ಷಗಳಿಂದ ಅವರು ಶ್ರಮವಹಿಸಿ ಸಂಪಾದಿಸಿದ್ದ ವರ್ಚಸ್ಸಿಗೆ ಇನ್ನಿಲ್ಲದ ಧಕ್ಕೆ ಉಂಟುಮಾಡಲಾಗಿದ್ದು, ಅಕ್ಬರ್‌ ಅವರಿಗೆ ನ್ಯಾಯ ಒದಗಿಸಿ, ರಮಣಿಗೆ ಶಿಕ್ಷೆ ವಿಧಿಸಬೇಕು ಎಂದು ಲೂಥ್ರಾ ಕೋರಿದ್ದಾರೆ.

“ಯಾವುದೇ ರೀತಿಯ ಪ್ರತಿವಾದವನ್ನು ಆಲಿಸಿದರೂ ಈಗ ಮಾಡಿರುವ ಹಾನಿಯನ್ನು ಸರಿಪಡಿಸಲಾಗದು. ಶಿಕ್ಷೆ ವಿಧಿಸಿದರೂ ಹಾನಿ ಸರಿಪಡಿಸಲಾಗದು. ಸದರಿ ಪ್ರಕರಣದಲ್ಲಿ ಕಾನೂನು ತನ್ನ ಪರಿಣಾಮಗಳನ್ನು ತೋರಬೇಕು. ನನಗೆ ಹಾನಿಯಾಗಿದ್ದು, ಈ ನ್ಯಾಯಾಲಯದಲ್ಲಿ ನ್ಯಾಯ ಕೋರುತ್ತಿದ್ದೇನೆ. ನನಗೆ ಬೇರೆ ದಾರಿಯಿಲ್ಲ” ಎಂದು ಲೂಥ್ರಾ ವಾದಿಸಿದರು.

ಇದು ಮೀಟೂ ಪ್ರಕರಣವಲ್ಲ. ಬದಲಿಗೆ ಮಾನಹಾನಿ ಪ್ರಕರಣವಾಗಿದ್ದು, ಕ್ರಿಮಿನಲ್‌ ಮಾನಹಾನಿ ಕಾನೂನಿನ ಅಡಿ ಪ್ರಿಯಾ ರಮಣಿ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯವನ್ನು ಲೂಥ್ರಾ ಕೋರಿದರು.

ಟ್ವಿಟರ್‌ ಮೂಲಕ ಅಕ್ಬರ್‌ ವಿರುದ್ಧ ಲೈಂಗಿಕ ದುರ್ನಡತೆ ಆರೋಪ ಮಾಡಿದ್ದ ರಮಣಿ ವಿರುದ್ಧ 2018ರ ಅಕ್ಟೋಬರ್‌ನಲ್ಲಿ ಅಕ್ಬರ್‌ ಅವರು ಕ್ರಿಮಿನಲ್‌ ಮಾನಹಾನಿ ದೂರು ದಾಖಲಿಸಿದ್ದರು. 1993ರ ಡಿಸೆಂಬರ್‌ನಲ್ಲಿ ಮುಂಬೈನ 'ದಿ ಒಬೆರಾಯ್'‌ ಹೋಟೆಲ್‌ಗೆ ಸಂದರ್ಶನಕ್ಕಾಗಿ ಆಹ್ವಾನಿಸಿದ್ದ ಎಂ ಜೆ ಅಕ್ಬರ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ರಮಣಿ ಆರೋಪಿಸಿದ್ದರು.

ನ್ಯಾಯ, ನಂಬಿಕೆ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕವಾಗಿ ಒಳ್ಳೆಯದು ಮಾಡುವ ವಿಚಾರಗಳನ್ನು ಮಾನಹಾನಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ತಮ್ಮ ರಕ್ಷಣೆಗೆ ರಮಣಿ ಬಳಸಿದರೆ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದನ್ನು ಲೂಥ್ರಾ ಅಲ್ಲಗಳೆದಿದ್ದರು. ಆರೋಪವು ಅಪ್ರಾಮಾಣಿಕತೆಯಿಂದ ನಾರುತ್ತಿದ್ದು, ದುರುದ್ದೇಶಪೂರಿತವಾಗಿದೆ ಎಂದು ಲೂಥ್ರಾ ವಾದಿಸಿದರು.

“ಲೇಖನವು (ವೋಗ್‌ ಮ್ಯಾಗಜೀನ್‌ ಬರೆದ ಲೇಖನ) ದೋಷಪೂರಿತವಾಗಿದ್ದು, ಅದು ಕಲ್ಪನೆಗಳಿಂದ ಕೂಡಿದೆ. ಅದು ಸತ್ಯವಲ್ಲ. ಸಾರ್ವಜನಿಕ ಹಿತಾಸಕ್ತಿ, ಒಳಿತು ಮತ್ತು ಒಳ್ಳೆಯ ನಂಬಿಕೆಗಳನ್ನು ಸಾಬೀತುಪಡಿಸುವ ಹೊಣೆ ಆಕೆಯ ಮೇಲಿದೆ. ಆಕೆ ನೀಡಿದ ಒಂದೇ ಒಂದು ಹೇಳಿಕೆಯೂ ನಿಜವಲ್ಲ. ಪ್ರತಿಯೊಂದು ಹೇಳಿಕೆಯನ್ನು ಸಾಬೀತುಪಡಿಸುವ ಹೊಣೆ ಆಕೆಯ ಮೇಲಿದೆ” ಎಂದಿದ್ದಾರೆ.

ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರಕ್ಕೆ ರಮಣಿ ದೂರು ನೀಡದಿರುವುದನ್ನು ಆಧರಿಸಿ ವಾದಿಸಿದ ಲೂಥ್ರಾ, ಕಾನೂನು ಪ್ರಕ್ರಿಯೆ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದರು. ಅಕ್ಬರ್‌ ಮಾಧ್ಯಮ ಕ್ಷೇತ್ರದಲ್ಲಿನ ಅತಿದೊಡ್ಡ ಲೈಂಗಿಕ ಪರಭಕ್ಷಕ ಎಂದು ಹೇಳುವುದಕ್ಕೂ ಮುನ್ನ ರಮಣಿ ಅವರು ಯಾವುದೇ ತೆರನಾದ ಎಚ್ಚರಿಕೆ ವಹಿಸಿಲ್ಲ ಎಂದೂ ತಗಾದೆ ಎತ್ತಲಾಗಿದೆ. “ಏನನ್ನೂ ಪರಿಶೀಲಿಸದೇ ಸಾಮಾಜಿಕ ಮಾಧ್ಯಮದಲ್ಲಿ ಏನು ಬೇಕಾದರೂ ಹೇಳುವುದು ಸುಲಭ.. ಎಚ್ಚರಿಕೆ ವಹಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸಕಾರಣ ಮತ್ತು ವಾಸ್ತವಿಕ ಅಂಶಗಳನ್ನು ಮುಂದಿಡಬೇಕು” ಎಂದರು.

Also Read
ಲೈಂಗಿಕ ಕಿರುಕುಳ ಪ್ರಕರಣ: ಪ್ರಿಯಾ ರಮಣಿ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ಎಂ ಜೆ ಅಕ್ಬರ್‌ ಪರ ಲೂಥ್ರಾ ಪ್ರಖರ ವಾದ

ರಮಣಿ ಪರ ಸಾಕ್ಷಿ ನುಡಿದಿರುವ ಆಕೆಯ ಸ್ನೇಹಿತ ನಿಲೋಫರ್‌ ವೆಂಕಟರಾಮನ್‌ ಅವರ ಸಾಕ್ಷ್ಯವು ಅಂತೆಕಂತೆ ಮತ್ತು ಕಟ್ಟುಕತೆಗಳಿಂದ ಕೂಡಿದ್ದು ಅದು ಸ್ವೀಕಾರಾರ್ಹವಲ್ಲ ಎಂದು ಸಹ ಲೂಥ್ರಾ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ್ದಲ್ಲವಾದ್ದರಿಂದ ಪತ್ರಕರ್ತೆ ಗಜಾಲಾ ವಹಾಬ್‌ ಅವರ ಪುರಾವೆಯನ್ನೂ ಅನುಮಾನಿಸಲಾಗಿದೆ. ನ್ಯಾಯಾಲಯದ ಮುಂದೆ ರಮಣಿ ನೀಡಿರುವ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿವೆ ಎಂದು ವಾದಿಸಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ತನ್ನ ಟ್ವಿಟರ್‌ ಖಾತೆಯನ್ನು ರಮಣಿ ಡಿಲೀಟ್‌ ಮಾಡಿದ್ದು ಸಾಕ್ಷ್ಯ ನಾಶಕ್ಕೆ ಸಮನಾಗಿದ್ದು, ಅದು ಭಾರತೀಯ ದಂಡ ಸಂಹಿತೆಯ ಅಡಿ ಅಪರಾಧವಾಗಿದೆ ಎಂದು ಕಳೆದ ತಿಂಗಳು ಲೂಥ್ರಾ ವಾದಿಸಿದ್ದರು.

ಲೂಥ್ರಾ ಪ್ರತಿವಾದಕ್ಕೆ ಸಂಬಂಧಿಸಿದಂತೆ ರಮಣಿ ಪರ ಹಿರಿಯ ವಕೀಲೆ ರೆಬೆಕಾ ಜಾನ್‌ ಅವರು ಸಂಕ್ಷಿಪ್ತ ವಾದ ಮಂಡಿಸಿದರು. ಫೆಬ್ರುವರಿ 1ರಂದು ಜಾನ್‌ ವಾದ ಮುಂದುವರಿಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com