![[ಲಖಿಂಪುರ್ ಖೇರಿ ಪ್ರಕರಣ] ಪ್ರಿಯಾಂಕಾ ಗಾಂಧಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲದ ಬಗ್ಗೆ ವಕೀಲರ ಆಕ್ಷೇಪ](http://media.assettype.com/barandbench-kannada%2F2021-10%2F44905141-f2b2-482e-bf5c-62ac29a892cf%2Fbarandbench_2021_10_c8c38038_a524_4e77_ae1e_d5acf2958383_42.jpg?w=480&auto=format%2Ccompress&fit=max)
![[ಲಖಿಂಪುರ್ ಖೇರಿ ಪ್ರಕರಣ] ಪ್ರಿಯಾಂಕಾ ಗಾಂಧಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲದ ಬಗ್ಗೆ ವಕೀಲರ ಆಕ್ಷೇಪ](http://media.assettype.com/barandbench-kannada%2F2021-10%2F44905141-f2b2-482e-bf5c-62ac29a892cf%2Fbarandbench_2021_10_c8c38038_a524_4e77_ae1e_d5acf2958383_42.jpg?w=480&auto=format%2Ccompress&fit=max)
ಲಖಿಂಪುರ್ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಅವರ ಪರ ವಕೀಲರು ಹೇಳಿದ್ದಾರೆ.
"ಅವರನ್ನು ಬಂಧಿಸಿರುವ ಅತಿಥಿ ಗೃಹ ಪ್ರವೇಶಿಸಲು ನಮಗೆ ಅವಕಾಶ ನೀಡುತ್ತಿಲ್ಲ. ಎಂಟು ಗಂಟೆಗೂ ಹೆಚ್ಚು ಸಮಯ ಹಿಡಿದಿದ್ದರೂ ಪೊಲೀಸರು ನಮಗೆ ಅವಕಾಶ ನೀಡುತ್ತಿಲ್ಲ ಯಾವುದೇ ಕಾನೂನು ಕಾರಣವಿಲ್ಲದೆ ಪೊಲೀಸ್ ಅಧಿಕಾರಿಗಳು ಅಕ್ರಮವಾಗಿ ಪ್ರಿಯಾಂಕಾ ಅವರನ್ನು ಬಂಧಿಸಿದ್ದು, ಅವರನ್ನು ಭೇಟಿ ಮಾಡಲು ನಾವು ಇಲ್ಲಿ ಇದ್ದೇವೆ " ಎಂದು ಉತ್ತರ ಪ್ರದೇಶದ ಸೀತಾಪುರದಲ್ಲಿ ಆಕೆಯನ್ನು ಭೇಟಿ ಮಾಡಲು ಬಂದ ವಕೀಲರಾದ ಶಹಾಬ್ ಅಹಮದ್ ಮತ್ತು ವರುಣ್ ಚೋಪ್ರಾ ʼಬಾರ್ ಅಂಡ್ ಬೆಂಚ್ʼಗೆ ಮಂಗಳವಾರ ಸಂಜೆ ತಿಳಿಸಿದ್ದರು.
ಸಂಸತ್ ಸದಸ್ಯ ದೀಪಿಂದರ್ ಹೂಡಾ ಮತ್ತು ಸಂದೀಪ್ ಸಿಂಗ್ ಸೇರಿದಂತೆ ಇತರ ನಾಲ್ಕು ವ್ಯಕ್ತಿಗಳೊಂದಿಗೆ ಲಖಿಂಪುರ್ ಖೇರಿಗೆ ಪ್ರಯಾಣಿಸುತ್ತಿದ್ದ ವೇಳೆ ಪ್ರಿಯಾಂಕಾ ಅವರನ್ನು ಅಕ್ಟೋಬರ್ 4 ರ ಮುಂಜಾನೆ 4 ಗಂಟೆಗೆ ಬಂಧಿಸಲಾಗಿತ್ತು.
ಈ ಮಧ್ಯೆ ಪ್ರಿಯಾಂಕಾ ಅವರು ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ “ನಾನು ಸಾಮಾಜಿಕ ಮಾಧ್ಯಮದಲ್ಲಿ ಒಂದು ಪತ್ರವನ್ನು ನೋಡಿದೆ. ಅದರಲ್ಲಿ ಅವರು 11 ಮಂದಿಯನ್ನು ಹೆಸರಿಸಿದ್ದಾರೆ, ಅವರಲ್ಲಿ 8 ಮಂದಿ ನನ್ನನ್ನು ಬಂಧಿಸುವ ವೇಳೆ ಇರಲಿಲ್ಲ. ವಾಸ್ತವವಾಗಿ, ಅಕ್ಟೋಬರ್ 4ರ ಮಧ್ಯಾಹ್ನ ಲಖನೌದಿಂದ ನನ್ನ ಬಟ್ಟೆಗಳನ್ನು ತಂದುಕೊಟ್ಟ ಇಬ್ಬರು ವ್ಯಕ್ತಿಗಳ ಹೆಸರನ್ನೂ ಸಹ ನೀಡಿದ್ದಾರೆ” ಎಂದು ಹೇಳಿದ್ದಾರೆ.
"ನನ್ನ ಜೊತೆಗಿದ್ದ ನಾಲ್ಕು ಜನರನ್ನು ಹೊರತುಪಡಿಸಿ ಯಾವುದೇ ಭದ್ರತಾ ಕಾರು ಅಥವಾ ಕಾಂಗ್ರೆಸ್ ಕಾರ್ಯಕರ್ತರು ನನ್ನೊಂದಿಗೆ ಇರಲಿಲ್ಲ" ಎಂದು ಅವರು ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ಹೊರಡಿಸಿದ ಸ್ಥಳೀಯ ಆದೇಶದ ಪ್ರಕಾರ, ಪ್ರಿಯಾಂಕಾ ವಿರುದ್ಧ ಐಪಿಸಿ ಸೆಕ್ಷನ್ 151, ಸೆಕ್ಷನ್ 107 ಮತ್ತು ಸೆಕ್ಷನ್ 116 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ನಾಯಕರೊಟ್ಟಿಗೆ ಇದ್ದ ತಮ್ಮ ಕಕ್ಷೀದಾರರ ವಿರುದ್ಧ ಹೂಡಲಾದ ಎಫ್ಐಆರ್ ಪ್ರತಿಯನ್ನು ಪೊಲೀಸ್ ಅಧಿಕಾರಿಗಳು ಇನ್ನೂ ಒದಗಿಸಿಲ್ಲ ಎಂದು ಪ್ರಿಯಾಂಕಾ ಪರ ವಕೀಲರು ತಿಳಿಸಿದ್ದಾರೆ.
ಲಖಿಂಪುರ್ ಖೇರಿಯಲ್ಲಿ ವಿವಾದಿತ ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿ 8 ಜನರ ಮೇಲೆ ವಾಹನ ಚಲಾಯಿಸಿದ ಆರೋಪದ ಹಿನ್ನೆಲೆಯ ಉತ್ತರಪ್ರದೇಶ (ಯುಪಿ) ಪೊಲೀಸರು ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 302 (ಕೊಲೆ), 120-ಬಿ (ಕ್ರಿಮಿನಲ್ಪಿತೂರಿ), 279 (ವೇಗವಾಗಿ ವಾಹನಚಾಲನೆ), 338 (ಘೋರಹಾನಿ), 304-ಎ (ನಿರ್ಲಕ್ಷ್ಯದಿಂದಸಾವು), 147 (ಗಲಭೆ) ಮತ್ತು 149 (ಅಕ್ರಮ ಸಭೆ ಸೇರುವಿಕೆ) ಅಡಿಯ ಅಪರಾಧಗಳಿಗಾಗಿ ಎಫ್ಐಆರ್ ದಾಖಲಿಸಲಾಗಿದೆ.