ಬಾಡಿಗೆ ಹಂತಕನೊಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ತಂಡದ ಜೆರ್ಸಿ ಧರಿಸಿರುವುದನ್ನು ತೋರಿಸುವ 'ಜೈಲರ್ʼ ಸಿನಿಮಾದ ದೃಶ್ಯಗಳನ್ನು ಡಿಜಿಟಲ್ ರೂಪದಲ್ಲಿ ಮಾರ್ಪಡಿಸುವುದಾಗಿ ಜೈಲರ್ ಸಿನಿಮಾ ನಿರ್ಮಾಪಕದರು ದೆಹಲಿ ಹೈಕೋರ್ಟ್‌ಗೆ ಆಶ್ವಾಸನೆ ನೀಡಿದ್ದಾರೆ [ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸನ್ ಪಿಕ್ಚರ್ಸ್, ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್ನ ಒಂದು ವಿಭಾಗ ಮತ್ತಿತರರ ನಡುವಣ ಪ್ರಕರಣ].
ಟೆಲಿವಿಷನ್, ಉಪಗ್ರಹ ಅಥವಾ ಯಾವುದೇ ಓವರ್-ದ-ಟಾಪ್ (OTT) ಪ್ಲಾಟ್‌ಫಾರ್ಮ್‌ನಲ್ಲಿ ಚಲನಚಿತ್ರ ಬಿಡುಗಡೆ ಮಾಡುವ ಮುನ್ನ ಹಂತಕ ಆರ್‌ಸಿಬಿ ಜೆರ್ಸಿ ಧರಸದಿರುವಂತೆ ಚಿತ್ರದ ದೃಶ್ಯಗಳನ್ನು ಸಂಕಲಿಸಲಾಗುವುದು ಎಂದು ಚಿತ್ರ ನಿರ್ಮಿಸಿರುವ ಸನ್ ಪಿಕ್ಚರ್ಸ್ ತಿಳಿಸಿದೆ. ಸೆಪ್ಟೆಂಬರ್ 1ರೊಳಗೆ ಥಿಯೇಟರ್ ಪ್ರದರ್ಶನದಲ್ಲಿಯೂ ಮಾರ್ಪಾಡು ಮಾಡಲಾಗುವುದು ಎಂದು ಕೂಡ ಅದು ಸ್ಪಷ್ಟಪಡಿಸಿದೆ.
ಆರ್‌ಸಿಬಿ ಮಾಲೀಕತ್ವದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೊಕದ್ದಮೆಯನ್ನು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಆಲಿಸಿದರು. ಚಿತ್ರದಲ್ಲಿ ಬಾಡಿಗೆ ಹಂತಕನ ಪಾತ್ರ ಆರ್‌ಸಿಬಿ ಜರ್ಸಿಯನ್ನು ಧರಿಸಿ ಮಹಿಳೆಯ ಬಗ್ಗೆ ಅವಹೇಳನಕಾರಿ ಮತ್ತು ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡುತ್ತದೆ ಎಂದು ಸನ್ ಟಿವಿ ವಿರುದ್ಧ ಆರ್‌ಸಿಬಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಋಣಾತ್ಮಕ ಪಾತ್ರ ಚಿತ್ರಣದ ವೇಳೆ ತನ್ನ ಅನುಮತಿಯಿಲ್ಲದೆ ಆರ್‌ಸಿಬಿ ಜೆರ್ಸಿಯನ್ನು ಬಳಸಲಾಗಿದೆ. ಇದು ಆರ್‌ಸಿಬಿ ಬ್ರ್ಯಾಂಡ್‌ಅನ್ನು ದುರ್ಬಲಗೊಳಿಸುವ ಮತ್ತು ಅವಹೇಳನ ಮಾಡುವ ಸಾಧ್ಯತೆ ಇದ್ದು ಬ್ರ್ಯಾಂಡ್ ಈಕ್ವಿಟಿ ಮತ್ತು ತನ್ನ ಪ್ರಾಯೋಜಕರ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಅರ್ಜಿದಾರರು ಹೇಳಿದ್ದರು.
ದೃಶ್ಯವನ್ನು ಡಿಜಿಟಲ್ ರೂಪದಲ್ಲಿ ಬದಲಿಸಲು ಒಪ್ಪಿಕೊಂಡಿರುವುದಾಗಿ ಎರಡೂ ಕಡೆಯ ವಕೀಲರು ನಂತರ ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಚಾರವನ್ನು ದಾಖಲಿಸಿಕೊಂಡ ನ್ಯಾ. ಪ್ರತಿಭಾ ಅರ್ಜಿಯನ್ನು ವಿಲೇವಾರಿ ಮಾಡಿದರು.
ಚಿತ್ರದಲ್ಲಿ ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್, ರಮ್ಯಾಕೃಷ್ಣ, ತಮನ್ನಾ ಮತ್ತಿತರರ ತಾರಾಗಣವಿದೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಪರವಾಗಿ ವಕೀಲರಾದ ಶ್ವೇತಾಶ್ರೀ ಮಜೂಂದಾರ್, ಪ್ರಿಯಾ ಅದ್ಲಾಖಾ ಮತ್ತು ವರದನ್ ಆನಂದ್ ಹಾಜರಿದ್ದರು. ಸನ್ ಗ್ರೂಪನ್ನು ವಕೀಲರಾದ ದೀಪಕ್ ಬಿಸ್ವಾಸ್, ಹರ್ಷ್ ಬುಚ್ ಹಾಗೂ ಸೃಷ್ಟಿ ಗುಪ್ತಾ ಪ್ರತಿನಿಧಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]