

ಸುಮಾರು ₹27,000 ಕೋಟಿ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ಟೆಕ್ ಗ್ರೂಪ್‌ನ ಪ್ರವರ್ತಕ ಅರವಿಂದ್ ಧಾಮ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಧಾಮ್ ಅವರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ರದ್ದುಗೊಳಿಸಿತು.
ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಒದಗಿಸಲಾಗಿರುವ ತ್ವರಿತ ವಿಚಾರಣೆಯ ಹಕ್ಕನ್ನು ಆಪಾದಿತ ಅಪರಾಧದ ಸ್ವರೂಪದ ಕಾರಣಕ್ಕೆ ದುರ್ಬಲಗೊಳಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
"ವಿಚಾರಣೆ ಆರಂಭವಾಗದೇ ಅಥವಾ ಸಮಂಜಸ ಪ್ರಗತಿ ಇಲ್ಲದೇವಿಚಾರಣಾಧೀನ ಕೈದಿಯನ್ನು ದೀರ್ಘಕಾಲದವರೆಗೆ ಸೆರೆವಾಸದಲ್ಲಿಡುವುದನ್ನು ಒಪ್ಪಲಾಗದು, ಏಕೆಂದರೆ ಇದು ವಿಚಾರಣಾಪೂರ್ವ ಬಂಧನವನ್ನು ಶಿಕ್ಷೆಯ ರೂಪವಾಗಿ ಪರಿವರ್ತಿಸುವ ಪರಿಣಾಮ ಬೀರುತ್ತದೆ. ಆರ್ಥಿಕ ಅಪರಾಧಗಳು, ಸ್ವಭಾವತಃ, ಪ್ರಮಾಣ ಹಾಗೂ ವಾಸ್ತವದಲ್ಲಿ ಭಿನ್ನವಾಗಿರಬಹುದು. ಆದ್ದರಿಂದ ಅವುಗಳನ್ನು ಒಂದೇ ರೀತಿ ಎಂದು ಪರಿಗಣಿಸಿ ಸಾಮೂಹಿಕವಾಗಿ ಜಾಮೀನು ನಿರಾಕರಿಸಲು ಆಗದು" ಎಂದು ತೀರ್ಪು ಹೇಳಿದೆ.
ಪ್ರಾಸಿಕ್ಯೂಷನ್ ದೂರಿನ ಬಗ್ಗೆ ಇನ್ನೂ ಸಂಜ್ಞೇಯ ಪರಿಗಣಿಸಿಲ್ಲ ಮತ್ತು ಪ್ರಕರಣ ಇನ್ನೂ ದಾಖಲೆಗಳ ಪರಿಶೀಲನೆಯ ಹಂತದಲ್ಲಿದೆ ಎಂದು ನ್ಯಾಯಾಲಯ ಹೇಳಿತು.
2025ರ ಸೆಪ್ಟೆಂಬರ್ 27ರಂದು ನಿತ್ಯ ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ತೀರ್ಪಿನ ಕುರಿತು, ಸುಮಾರು ಮೂರು ತಿಂಗಳು ಕಳೆದರೂ ಯಾವುದೇ ಮಾಹಿತಿ ಸಲ್ಲಿಸಲಾಗಿಲ್ಲ ಎಂದು ನ್ಯಾಯಾಲಯ ದಾಖಲಿಸಿದೆ. 210 ಸಾಕ್ಷಿಗಳನ್ನು ಪರೀಕ್ಷಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಕೂಡಲೇ ವಿಚಾರಣೆ ಆರಂಭವಾಗುವ ಸಾಧ್ಯತೆ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸಾಕ್ಷ್ಯಾಧಾರಗಳು ಮುಖ್ಯವಾಗಿ ದಾಖಲೆಯಾಗಿದ್ದು ಅವು ಈಗಾಗಲೇ ಪ್ರಾಸಿಕ್ಯೂಷನ್ ವಶದಲ್ಲಿರುವುದರಿಂದ, ಇಂತಹ ಪರಿಸ್ಥಿತಿಯಲ್ಲಿ ಬಂಧನ ಮುಂದುವರೆಸುವುದು 21ನೇ ವಿಧಿಯಡಿ ಮೇಲ್ಮನವಿದಾರನಿಗೆ ಒದಗಿಸಿರುವ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಧಾಮ್ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ನಿರಂಜನ್ ರೆಡ್ಡಿ ಹಾಗೂ ಕಾನೂನು ತಂಡ ವಾದ ಮಂಡಿಸಿತು.