ವಿಚಾರಣಾಧೀನ ಕೈದಿಗಳ ದೀರ್ಘಾವಧಿಯ ಸೆರೆವಾಸ ಅವರ ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮಾದಕ ವಸ್ತು ಪ್ರಕರಣದ ಆರೋಪಿಯಾಗಿರುವ ನೈಜೀರಿಯಾ ಪ್ರಜೆಯ ಜಾಮೀನು ಷರತ್ತುಗಳನ್ನು ಈಚೆಗೆ ಸಡಿಲಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ [ಎಜಿಕೆ ಜೋನಸ್ ಓರ್ಜೆ ಮತ್ತು ಮಾದಕವಸ್ತು ನಿಗ್ರಹ ದಳ ನಡುವಣ ಪ್ರಕರಣ].
ಆರೋಪಿ ಎಜಿಕೆ ಜೊನಾಸ್ ಓರ್ಜೆ ಒಂಬತ್ತು ವರ್ಷಗಳಿಂದ ಜೈಲಿನಲ್ಲಿದ್ದು, ಜಾಮೀನಿನ ಷರತ್ತಿನ ಪ್ರಕಾರ ಆತ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಕುರಿತಂತೆ ನೈಜೀರಿಯಾದ ಹೈಕಮಿಷನ್‌ನಿಂದ ಪ್ರಮಾಣಪತ್ರ ಪಡೆಯಬೇಕಿತ್ತು ಎಂಬ ವಿಚಾರವನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ಆಗಸ್ಟ್ 17 ರಂದು ಗಮನಿಸಿತು.
ದೆಹಲಿ ಹೈಕೋರ್ಟ್ ನಿಗದಿಪಡಿಸಿದ್ದ ಜಾಮೀನು ಷರತ್ತಿನಿಂದಾಗಿ ರಾಯಭಾರ ಕಚೇರಿಯ ಪ್ರಮಾಣಪತ್ರ ಪಡೆಯಬೇಕಿದ್ದುದರಿಂದ ಆತ ಜೂನ್ 2022 ರಲ್ಲಿ ಬಿಡುಗಡೆಯಾಗುವುದು ತಪ್ಪಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪೀಠ “ದೀರ್ಘಕಾಲದ ವಿಚಾರಣೆ ಎದುರಿಸುತ್ತಿರುವ ಆರೋಪಿಯ ಸ್ವಾತಂತ್ರ್ಯ ನ್ಯಾಯಾಲಯ ಗಮನಹರಿಸಲು ಯೋಗ್ಯವಾಗಿದೆ… ವಿಚಾರಣಾಧೀನ ಕೈದಿಗಳ ದೀರ್ಘಾವಧಿ ಸೆರೆವಾಸದಿಂದ ಅವರ ಸ್ವಾತಂತ್ರ್ಯ ಮತ್ತು ಘನತೆಗೆ ಸಂಬಂಧಿಸಿದಂತೆ ಸಂವಿಧಾನದತ್ತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಠಿಣ ಷರತ್ತಿನಿಂದಾಗಿ ಜಾಮೀನು ನೀಡಿದ್ದರೂ, ಆರೋಪಿಯ ಬಿಡುಗಡೆ ಸಾಧ್ಯವಾಗಲಿಲ್ಲ” ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತು.
ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಆರೋಪಿಯ ಮನವಿಯನ್ನು ಪುರಸ್ಕರಿಸಿ ಜಾಮೀನು ಷರತ್ತು ರದ್ದುಗೊಳಿಸಿತು. ಏಳು ವರ್ಷಗಳಾದರೂ ಪ್ರಕರಣದ ವಿಚಾರಣೆ ಇನ್ನೂ ಮುಕ್ತಾಯ ಕಂಡಿಲ್ಲ. ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿಯ ವಿಶೇಷ ನ್ಯಾಯಾಲಯ ಈ ಬಗೆಯ 400 ಪ್ರಕರಣಗಳ ವಿಚಾರಣೆಯ ಹೊರೆ ಹೊತ್ತಿದೆ ಎಂದು ಪೀಠ ಇದೇ ವೇಳೆ ವಿವರಿಸಿತು.