ಆಸ್ತಿ ವಿವಾದ: ಸಹೋದರರ ವಿರುದ್ಧ ಸಹೋದರಿ ದಾಖಲಿಸಿದ್ದ ಪೋಕ್ಸೊ ದೂರು ರದ್ದುಪಡಿಸಿದ ಹೈಕೋರ್ಟ್‌

ದೂರುದಾರೆ ಸಹೋದರಿಯಾಗಿದ್ದು, ತನ್ನ ಸಹೋದರರ ವಿರುದ್ಧ ಹಲವು ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ಆಸ್ತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಹೋದರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ದಾಖಲಿಸಿರುವ ಪ್ರಕರಣ ಒಪ್ಪಲು ಸಾಧ್ಯವಿಲ್ಲ ಎಂದಿರುವ ಪೀಠ.
Karnataka HC and POCSO
Karnataka HC and POCSO
Published on

ಒಡಹುಟ್ಟಿದವರು ಆಸ್ತಿಗಾಗಿ ಹೋರಾಟ ನಡೆಸುತ್ತಿದ್ದು, ಪ್ರತೀಕಾರಕ್ಕೆ ದಾಖಲಿಸಿರುವ ಪೋಕ್ಸೊ ಪ್ರಕರಣವನ್ನು ಒಪ್ಪಲಾಗದು ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪ್ರಕರಣ ರದ್ದುಪಡಿಸಿದೆ.

ಬೆಂಗಳೂರಿನ ನಿವಾಸಿಗಳಾದ ಏಳು ಮಂದಿ ಸಹೋದರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಪುರಸ್ಕರಿಸಿದೆ.

“ದೂರು ನೀಡಿರುವ ಮಹಿಳೆ ಅರ್ಜಿದಾರರ ಸಹೋದರಿಯಾಗಿದ್ದು, ತನ್ನ ಸಹೋದರರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆ ಮೂಲಕ ಆಸ್ತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಹೋದರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ದಾಖಲಿಸಿರುವ ಪ್ರಕರಣ ಒಪ್ಪಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ತನಿಖೆ ಮುಂದುವರೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗಲಿದೆ” ಎಂದು ನ್ಯಾಯಾಲಯ ಹೇಳಿದೆ.

“ಪೋಕ್ಸೊ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ದೂರುದಾರರ ಮಹಿಳೆಯ ಕೂದಲನ್ನು ಎಳೆಯಲಾಗಿದೆ. ಬಟ್ಟೆಗಳನ್ನು ಹರಿದು ಹಾಕಲಾಗಿದೆ ಎಂಬ ಹೇಳಿಕೆ ಹೊರತುಪಡಿಸಿ, ಅರ್ಜಿದಾರರು ಸಂತ್ರಸ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಅಂಶಗಳಿಲ್ಲ” ಎಂದು ಆದೇಶದಲ್ಲಿ ವಿವರಿಸಿದೆ.

ಸುಪ್ರೀಂ ಕೋರ್ಟ್​ ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು ಎಫ್​ಐಆರ್​ ದಾಖಲಿಸಿವುದಕ್ಕೆ ಕಾರಣವಾಗಿರುವ ಎಲ್ಲ ಅಂಶಗಳನ್ನು ಪರಿಗಣಿಸಿಬೇಕು. ಕೆಲವು ಸಂದರ್ಭಗಳಲ್ಲಿ ಖಾಸಗಿ ಅಥವಾ ವೈಯಕ್ತಿಕ ದ್ವೇಷದಿಂದ ಪ್ರತೀಕಾರಕ್ಕಾಗಿ ಪ್ರಕರಣ ದಾಖಲಿಸಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ಪ್ರಕರಣ ರದ್ದುಪಡಿಸಬಹುದು ಎಂದು ಹೇಳಿದೆ ಎಂದು ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ದೂರುದಾರರು ಮತ್ತು ಅರ್ಜಿದಾರರು  ಒಡಹುಟ್ಟಿದವರಾಗಿದ್ದು, ದೂರುದಾರೆಯ ತಾಯಿ ಮರಣದ ನಂತರ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿತ್ತು. ಇದೇ ಕಾರಣದಿಂದ ಎರಡೂ ಬಣಗಳ ನಡುವೆ ಹಲವಾರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿವೆ.

ದೂರುದಾರೆಯು ಬೆಂಗಳೂರಿನ ಕೆ ಆರ್​ ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನ ಅನ್ವಯ 2024ರ ಮೇ 18ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ದೂರುದಾರೆಯ ಮಗ ಮತ್ತು ಅಪ್ರಾಪ್ತ ಮಗಳು ವಾಯು ವಿಹಾರಕ್ಕಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರ ಸಹೋದರಿಯನ್ನು ಕೊಲ್ಲುವ ಸಲುವಾಗಿ ಹಿಂಬಾಲಿಸಿಕೊಂಡು ಆಕೆಯ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ ಎನ್ನಲಾಗಿತ್ತು.

ಈ ಸಂಬಂಧ ಪೋಕ್ಸೊ ಕಾಯಿದೆ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು 12 (ಲೈಂಗಿಕ ಕಿರುಕುಳ) ಮತ್ತು ಐಪಿಸಿ ಸೆಕ್ಷನ್ 354 (ಮಹಿಳೆಯ ಗೌರವಕ್ಕೆ ಧಕ್ಕೆ), 506 (ಬೆದರಿಕೆ) ಮತ್ತು 34 (ಸಮಾನ ಉದ್ದೇಶ) ಅಡಿ ಎಫ್ಐಆರ್ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಲಕ್ಷ್ಮಿ ಐಯ್ಯಂಗಾರ್‌ ಮತ್ತು ವಕೀಲ ಎಂ ಡಿ ಅನುರಾಧ ಅರಸ್‌ ಅವರು ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೊಂದು ಪ್ರತಿಕಾರದ ಆರೋಪವಾಗಿದ್ದು, ಅರ್ಜಿದಾರರನ್ನು ಪ್ರಕರಣದಲ್ಲಿ ಸಿಲುಕಿಸಲು ಬಿಂಬಿಸಲಾಗಿದ್ದು, ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ದೂರುದಾರೆಯ ಪರ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌, ಸರ್ಕಾರದ ವಕೀಲ ಆರ್‌ ರಂಗಸ್ವಾಮಿ ಮತ್ತು ವಕೀಲ ರಾಜೇಶ್‌ ಗೌಡ ಅವರು “ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬಾರದು” ಎಂದು ತಿಳಿಸಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com