ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದಾಗ ಮಾಸ್ಕ್ ಧರಿಸದ ಸಂಸದ ತೇಜಸ್ವಿ ಸೂರ್ಯ ಮತ್ತು ಇತರೆ ರಾಜಕೀಯ ನಾಯಕರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ರಾಜ್ಯ ಸರ್ಕಾರದ ನಿಲುವಿಗೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸುವ ರಾಜಕಾರಣಿಗಳನ್ನು ರಕ್ಷಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದ್ದು, ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಿಲ್ಲ ಎಂದಿದೆ ಎಂದು ಕಿಡಿಕಾರಿತು. ಪ್ರಕರಣವನ್ನು ನವೆಂಬರ್ 24ಕ್ಕೆ ಮುಂದೂಡಲಾಗಿದೆ.
“ನಿರ್ದಿಷ್ಟ ವರ್ಗವನ್ನು (ರಾಜಕಾರಣಿಗಳು) ರಕ್ಷಿಸುವ ಇರಾದೆಯನ್ನು ರಾಜ್ಯ ಸರ್ಕಾರ ಹೊಂದಿರುವುದು ಗೋಚರಿಸುತ್ತಿದೆ… ಈ ರೀತಿಯಲ್ಲಿ ಮತ್ತೊಬ್ಬರನ್ನು ನೀವು ಹೇಗೆ ರಕ್ಷಿಸಲು ಸಾಧ್ಯ?” ಎಂದು ಪೀಠ ಪ್ರಶ್ನಿಸಿತು.
“ಮಾಸ್ಕ್/ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಇರಾದೆಯನ್ನು ಸರ್ಕಾರ ಹೊಂದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳದೇ ಇರುವುದು ಸರ್ಕಾರದ ಏಕರೂಪದ ನಿಯಮವಾಗಿದೆ. ಅಪರಾಧಕ್ಕೆ 250/100 ರೂಪಾಯಿ ದಂಡ ವಿಧಿಸುವುದು ಸಾಕು” ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ರಾಜ್ಯ ಸರ್ಕಾರ ವಿವರಿಸಿದೆ.
“ತಪ್ಪು ಮಾಡಿದ ಮೇಲೆ ಕಾನೂನು ಕ್ರಮಕೈಗೊಳ್ಳುವುದಿಲ್ಲ ಎಂಬ ನಿಲುವನ್ನು ರಾಜ್ಯ ಸರ್ಕಾರ ಕೈಗೊಳ್ಳಬಹುದೇ? ಅಪಾರ ಸಂಖ್ಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ನೀವು ಏನನ್ನೂ ಮಾಡುತ್ತಿಲ್ಲ” ಎಂದು ಪೀಠವು ಸರ್ಕಾರಕ್ಕೆ ಹೇಳಿತು.
ರಾಜಕೀಯ ಸಮಾವೇಶಗಳಲ್ಲಿ ನಿಯಮ ಉಲ್ಲಂಘಿಸುವವರ ಪರವಾಗಿ ಸಂಘಟಕರಿಗೆ 50,000 ರೂಪಾಯಿ ವರೆಗೂ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರಿ ವಕೀಲ ವಿಕ್ರಂ ಹುಯಿಲಗೋಳ ಪೀಠಕ್ಕೆ ವಿವರಿಸಿದರು.
“ಸರ್ಕಾರದ ಪ್ರಾಮಾಣಿಕತೆಯನ್ನು ಪರಾಮರ್ಶೆಗೆ ಒಳಪಡಿಸೋಣ. 3-4 ರಾಜಕೀಯ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದ ಜನರು ಮಾಸ್ಕ್ ಧರಿಸಿರಲಿಲ್ಲ. ಅಂಥ ಸಮಾವೇಶ ಸಂಘಟಿಸಿದ ಆಯೋಜಕರಿಗೆ ಎಷ್ಟು ದಂಡ ವಿಧಿಸಲಾಗಿದೆ?” ಎಂದು ಪೀಠವು ಸರ್ಕಾರದ ಪ್ರತಿಕ್ರಿಯೆ ಕೇಳಿತು.
"ಸೆಪ್ಟೆಂಬರ್ 30ರಂದು ಮಾಸ್ಕ್ ಧರಿಸದೇ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ 680 ಮಂದಿಗೆ ದಂಡ ವಿಧಿಸಲಾಗಿದೆ" ಎಂದು ಸರ್ಕಾರದ ಪರ ವಕೀಲರು ಪೀಠಕ್ಕೆ ಪ್ರತಿಕ್ರಿಯಿಸಿದರು.
“ಎಲ್ಲಾ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಪ್ರಕರಣದಲ್ಲಿ ಸೇರಿಸಲಾಗುವುದು. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಜಾರಿಗೊಳಿಸುವ ಸಂಬಂಧ ಅವರಿಂದ ಭರವಸೆ ಪಡೆಯಲಾಗುವುದು” ಎಂದು ಪೀಠವು ಮೌಖಿಕವಾಗಿ ನುಡಿಯಿತು.