ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಇದೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಮುಖ್ಯ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಭಾರಿ ನಿರ್ದೇಶಕರು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮಂಗಳವಾರ ನಡೆದ ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಸಮಿತಿಯ ಸಭೆಯ ನಿರ್ಣಯದಂತೆ ರಾಜ್ಯದ ನಾಲ್ಕು ಕೇಂದ್ರಗಳಲ್ಲಿ ಮೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಮುಖ್ಯ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ದಿನ ಪ್ರಕಟಿಸಲಾಗುವುದು ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಭಾರಿ ನಿರ್ದೇಶಕರು ಮತ್ತು ನೇಮಕಾತಿ ಸದಸ್ಯ ಕಾರ್ಯದರ್ಶಿ ಎಚ್ ಕೆ ಜಗದೀಶ್ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಸಹಾಯಕ ಸರ್ಕಾರಿ ಅಭಿಯೋಜಕರ ಪರೀಕ್ಷೆ ಶೀಘ್ರದಲ್ಲೇ ಆರಂಭವಾಗುವ ಹಿನ್ನೆಲೆಯಲ್ಲಿ ಹಳೆಯ ವಿಧಾನದಲ್ಲಿಯೇ ಪರೀಕ್ಷೆ ನಡೆಸಬೇಕು. ಪರೀಕ್ಷೆಗೂ ಮುನ್ನ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟಿಸಿ ಕನಿಷ್ಠ 15 ದಿನ ಕಾಲಾವಕಾಶ ನೀಡಬೇಕು ಎಂದು ಕೋರಿ ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ಮೊಕದ್ದಮೆ ವಿಭಾಗದ ನಿರ್ದೇಶಕರಿಗೆ ಬೆಂಗಳೂರು ವಕೀಲರ ಸಂಘ ಈಚೆಗೆ ಮನವಿ ಮಾಡಿತ್ತು.
ಸಹಾಯಕ ಸರ್ಕಾರಿ ಅಭಿಯೋಜಕರ ಪೂರ್ವಭಾವಿ ಪರೀಕ್ಷೆಯಲ್ಲಿ 2,000ಕ್ಕೂ ಅಧಿಕ ಅಭ್ಯರ್ಥಿಗಳು ಪಾಸು ಮಾಡಿದ್ದು, ಮುಖ್ಯ ಪರೀಕ್ಷೆಗೆ 1,700 ಮಂದಿಯನ್ನು ಮಾತ್ರ ಆಹ್ವಾನಿಸಲಾಗಿದೆ. ಇದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ. ಮಾದರಿ ಪ್ರಶ್ನೆ ಪತ್ರಿಕೆ-1ದಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳನ್ನು ಕೇಳಲಾಗಿದೆ. ಹಳೆಯ ವಿಧಾನಕ್ಕೆ ಬದಲಾಗಿ ಹೊಸ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ರೂಪಿಸಲಾಗಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ. ಇದು ಪರೀಕ್ಷಾರ್ಥಗಳಲ್ಲಿ ಆತಂಕ ಉಂಟು ಮಾಡಿದೆ. ಹೀಗಾಗಿ, ಪ್ರಾಸಿಕ್ಯೂಷನ್ ನಿರ್ದೇಶಕರು ಮತ್ತು ಗೃಹ ಇಲಾಖೆಯು ಸ್ಪಷ್ಟನೆ ನೀಡುವ ಮೂಲಕ ಅಭ್ಯರ್ಥಿಗಳಲ್ಲಿ ಆತಂಕ ದೂರಮಾಡಬೇಕು ಎಂದು ಕೋರಲಾಗಿತ್ತು.
ಹಲವು ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಅವರನ್ನು ಏತಕ್ಕಾಗಿ ಮುಖ್ಯ ಪರೀಕ್ಷೆಗೆ ಆಹ್ವಾನಿಸಿಲ್ಲ ಎಂಬುದನ್ನು ತಿಳಿಸಬೇಕು. ಅಲ್ಲದೇ, ಅವರಿಗೂ ಮುಖ್ಯ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಪರೀಕ್ಷೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ಕಾನೂನು ಶಾಲೆಯು ಪ್ರಶ್ನೆಗಳು ಪಠ್ಯಕ್ರಮಕ್ಕೆ ಸೀಮಿತವಾಗಿರುವಂತೆ ಖಾತರಿಪಡಿಸಬೇಕು. ಬಹುತೇಕ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಈ ಹಂತದಲ್ಲಿ ಪರೀಕ್ಷಾ ವಿಧಾನ ಬದಲಿಸುವುದರಿಂದ ಸಮಸ್ಯೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.