ಆರೋಪಿಯನ್ನೇ ವಿವಾಹವಾದ ಸಂತ್ರಸ್ತೆ: ಪೋಕ್ಸೊ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಆರೋಪಿ ಹಾಗೂ ತಾನು ಸಮ್ಮತಿಯಿಂದಲೇ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ಸಂತ್ರಸ್ತೆಯೇ 2019ರ ಅಕ್ಟೋಬರ್‌ನಲ್ಲಿ ಅಧೀನ ನ್ಯಾಯಾಲಯದ ಮುಂದೆ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದಾರೆ. ದಂಪತಿಗೆ ಮಗು ಜನಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿರುವ ಪೀಠ.
Karnataka HC and POCSO
Karnataka HC and POCSO

ಅಪ್ತಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪ ಕುರಿತ ಪ್ರಕರಣದಲ್ಲಿ ಆರೋಪಿಯನ್ನೇ ಸಂತ್ರಸ್ತೆ ಮದುವೆಯಾದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ದೋಷಾರೋಪ‌ ಪಟ್ಟಿ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

17 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರದ ಮಾಡಿದ ಆರೋಪ ಸಂಬಂಧ ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ದೋಷಾರೋಪ ಪಟ್ಟಿ ಮತ್ತು ಪ್ರಕರಣ ಕುರಿತ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ 23 ವರ್ಷದ ಆರೋಪಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಸಿದೆ.

Justice M Nagaprasanna
Justice M Nagaprasanna

ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪ ಅರ್ಜಿದಾರರ (ಆರೋಪಿ) ಮೇಲಿದೆ. ಆದರೆ, ಅರ್ಜಿದಾರ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು.‌ ಸಂತ್ರಸ್ತೆಗೆ 18 ವರ್ಷ ತುಂಬಿದ ಮೇಲೆ‌ ಆಕೆ ಆರೋಪಿಯನ್ನು ಸ್ವಇಚ್ಛೆ ಮೇರೆಗೆ ಮದುವೆಯಾಗಿದ್ದಾರೆ. ಮದುವೆ ನಂತರ ಒಂದು ವರ್ಷದ ಬಳಿಕ‌ ದಂಪತಿಗೆ ಮಗು ಜನಿಸಿದೆ.‌ ಸದ್ಯ ಆಕೆ ಅರ್ಜಿದಾರನೊಂದಿಗೆ ವಾಸವಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಪಿ ವಿರುದ್ಧದ ಪ್ರಕರಣ ಮುಂದುವರಿಯವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಆರೋಪಿ ಹಾಗೂ ತಾನು ಸಮ್ಮತಿಯಿಂದಲೇ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ಸಂತ್ರಸ್ತೆಯೇ 2019ರ ಅಕ್ಟೋಬರ್‌ನಲ್ಲಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದಾರೆ.‌ 2020ರ ಮಾರ್ಚ್‌ನಲ್ಲಿ ಸಂತ್ರಸ್ತೆಗೆ 18 ವರ್ಷದ ತುಂಬಿದೆ. 2020ರ ಜೂನ್ ನಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿರುವ ಸಂತ್ರಸ್ತೆಯು ತಾನು ಹಾಗೂ ಅರ್ಜಿದಾರ ಪರಸ್ಪರ ಪ್ರೀತಿಸುತ್ತಿದ್ದೆವು. ಸಮ್ಮತಿಯಿಂದಲೇ ಲೈಂಗಿಕ ಸಂಪರ್ಕ ಬೆಳೆಸಿದೆವು ಎಂದು ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿಯೇ ವಿಚಾರಣಾಧೀನ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿತ್ತು ಎಂದು ಆದೇಶದಲ್ಲಿ ಹೈಕೋರ್ಟ್‌ ಉಲ್ಲೇಖಿಸಿದೆ.

ಸಂತ್ರಸ್ತೆಯು 2020ರ ಅಕ್ಟೋಬರ್‌ನಲ್ಲಿ ಆರೋಪಿಯನ್ನು ಮದುವೆಯಾಗಿದ್ದಾರೆ. ಅದೇ ದಿನ ಅವರ ಮದುವೆ ನೋಂದಣಿಯಾಗಿದೆ. 2021ರ ಡಿಸೆಂಬರ್‌ನಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ.‌ ಹಾಗಾಗಿ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಿವುದು ಅರ್ಥಹೀನ ಎಂದಿರುವ ಹೈಕೋರ್ಟ್‌ ಪ್ರಕರಣ ರದ್ದುಪಡಿಸಿದೆ.

ಸಂತ್ರಸ್ತೆಯ ತಂದೆಯು 17 ವರ್ಷದ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ, 2019ರ ಮಾರ್ಚ್‌ನಲ್ಲಿ ಬನ್ನೇರುಘಟ್ಟ ಠಾಣಾ ಪೋಲೀಸರಿಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರನ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ‌ ಸಂಬಂಧ ಪೋಕ್ಸೊ ಕಾಯಿದೆ ಅಡಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ 2022ರ ಜುಲೈನಲ್ಲಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com