ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಏಕರೂಪವಾಗಿ ಸರ್ಕಾರದ ನೆರವಿನ ನಿಯಮ ಅನ್ವಯವಾಗಬೇಕು: ಸುಪ್ರೀಂ

ಸಂವಿಧಾನದ 30ನೇ ವಿಧಿ ಕಾನೂನನ್ನು ಮೀರಿದ ಸಂಪೂರ್ಣ ಹಕ್ಕಲ್ಲ. ಅಲ್ಪಸಂಖ್ಯಾತವೇ ಇರಲಿ ಬಹುಸಂಖ್ಯಾತ ಶಿಕ್ಷಣ ಸಂಸ್ಥೆಯೇ ಇರಲಿ ಅನುದಾನದ ನಿಯಮಾವಳಿಗಳು ಏಕರೂಪವಾಗಿ ಅನ್ವಯವಾಗಬೇಕು ಎಂದ ನ್ಯಾಯಾಲಯ.
ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಏಕರೂಪವಾಗಿ ಸರ್ಕಾರದ ನೆರವಿನ ನಿಯಮ ಅನ್ವಯವಾಗಬೇಕು: ಸುಪ್ರೀಂ
A1

ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಟ್ಟ ಶಿಕ್ಷಣ ಸಂಸ್ಥೆಗಳು ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ನೀಡುವ ಅಥವಾ ನೀಡದಿರುವ ಶಾಸನಬದ್ಧ ನಿಯಮಾವಳಿಗಳನ್ನು ಏಕರೂಪವಾಗಿ ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ [ಗುಜರಾತ್ ಸರ್ಕಾರ ಮತ್ತಿತರರು ಹಾಗೂ ಎಚ್‌ ಬಿ ಕಪಾಡಿಯಾ ಶಿಕ್ಷಣ ಟ್ರಸ್ಟ್ ನಡುವಣ ಪ್ರಕರಣ].

ಸಂವಿಧಾನದ 30ನೇ ವಿಧಿಯ (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕುಗಳು) ಅಡಿಯಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳ ಹಕ್ಕುಗಳು ಆತ್ಯಂತಿಕವಲ್ಲ ಮತ್ತು ಅದು ಕಾನೂನಿಗಿಂತ ಮಿಗಿಲಲ್ಲ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ವಿಭಾಗೀಯ ಪೀಠ ಪುನರುಚ್ಚರಿಸಿದೆ.

Also Read
ಅಲ್ಪಸಂಖ್ಯಾತ ಸ್ಥಾನಮಾನ ನಿರ್ಧರಣ ಅಧಿಕಾರ ಕೇಂದ್ರದಲ್ಲಿಯೇ ಮುಂದುವರೆಯಲಿ: ಸುಪ್ರೀಂ ಮುಂದೆ ಕರ್ನಾಟಕದ ನಿಲುವು

"ಟಿಎಂಎ ಪೈ ಪ್ರತಿಷ್ಠಾನ ಮತ್ತಿತರರು ಹಾಗೂ ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ಹೇಳಿರುವಂತೆ ಸಂವಿಧಾನದ 30 (1)ನೇ ವಿಧಿ, ಕಾನೂನನ್ನು ಮೀರಿದ ಸಂಪೂರ್ಣ ಹಕ್ಕಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೇ ಇರಲಿ ಬಹುಸಂಖ್ಯಾತವೇ ಇರಲಿ ಅನುದಾನದ ನಿಯಮಾವಳಿಗಳು ಏಕರೂಪವಾಗಿ ಅನ್ವಯವಾಗಬೇಕು” ಎಂದು ಪೀಠ ನುಡಿಯಿತು.

ನಿಗದಿತ ನಿವೃತ್ತಿ ವಯೋಮಿತಿ ಮೀರಿ ಪ್ರಾಂಶುಪಾಲರ ಸೇವೆ ಮುಂದುವರಿಸಿರುವ ಗುಜರಾತ್‌ನ ಜೈನ ಸಮುದಾಯ ನಡೆಸುತ್ತಿರುವ ಅಲ್ಪಸಂಖ್ಯಾತ ಮಾಧ್ಯಮಿಕ ಶಾಲೆಗೆ ಅನುದಾನ ನೀಡುವುದರ ವಿರುದ್ಧ ತೀರ್ಪು ನೀಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಾಂಶುಪಾಲರ ವೇತನವೂ ಸೇರಿದಂತೆ ಅನುದಾನ ನೀಡಬೇಕು ಎಂದು ಗುಜರಾತ್‌ ಹೈಕೋರ್ಟ್‌ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.

ಹಿನ್ನೆಲೆ

ಶಾಲೆಯ ಪ್ರಾಂಶುಪಾಲರಿಗೆ  1999ರಲ್ಲಿ ನಿವೃತ್ತಿಯ ವಯಸ್ಸು ಅಂದರೆ 58 ವರ್ಷಗಳಾಗಿದ್ದವು. ಅವರ ಸೇವೆ ಮುಂದುವರಿಸಲು ಸಂಸ್ಥೆ ಕೋರಿದಾಗ ವೇತನವನ್ನು ಸಂಸ್ಥೆಯೇ ಭರಿಸಬೇಕು ಎಂಬ ಷರತ್ತಿನೊಂದಿಗೆ ಸರ್ಕಾರ ಪ್ರಾಂಶುಪಾಲರ ಸೇವೆಯನ್ನು 60 ವರ್ಷಗಳವರೆಗೆ ವಿಸ್ತರಿಸಲು ಅನುಮತಿಸಿತು. 2001ರಲ್ಲಿ ಮತ್ತೆ ಪ್ರಾಂಶುಪಾಲರ ಸೇವೆ ವಿಸ್ತರಿಸಬೇಕೆಂಬ ಸಂಸ್ಥೆಯ ಕೋರಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿತು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯ ಸಂಸ್ಥೆಯ ಪರವಾಗಿ ತೀರ್ಪು ನೀಡಿತು. ಸಂವಿಧಾನದ 30ನೇ ವಿಧಿ ಉಲ್ಲಂಘಿಸಿ ರಾಜ್ಯ ಸರ್ಕಾರ ಅನುದಾನ ತಡೆ ಹಿಡಿದಿದೆ. 60 ವರ್ಷ ಮೀರಿದ ಪ್ರಾಂಶುಪಾಲರ ಸೇವೆಯನ್ನು ಮುಂದುವರಿಸುವ ಹಕ್ಕು ಶಾಲಾ ಆಡಳಿತ ಮಂಡಳಿಗೆ ಇದೆ. ಹೀಗಾಗಿ ಪಾವತಿಸಬೇಕಾದ ಅನುದಾನದ ಮೊತ್ತವನ್ನು ಲೆಕ್ಕ ಹಾಕಿ ಸಂಸ್ಥೆಗೆ ನೀಡಬೇಕಾದ ಬಾಕಿಯನ್ನು3 ತಿಂಗಳೊಳಗೆ ಪಾವತಿಸುವಂತೆ ಹೈಕೋರ್ಟ್‌ ಆ ಸಂದರ್ಭದಲ್ಲಿ ತಿಳಿಸಿತು. ಈ ತೀರ್ಪುನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಪುರಸ್ಕರಿಸಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಬದಿಗೆ ಸರಿಸಿದೆ.

Related Stories

No stories found.
Kannada Bar & Bench
kannada.barandbench.com