ತಾಂಡವ್ ವಿವಾದ: ಪ್ರಚೋದನಾಕಾರಿ ಸಾರ್ವಜನಿಕ ಅಭಿಪ್ರಾಯ, ದೇವರನ್ನು ಆಕ್ಷೇಪಾರ್ಹವಾಗಿ ಬಿಂಬಿಸಿದ್ದಕ್ಕೆ ಎಫ್‌ಐಆರ್ ದಾಖಲು

ʼತಾಂಡವ್‌ʼ ವೆಬ್‌ ಸೀರಿಸ್‌ ಪ್ರಸಾರ (ಸ್ಟ್ರೀಮಿಂಗ್)‌ ಮಾಡುತ್ತಿರುವ ಅಮೆಜಾನ್‌ ಭಾರತದ ಹಿರಿಯ ಅಧಿಕಾರಿ ಅಪರ್ಣಾ ಪುರೋಹಿತ್‌ಗೆ ನಿರೀಕ್ಷಣಾ ಜಾಮೀನು ಮಂಜೂರಿಗೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿನೋದ್‌ ಶಾಹಿ ವಿರೋಧ ವ್ಯಕ್ತಪಡಿಸಿದ್ದಾರೆ.
Tandav on Amazon Prime
Tandav on Amazon Prime
Published on

ʼತಾಂಡವ್‌ʼ ವೆಬ್‌ ಸೀರಿಸ್‌ನಲ್ಲಿ ದೇವರನ್ನು ಅವಹೇಳನಕಾರಿಯಾಗಿ ಬಿಂಬಿಸುವುದರ ಜೊತೆಗೆ ವೆಬ್‌ ಸೀರಿಸ್‌ ವೀಕ್ಷಿಸಿದ ಬಳಿಕ ಸಾರ್ವಜನಿಕ ಅಭಿಪ್ರಾಯ ಪ್ರಚೋದನಾಕಾರಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ತಯಾಕರ ವಿರುದ್ಧ ರಾಜ್ಯ ಸರ್ಕಾರವು ಎಫ್‌ಐಆರ್‌ ದಾಖಲಿಸಿದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠಕ್ಕೆ ಉತ್ತರ ಪ್ರದೇಶ ಸರ್ಕಾರ ವಿವರಿಸಿದೆ (ಅಪರ್ಣಾ ಪುರೋಹಿತ್‌ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ).

ಮೇಲಿನ ಕಾರಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿನೋದ್‌ ಶಾಹಿ ಅವರು ಅಮೆಜಾನ್‌ ಭಾರತದ ಕಾರ್ಯಕ್ರಮಗಳ ವಸ್ತು-ವಿಷಯದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಅವರ ನಿರೀಕ್ಷಣಾ ಜಾಮೀನು ಮನವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

“ಮೇಲೆ ಹೇಳಲಾದ ವೆಬ್‌ ಸೀರಿಸ್‌ನಲ್ಲಿ ಕೆಲವು ನಟರು ಬಳಸಿರುವ ಪದಗಳು ಮತ್ತು ದೃಶ್ಯಗಳ ಕಾರಣದಿಂದ ಹಾಗೂ ಕೆಲವು ದೃಶ್ಯಗಳಲ್ಲಿ ದೇವರನ್ನು ಅವಹೇಳನಕಾರಿಯಾಗಿ ಬಿಂಬಿಸಿರುವುದರಿಂಧ ಎಫ್‌ಐಆರ್‌ ದಾಖಲಿಸಲಾಗಿದೆ," ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿನೋದ್‌ ಶಾಹಿ ತಿಳಿಸಿದ್ದಾರೆ. "ವೆಬ್‌ ಸೀರಿಸ್‌ ವೀಕ್ಷಿಸಿದ ಬಳಿಕ ಸಾರ್ವಜನಿಕ ಅಭಿಪ್ರಾಯ ಪ್ರಚೋದನಾಕಾರಿಯಾಗಿದ್ದರಿಂದ ರಾಜ್ಯ ಸರ್ಕಾರವು ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ," ಎಂದಿದ್ದಾರೆ.

ಈ ಮಧ್ಯೆ, ಪ್ರತ್ಯುತ್ತರ ಅಫಿಡವಿಟ್‌ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೋರಿದ್ದ ಶಾಹಿ ಅವರಿಗೆ ನ್ಯಾಯಮೂರ್ತಿ ಅಲೋಕ್‌ ಮಾಥೂರ್‌ ಅವರಿದ್ದ ಏಕಸದಸ್ಯ ಪೀಠವು ಅನುಮತಿಸಿದೆ. ಪುರೋಹಿತ್‌ ಅವರಿಗೆ ಫೆಬ್ರುವರಿ 22ರ ವರೆಗೆ ಮಧ್ಯಂತರ ರಕ್ಷಣೆ ನೀಡಿರುವ ನ್ಯಾಯಾಲಯವು ವಿಚಾರಣೆಯನ್ನು ಅಲ್ಲಿಯವರೆಗೆ ಮುಂದೂಡಿದೆ.

Also Read
ತಾಂಡವ್‌ ವಿರುದ್ಧ ಎಫ್‌ಐಆರ್‌: ಅಮೆಜಾನ್‌ ಪ್ರೈಮ್‌ ಹಿರಿಯ ಅಧಿಕಾರಿ ಅಪರ್ಣಾ ಪುರೋಹಿತ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153-ಎ, 295-ಎ, 505(1)(ಬಿ), 505(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66 ಮತ್ತು 67ರ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. “ಐಪಿಸಿ ಮತ್ತು ಐಟಿ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ತಮ್ಮ ವಿರುದ್ಧ ದಾಖಲಿಸಿರುವ ದೂರಿಗೆ ಗರಿಷ್ಠ ಮೂರು ವರ್ಷಗಳ ಶಿಕ್ಷೆಯಾಗುತ್ತದೆ,” ಎಂದು ಪುರೋಹಿತ್‌ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ವೆಬ್‌ ಸೀರಿಸ್‌ನಿಂದ ತೆಗೆದುಹಾಕಲಾದ ದೃಶ್ಯಗಳ ಕುರಿತು ಪುರೋಹಿತ್‌ ಅವರು ಅಫಿಡವಿಟ್‌ ಸಲ್ಲಿಸಿದ್ದು, ಇದು ಪ್ರಧಾನ ಪೀಠವಾದ ಅಲಾಹಾಬಾದ್‌ ಹೈಕೋರ್ಟ್‌ ಮುಂದಿದೆ. ಸದರಿ ಪೀಠವು ಫೆಬ್ರವರಿ 4ರಂದು ಮಧ್ಯಂತರ ಜಾಮೀನು ನೀಡಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ನ್ಯಾಯಾಲಯವು, ಪ್ರಧಾನ ಪೀಠವು ಜಾಮೀನು ನೀಡಿರುವ ವಾಸ್ತವ ಸಂಗತಿಯನ್ನು ಗಣನೆಗೆ ತೆಗೆದುಕೊಂಡು ಅಪರ್ಣಾ ಪುರೋಹಿತ್‌ ವಿರುದ್ಧ ಮುಂದಿನ ವಿಚಾರಣೆವರೆಗೆ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಆದೇಶಿಸಿದೆ.

Kannada Bar & Bench
kannada.barandbench.com