ಪಿಎಸ್‌ಐ ಹಗರಣ: ಪ್ರತ್ಯೇಕ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ 8 ದಿನ ಕಾಲ ಸಿಐಡಿ ವಶಕ್ಕೆ

ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪೌಲ್‌ ಏಳನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಪೌಲ್‌ರನ್ನು ಸೆ.5ರಿಂದ 12ರವರೆಗೆ ಸಿಐಡಿ ವಶಕ್ಕೆ ನೀಡಿರುವ ನ್ಯಾಯಾಲಯ.
Senior IPS officer Amrit Paul and PSI Scam
Senior IPS officer Amrit Paul and PSI Scam

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಅವರನ್ನು ಸೋಮವಾರ ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯವು ಪ್ರತ್ಯೇಕ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಂಟು ದಿನಗಳ ಅವಧಿಗೆ ಸಿಐಡಿ ಪೊಲೀಸರ ವಶಕ್ಕೆ ನೀಡಿ ಮಹತ್ವದ ಆದೇಶ ಮಾಡಿದೆ.

ಸಿಐಡಿಯ ಡಿವೈಎಸ್‌ಪಿ ಎಸ್‌ ಶಿವಕುಮಾರ್‌ ಅವರ ಕೋರಿಕೆಯನ್ನು ಮನ್ನಿಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ್‌ ಅವರು ಸೆಪ್ಟೆಂಬರ್‌ 5ರಿಂದ ಸೆಪ್ಟೆಂಬರ್‌ 12ರವರೆಗೆ ಅಮೃತ್‌ ಪೌಲ್‌ ಅವರನ್ನು ತನಿಖೆಗಾಗಿ ಪೊಲೀಸ್‌ ವಶಕ್ಕೆ ನೀಡಿದ್ದಾರೆ.

ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಹುತ್ರಿ ಗ್ರಾಮದ ಎಚ್‌ ಬಿ ಹರೀಶ್‌ ಅವರನ್ನು ಆರೋಪಿಗಳು ಪಿಎಸ್‌ಐ ಲಿಖಿತ ಪರೀಕ್ಷೆಯಲ್ಲಿ ಪಾಸು ಮಾಡಿಸಿ, ಅಕ್ರಮವಾಗಿ ಆಯ್ಕೆ ಮಾಡಿಸಿದ್ದಾರೆ. ಇಲ್ಲಿ ಓಎಂಆರ್‌ ಶೀಟ್‌ ತಿದ್ದುಪಡಿ ಮಾಡಲು ಸಹಕರಿಸಿರುವ ವಿಚಾರ ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ನ್ಯಾಯಾಲಯಕ್ಕೆ ಸಿಆರ್‌ಪಿಸಿ ಸೆಕ್ಷನ್‌ 173 (8)ರ ಅಡಿ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ತನಿಖೆಗೆ ಅನುಮತಿ ಪಡೆಯಲಾಗಿದೆ ಎಂದು ಸಿಐಡಿಯು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಕೋರಿಕೆಯಲ್ಲಿ ತಿಳಿಸಿತ್ತು.

ಹಾಲಿ ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ಅಮೃತ್‌ ಪೌಲ್‌ ಅವರು ಲಕ್ಷಾಂತರ ರೂಪಾಯಿ ಪಡೆದು ಅಕ್ರಮ ಎಸಗಿರುವ ಸಾಧ್ಯತೆ ಇದೆ. ಕೃತ್ಯ ಎಸಗಲು ಪೌಲ್‌ ಅವರು ಬಳಸಿರಬಹುದಾದ ಮೊಬೈಲ್‌ ಸಿಮ್‌ ಕಾರ್ಡ್‌ಗಳ ಬಗ್ಗೆ ವಿಚಾರಣೆ ನಡೆಸಬೇಕಿದೆ. ಪೌಲ್‌ ಅವರು ಹೊಂದಿರುವ ಬ್ಯಾಂಕ್‌ ಖಾತೆಗಳ ವಿವರಗಳನ್ನು ಸಂಬಂಧಪಟ್ಟ ಬ್ಯಾಂಕ್‌ಗಳಿಂದ ಪಡೆದು, ಹಣದ ವರ್ಗಾವಣೆಯ ಕುರಿತು ತನಿಖೆ ನಡೆಸಬೇಕಿದೆ. ಆರೋಪಿಯ ಊರಿಗೆ ಭೇಟಿ ನೀಡಿ ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ. ಹೀಗಾಗಿ, ಅವರನ್ನು 14 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು ಸಿಐಡಿ ಕೋರಿತ್ತು. ಇದಕ್ಕೆ ಒಪ್ಪದ ನ್ಯಾಯಾಲಯವು ಪೌಲ್‌ ಅವರನ್ನು ಎಂಟು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿ ಆದೇಶ ಮಾಡಿದೆ. ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು ಸಿಐಡಿಯನ್ನು ಪ್ರತಿನಿಧಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ. ಈ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಹುತ್ರಿ ಗ್ರಾಮದ ಎಚ್‌ ಬಿ ಹರೀಶ್‌ ಮೊದಲ ಆರೋಪಿಯಾಗಿದ್ದು, ಬೆಂಗಳೂರಿನ ಪೀಣ್ಯ ಎರಡನೇ ಹಂತದ ಸಾಯಿಬಾಬ ಲೇಔಟ್‌ ನಿವಾಸಿ ಮನೋಜ್‌ ಎರಡನೇ ಆರೋಪಿಯಾಗಿದ್ದು, ಡಿ ಹರ್ಷ, ಶಾಂತಕುಮಾರ್‌, ಟಿ ಸಿ ಶ್ರೀನಿವಾಸ, ಹನುಮಂತರಾಯಪ್ಪ, ಅಮೃತ್‌ ಪಾಲ್‌ ಅವರು ಕ್ರಮವಾಗಿ ಮೂರಿಂದ ಏಳನೇ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 265, 468, 471, 420, 409, 120 (ಬಿ), 201 ಜೊತೆಗೆ 34, 36, 37ರ ಪ್ರಕರಣ ದಾಖಲಾಗಿದೆ.

Also Read
[ಪಿಎಸ್‌ಐ ಹಗರಣ] ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಜಾಮೀನು ಮನವಿ ತಿರಸ್ಕರಿಸಿದ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯ

ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಜುಲೈ 4ರಂದು ಬಂಧಿತರಾಗಿದ್ದ ಪೌಲ್‌ ಅವರು ಜುಲೈ 14ರ ವರೆಗೆ ಪೊಲೀಸ್‌ ವಶದಲ್ಲಿದ್ದರು. ಆನಂತರ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ಅಂದಿನಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದರು. ಈ ಪ್ರಕರಣದಲ್ಲಿ 34ನೇ ಆರೋಪಿಯಾಗಿರುವ ಪೌಲ್‌ ಅವರು ಎಸಿಎಂಎಂ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಎರಡೂ ಜಾಮೀನು ಮನವಿಗಳೂ ತಿರಸ್ಕೃತಗೊಂಡಿವೆ. ಇದೀಗ ಅವರನ್ನು ಪ್ರತ್ಯೇಕ ಪ್ರಕರಣದಲ್ಲಿ ತನಿಖೆಗಾಗಿ ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿದೆ.

Kannada Bar & Bench
kannada.barandbench.com