ಪಿಎಸ್‌ಐ ಹಗರಣ: ಸಮರ್ಪಕ ತನಿಖೆ ಮೂಲಕ ಇಲಾಖೆ ಗೌರವ ಉಳಿಸಲು ಸಿಐಡಿ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶನ

ಅರ್ಜಿದಾರರ ವಾದ ಆಲಿಸಿದ್ದ ನ್ಯಾಯಾಲಯವು ಹಗರಣದಲ್ಲಿ ಭಾಗಿಯಾಗಿರುವವರು ಮತ್ತು ತನಿಖೆಯ ಬಗ್ಗೆ ಮಾಹಿತಿ ನೀಡಲು ಸಿಐಡಿ ಡಿಜಿ ಮತ್ತು ತನಿಖಾಧಿಕಾರಿಯ ಖುದ್ದು ಹಾಜರಾತಿಗೆ ಕಳೆದ ವಿಚಾರಣೆಯಲ್ಲಿ ನಿರ್ದೇಶಿಸಿತ್ತು.
PSI exam scam and Karnataka HC
PSI exam scam and Karnataka HC

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆ ನಡೆಸಿ ಪೊಲೀಸ್ ಇಲಾಖೆಯ ಗೌರವ ಉಳಿಸಬೇಕು ಎಂದು ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸ್ ಮಹಾ ನಿರ್ದೇಶಕ ಪಿ ಎಸ್ ಸಂಧು ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ನಿರ್ದೇಶಿಸಿದೆ.

ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನದ ಸಿ ಎನ್ ಶಶಿಧರ್ ಮತ್ತು ಮಂಡ್ಯದ ಆರ್ ಶರತ್‌ಕುಮಾರ್ ಅವರ ಜಾಮೀನು ಮನವಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ನೇತೃತ್ವದ ಏಕ ಸದಸ್ಯ ಪೀಠವು ನಡೆಸಿತು.

ವಿಚಾರಣೆಗೆ ಹಾಜರಾಗಿದ್ದ ಸಿಐಡಿ ಡಿಜಿಪಿ ಪಿ ಎಸ್ ಸಂಧು ಅವರು ತನಿಖೆಯ ಪ್ರಗತಿ ಕುರಿತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.

ಆಗ ಸಂಧು ಅವರನ್ನು ಉದ್ದೇಶಿಸಿ ಪೀಠವು “ಪಿಎಸ್‌ಐ ನೇಮಕದಲ್ಲಿ ಭ್ರಷ್ಟಾಚಾರ ನಡೆದಿರುವುದು ಅತ್ಯಂತ ಗಂಭೀರ ವಿಚಾರ. ಪೊಲೀಸರು ಹಾಗೂ ಗಣ್ಯರು ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ವಿರುದ್ಧ ಆರೋಪಗಳಿವೆ. ಪೊಲೀಸ್ ಅಧಿಕಾರಿಗಳೇ ಮಧ್ಯವರ್ತಿಗಳಿದ್ದಾರೆ. ಹೀಗಾಗಿ, ಪ್ರತಿಯೊಂದು ಅಂಶದ ಕುರಿತು ಸೂಕ್ತ ಹಾಗೂ ಸಮರ್ಪಕ ತನಿಖೆ ನಡೆಸಬೇಕು. ಸತ್ಯ ಸಂಗತಿಯನ್ನು ಹೊರಗೆಡವಬೇಕು” ಎಂದು ನಿರ್ದೇಶಿಸಿತು.

“ಹಗರಣದ ಹಿಂದೆ ಯಾವುದೇ ಸಚಿವ, ಅಧಿಕಾರಿ ಅಥವಾ ಪ್ರಭಾವಿ ವ್ಯಕ್ತಿ ಇದ್ದರೂ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ನ್ಯಾಯಾಲಯವು ಪ್ರಕರಣದ ತನಿಖೆಯ ಮೇಲೆ ಸಂಪೂರ್ಣ ನಿಗಾ ವಹಿಸಲಿದೆ” ಎಂದಿತು.

ಅಂತಿಮವಾಗಿ ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ನಿಗದಿಪಡಿಸಿದ ಪೀಠವು ಅಂದು ಪ್ರಕರಣದ ತನಿಖೆಯ ಪ್ರಗತಿಯ ಕುರಿತು ಸಮಗ್ರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸಂಧು ಅವರಿಗೆ ಸೂಚಿಸಿತು.

ಅರ್ಜಿದಾರರ ವಾದವನ್ನು ಈ ಹಿಂದೆ ಆಲಿಸಿದ್ದ ನ್ಯಾಯಾಲಯವು ಹಗರಣದಲ್ಲಿ ಭಾಗಿಯಾಗಿರುವವರು ಮತ್ತು ತನಿಖೆಯ ಬಗ್ಗೆ ಮಾಹಿತಿ ನೀಡಲು ಸಿಐಡಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ತನಿಖಾಧಿಕಾರಿಯ ಖುದ್ದು ಹಾಜರಾತಿಗೆ ನಿರ್ದೇಶಿಸಿತ್ತು. ಅಲ್ಲದೇ, ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಜೂನ್‌ 23ರಂದು ಆದೇಶಿಸಿತ್ತು.

Also Read
ಪಿಎಸ್‌ಐ ಹಗರಣದ ರೂವಾರಿ ದಿವ್ಯಾಗೆ ಆಶ್ರಯ ನೀಡಿದ್ದ ಆರೋಪ: ಸುರೇಶ್‌ ಕಟಗಾಂವ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: 545 ಪಿಎಸ್‌ಐ ನೇಮಕಾತಿ ಹಗರಣದ ಸಂಬಂಧ ಹೈಗ್ರೌಂಡ್ಸ್ ಠಾಣಾ ಪೊಲೀಸರು 2022ರ ಏಪ್ರಿಲ್‌ 9ರಂದು ಮತ್ತು ಏಪ್ರಿಲ್‌ 30ರಂದು ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದರು. ಚನ್ನರಾಯಪಟ್ಟಣ ಪುರಸಭೆಯ ಜೆಡಿಎಸ್ ಸದಸ್ಯರಾಗಿರುವ ಶಶಿಧರ್ ಅವರನ್ನು ಸಿಐಡಿ ಪೊಲೀಸರು ಮೇ 12ರಂದು ಬಂಧಿಸಿದ್ದರು. ಅದೇ ಪ್ರಕರಣದಲ್ಲಿ ಶರತ್ ಕುಮಾರ್ ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಹೀಗಾಗಿ, ಜಾಮೀನು ನೀಡಬೇಕು ಎಂದು ಕೋರಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com