ಪಿಎಸ್‌ಐ ಹಗರಣದ ರೂವಾರಿ ದಿವ್ಯಾಗೆ ಆಶ್ರಯ ನೀಡಿದ್ದ ಆರೋಪ: ಸುರೇಶ್‌ ಕಟಗಾಂವ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಪಿಎಸ್‌ಐ ಹಗರಣದಲ್ಲಿ 21ನೇ ಆರೋಪಿಯಾಗಿರುವ ಸೊಲ್ಹಾಪುರದ ನಿವಾಸಿ ಸುರೇಶ್‌ ಕಟಗಾಂವ್‌ ಸಲ್ಲಿಸಿದ್ದ‌ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾ. ಎಂ ಜಿ ಉಮಾ ನೇತೃತ್ವದ ಪೀಠವು ವಿಚಾರಣೆ ನಡೆಸಿತ್ತು.
PSI Exam scam
PSI Exam scam

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ರೂವಾರಿ ಎನ್ನಲಾದ ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿಗೆ ಆಶ್ರಯ ಕಲ್ಪಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಸುರೇಶ್‌ ಕಟಗಾಂವ್‌ ಅವರಿಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಜಾಮೀನು ಮಂಜೂರು ಮಾಡಿದೆ. ಇಡೀ ಪಿಎಸ್‌ಐ ಹಗರಣದಲ್ಲಿ ಜಾಮೀನು ಪಡೆದಿರುವ ಮೊದಲ ಆರೋಪಿ ಸುರೇಶ್‌ ಕಟಗಾಂವ್‌ ಆಗಿದ್ದಾರೆ.

ಪಿಎಸ್‌ಐ ಹಗರಣದಲ್ಲಿ ಚೌಕ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ 21ನೇ ಆರೋಪಿಯಾಗಿರುವ ಸೊಲ್ಹಾಪುರದ ನಿವಾಸಿಯಾದ ಸುರೇಶ್‌ ಕಟಗಾಂವ್‌ ಸಲ್ಲಿಸಿದ್ದ‌ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತ್ತು.

ಆರೋಪಿ ಸುರೇಶ್‌ ಅವರು ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ನೀಡಬೇಕು. ಆರೋಪಿಯು ಇಂಥದ್ದೇ ಆರೋಪದಲ್ಲಿ ಭಾಗಿಯಾಗಬಾರದು, ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಅಥವಾ ಸಾಕ್ಷ್ಯ ತಿರುಚಬಾರದು. ನ್ಯಾಯಾಲಯದ ಸೂಚಿಸಿದಾಗ ಪೀಠದ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

Also Read
[ಪಿಎಸ್‌ಐ ಹಗರಣ] ಆರೋಪಿಗಳು ಎಸಗಿರುವ ಕೃತ್ಯವು ಮರಣ ದಂಡನೆ ಶಿಕ್ಷೆ ವಿಧಿಸುವ ಅಪರಾಧಕ್ಕಿಂತ ಗಂಭೀರವಾದದ್ದು: ನ್ಯಾಯಾಲಯ

ಕಲಬುರ್ಗಿಯ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120 (ಬಿ), 465, 468, 471, 410 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸುರೇಶ್‌ ಕಟಗಾಂವ್‌ 21ನೇ ಆರೋಪಿಯಾಗಿದ್ದಾರೆ. ಆರೋಪಿ ಪರವಾಗಿ ಹಿರಿಯ ವಕೀಲ ಸಂದೇಶ್‌ ಚೌಟ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com