ಉಚಿತ ಕೊಡುಗೆಗಳನ್ನು ನಿಷೇಧಿಸಿ ಎಂದು ಮನವಿ: ಮಹತ್ವದ ವಿಷಯ ಎಂದ ಸುಪ್ರೀಂ, ತ್ರಿಸದಸ್ಯ ಪೀಠದಿಂದ ನಡೆಯಲಿದೆ ವಿಚಾರಣೆ

ಉಚಿತ ಕೊಡುಗೆಯಾಗಿ ಇನ್ನು ಸೂರ್ಯ ಚಂದ್ರರನ್ನು ನೀಡುವುದಷ್ಟೇ ಬಾಕಿ ಉಳಿದಿದೆ; ಇದೆಲ್ಲಾ ಭ್ರಷ್ಟಾಚಾರ ಎಂದು ಅರ್ಜಿದಾರರು ದೂರಿದರು.
Supreme Court and Election Commission of india
Supreme Court and Election Commission of india
Published on

ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ವಾಗ್ದಾನ ಮಾಡುವುದು ಮತ್ತು ವಿತರಿಸುವ ವಿಷಯವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಗುರುವಾರ ಸಮ್ಮತಿ ಸೂಚಿಸಿದ್ದು ಇದು ಮಹತ್ವದ ಸಾರ್ವಜನಿಕ ಹಿತಾಸಕ್ತಿಯ ವಿಚಾರವಾಗಿದ್ದು ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ತಿಳಿಸಿದೆ [ಅಶ್ವಿನಿ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿರುವ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಿಜೆಐ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠದೆದುರು ಪ್ರಸ್ತಾಪಿಸಿದರು.

Also Read
'ವಿಧಿ 226ರ ಅಡಿ ಇ ಡಿ ರಿಟ್ ಅರ್ಜಿ ಸಲ್ಲಿಸಬಹುದೇ?' ಕೇರಳ, ತಮಿಳುನಾಡು ತಕರಾರಿನ ಕುರಿತು ವಿಚಾರಣೆ ನಡೆಸಲಿದೆ ಸುಪ್ರೀಂ

ಈ ಕಳವಳಕ್ಕೆ ತಲೆದೂಗಿದ ಸಿಜೆಐ ಕಾಂತ್‌ ವಿವರವಾದ ಪರಿಗಣನೆಗಾಗಿ ಪ್ರಕರಣವನ್ನು ವಿಸ್ತೃತ ಪೀಠದೆದುರು ಇರಿಸಲಾಗುವುದು ಎಂದರು.

“ಇದು ಅತ್ಯಂತ ಮಹತ್ವದ್ದಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದೆ… ಇದನ್ನು ಮೂವರು ನ್ಯಾಯಮೂರ್ತಿಗಳ ಪೀಠವೇ ವಿಚಾರಣೆ ನಡೆಸಬೇಕು.” ಎಂದ ಅವರು ಮಾರ್ಚ್‌ವರೆಗೆ ಕಾಯುವಂತೆ ಅರ್ಜಿದಾರರಿಗೆ ಸೂಚಿಸಿದರು.

ಉಪಾಧ್ಯಾಯ ಅವರು, ಮತದಾರರನ್ನು ಆಕರ್ಷಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು ವ್ಯಾಪಕವಾದ ವಾಗ್ದಾನಗಳನ್ನು ಹೆಚ್ಚಾಗಿ ಮಾಡುತ್ತಿವೆ. ಇದು ಭ್ರಷ್ಟಾಚಾರಕ್ಕೆ ಸಮ. ಈ ಸಂಬಂಧ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ವಿಚಾರಣೆ ವೇಳೆ ಕೋರಿದರು.

“ಐದು ವಿಧಾನಸಭಾ ಚುನಾವಣೆಗಳು ಬರಲಿವೆ.  ಉಚಿತ ಕೊಡುಗೆಯಾಗಿ ಇನ್ನು ಸೂರ್ಯ ಚಂದ್ರರನ್ನು ನೀಡುವುದಷ್ಟೇ ಬಾಕಿ ಉಳಿದಿದೆ; ಇದೆಲ್ಲಾ ಭ್ರಷ್ಟಾಚಾರ” ಎಂದು ಅವರು ದೂರಿದರು.

ಚುನಾವಣಾ ಘೋಷಣೆಗಳನ್ನು ನಿಯಂತ್ರಿಸಬೇಕು ಹಾಗೂ ಸಾರ್ವಜನಿಕ ನಿಧಿಗಳನ್ನು ಒಳಗೊಂಡ ವಾಗ್ದಾನಗಳಿಗೆ ಉತ್ತರದಾಯಿತ್ವ ಇರುವಂತೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದರು.

Also Read
ಆಸಿಡ್ ದಾಳಿ ಆರೋಪಿಗಳ ಆಸ್ತಿ ಹರಾಜು: ಸುಪ್ರೀಂ ಕೋರ್ಟ್‌ ಸಲಹೆ

ಆದರೆ ಈ ಅರ್ಜಿಗೆ ವಿವಿಧ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ಇದೊಂದು ರಾಜಕೀಯ ಪ್ರೇರಿತ ಅರ್ಜಿ ಎಂದಿವೆ. ಇನ್ನೂ ಕೆಲವು ಪಕ್ಷಗಳು, ಕಲ್ಯಾಣ ಯೋಜನೆಗಳು ಮತ್ತು ಅನುದಾನಗಳ ಮೂಲಕ ದುರ್ಬಲ ವರ್ಗಗಳಿಗೆ ಬೆಂಬಲ ನೀಡುವುದು ಸರ್ಕಾರದ ಜವಾಬ್ದಾರಿಯೇ ಆಗಿದೆ ಎಂದು ವಾದಿಸಿವೆ.

ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ಈ ಪ್ರಕರಣ ಸಂಕೀರ್ಣ ಕಾನೂನು ಮತ್ತು ನೀತಿ ನಿರೂಪಣೆಗೆ ಸಂಬಂಧಿತ ಪ್ರಶ್ನೆಗಳನ್ನು ಒಳಗೊಂಡಿದೆ ಎಂದಿತ್ತು. ಅಲ್ಲದೆ, ಇಂತಹ ವಿಚಾರದಲ್ಲಿ ನ್ಯಾಯಾಂಗ ಎಷ್ಟರ ಮಟ್ಟಿಗೆ ಮಧ್ಯಪ್ರವೇಶಿಸಬಹುದು ಎನ್ನುವುದನ್ನು ಸಹ ಗಮನಿಸಬೇಕು ಎಂದಿತ್ತು.

ಚುನಾವಣೆಗೂ ಮುನ್ನ ಉಚಿತ ಕೊಡುಗೆ ನೀಡುವುದು ಭ್ರಷ್ಟಾಚಾರವಾಗುವುದಿಲ್ಲ ಎಂದು 2013ರಲ್ಲಿ ಸುಬ್ರಮಣಿಯಂ ಬಾಲಾಜಿ ಮತ್ತ ತಮಿಳುನಾಡು ಸರ್ಕಾರ ನಡುವಣ ಪ್ರಕರಣದಲ್ಲಿ ತಾನು ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕಾಗಬಹುದು ಎಂದು ಕೂಡ ಹಿಂದಿನ ವಿಚಾರಣೆ ವೇಳೆ ಪೀಠವು ಹೇಳಿತ್ತು. ಜೊತೆಗೆ ಉಚಿತ ಕೊಡುಗೆಗಳ ಆರ್ಥಿಕ ಪರಿಣಾಮ ಅಧ್ಯಯನ ಮಾಡಲು ಹಾಗೂ ಉಚಿತ ಕೊಡುಗೆ ಪದದ ಸ್ಪಷ್ಟ ವ್ಯಾಖ್ಯಾನ ನಿಗದಿಪಡಿಸುವುದಕ್ಕಾಗಿ ಸಮಿತಿ ರಚಿಸುವ ಆಲೋಚನೆಯನ್ನು ಪೀಠ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com