ಜನಪ್ರತಿನಿಧಿಗಳ ಪ್ರಕರಣ: ಸಾಕ್ಷಿ ಸಂರಕ್ಷಣಾ ಯೋಜನೆ ಜಾರಿಗೆ ತರಲು ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌

ಜೊತೆಗೆ ಶಾಸಕರ ವಿರುದ್ಧದ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸಲು ಎರಡನೇ ವಿಶೇಷ ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವನೆಯನ್ನು ಶೀಘ್ರವೇ ಅಂಗೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ಅದು ನಿರ್ದೇಶನ ನೀಡಿತು.
Karnataka High Court
Karnataka High Court

ಸಂಸತ್‌ ಸದಸ್ಯರು (ಸಂಸದರು) ಮತ್ತು ವಿಧಾನಸಭೆಯ ಸದಸ್ಯರ (ಎಂಎಲ್‌ಎ) ವಿರುದ್ಧದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳು ದುರ್ಬಲರಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದ್ದು 2018ರ ಸಾಕ್ಷಿ ಸಂರಕ್ಷಣಾ ಯೋಜನೆ ಜಾರಿಗೆ ತರಬೇಕೆಂದು ಒತ್ತಿ ಹೇಳಿತು.

ಸಾಕ್ಷಿಗಳ ರಕ್ಷಣೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಎರಡು ವಾರಗಳಲ್ಲಿ ರಾಜ್ಯ ಸಾಕ್ಷಿಗಳ ರಕ್ಷಣಾ ನಿಧಿ ಸ್ಥಾಪಿಸುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿದೆ.

“… ವಿಶೇಷ ನ್ಯಾಯಾಲಯದ ಮುಂದೆ ಬಾಕಿ ಇರುವ ಪ್ರಮುಖ ರಾಜಕೀಯ ವ್ಯಕ್ತಿಗಳು ಆರೋಪಿತರಾಗಿರುವ ಯಾವುದೇ ಪ್ರಕರಣಗಳಲ್ಲಿ ಯಾವುದೇ ವಿವಾದ ಇರಬಾರದು. ಪ್ರಾಸಿಕ್ಯೂಷನ್ ಸಾಕ್ಷಿಗಳು ದುರ್ಬಲ ಸಾಕ್ಷಿಗಳಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ, 2018ರ ಸಾಕ್ಷಿ ಸಂರಕ್ಷಣಾ ಯೋಜನೆ ಜಾರಿಗೆ ತರಬೇಕೆಂದು ಅಭಿಪ್ರಾಯಪಡುತ್ತೇವೆ” ಎಂಬುದಾಗಿ ಪೀಠ ಹೇಳಿತು.

Also Read
ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಪಿಐಎಲ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ

ಸಾಕ್ಷಿಗಳ ಸಂರಕ್ಷಣಾ ನಿಧಿಯನ್ನು ಸ್ಥಾಪಿಸುವ ನಿರ್ದೇಶನದ ಹೊರತಾಗಿ, 2018 ರ ಯೋಜನೆಯಲ್ಲಿರುವ ನಿಬಂಧನೆಗಳ ಬಗ್ಗೆ ಎಲ್ಲಾ ತನಿಖಾ ಅಧಿಕಾರಿಗಳ (ಐಒ) ಗಮನ ಸೆಳೆಯಬೇಕು ಮತ್ತು ಯೋಜನೆಯ ಅನುಷ್ಠಾನಕ್ಕೆ ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಲು ನಿರ್ದೇಶಿಸಬೇಕು ಎಂದು ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಪ್ರಾಸಿಕ್ಯೂಷನ್ ಸಾಕ್ಷಿಯು ಬೆದರಿಕೆಗಳಿಗೆ ಗುರಿಯಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ತನಿಖಾಧಿಕಾರಿಯ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರತಿ ತನಿಖಾಧಿಕಾರಿ ಪ್ರತಿ ಪ್ರಕರಣಕ್ಕೂ ಗಮನ ಹರಿಸಬೇಕು ಮತ್ತು ಅಗತ್ಯವಿದ್ದಲ್ಲಿ, ಆಯಾ ಸಾಕ್ಷಿಗಳನ್ನು ರಕ್ಷಿಸಲು ಅರ್ಜಿ ಸಲ್ಲಿಸಬೇಕು ಎಂದು ಅದು ಹೇಳಿದೆ.

ಇದಲ್ಲದೆ, ಯಾವುದೇ ಅರ್ಜಿ ಸಲ್ಲಿಸದಿದ್ದರೂ ಕೂಡ ಶಾಸನ ರೂಪಿಸುವವರ ವಿರುದ್ಧದ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯದ ಅಧ್ಯಕ್ಷತೆ ವಹಿಸುವ ನ್ಯಾಯಾಧೀಶರು ಯಾವುದೇ ವ್ಯಕ್ತಿಗೆ ಸಾಕ್ಷಿ ರಕ್ಷಣೆ ಅಗತ್ಯವಿದೆಯೇ ಎಂಬ ಬಗ್ಗೆ ಗಮನ ಹರಿಸಬೇಕಾಗುತ್ತದೆ.

Also Read
ದೇಶದೆಲ್ಲೆಡೆ ಸಂಸದರು, ಶಾಸಕರ ವಿರುದ್ಧ 4442 ಪ್ರಕರಣಗಳು ಬಾಕಿ: ಸುಪ್ರೀಂಗೆ ಅಮಿಕಸ್ ಕ್ಯೂರಿ ಮಾಹಿತಿ

ಸಂಸದರು ಮತ್ತು ಶಾಸಕರ ವಿರುದ್ಧದ ವಿಷಯಗಳಲ್ಲಿ ಸರ್ಕಾರಿ ಅಭಿಯೋಜಕರನ್ನು (ಪಿಪಿ) ನೇಮಕ ಮಾಡುವ ಕುರಿತಂತೆ , ಸರ್ಕಾರದ ಜ್ಞಾಪಕ ಪತ್ರವು ಮೌನ ತಾಳಿದೆ ಎಂದು ನ್ಯಾಯಾಲಯವು ಖಂಡಿಸಿದೆ. ಅಲ್ಲದೆ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳಲ್ಲಿ ವಿಚಾರಣೆಯ ಸ್ವರೂಪ ನಿಭಾಯಿಸುವಂತಹ ಸಮರ್ಥ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಾಲಯ ತಿಳಿಸಿದೆ.

ಜೊತೆಗೆ ಶಾಸಕರ ವಿರುದ್ಧದ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸಲು ಎರಡನೇ ವಿಶೇಷ ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವನೆಯನ್ನು ಶೀಘ್ರವೇ ಅಂಗೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ಅದು ನಿರ್ದೇಶನ ನೀಡಿತು. ಪ್ರಕರಣದ ವಿಚಾರಣೆಯನ್ನು ಡಿ 18ಕ್ಕೆ ಮುಂದೂಡಲಾಗಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವ ಕುರಿತಂತೆ ಸ್ವಯಂಪ್ರೇರಿತವಾಗಿದ ದಾಖಲಿಸಿಕೊಂಡ ಪ್ರಕರಣದ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಶಾಸಕರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಕ್ರಿಯಾ ಯೋಜನೆ ರೂಪಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಳ್ಳಲು ನ್ಯಾಯಾಲಯ ಇತ್ತೀಚೆಗೆ ಸೂಚಿಸಿತ್ತು.

Related Stories

No stories found.
Kannada Bar & Bench
kannada.barandbench.com