ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾ ಮಾಡುವಂತೆ ಕೋರಿದ್ದ ಆಪ್‌ನ ಮಾಜಿ ಶಾಸಕರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಇದೇ ರೀತಿಯ ಕೋರಿಕೆಯನ್ನು ಒಳಗೊಂಡಿದ್ದ ಎರಡು ಅರ್ಜಿಗಳನ್ನು ವಜಾ ಮಾಡಿದ್ದರೂ ಅದೇ ತೆರನಾದ ಅರ್ಜಿ ಸಲ್ಲಿಸಿದ್ದ ಮಾಜಿ ಶಾಸಕ ಸಂದೀಪ್ ಕುಮಾರ್ ಅವರನ್ನು ನ್ಯಾಯಮೂರ್ತಿ ಸುಬ್ರಮೊಣಿಯಮ್ ಪ್ರಸಾದ್ ನೇತೃತ್ವದ ಏಕಸದಸ್ಯ ಪೀಠ ಟೀಕೆಗೆ ಗುರಿಪಡಿಸಿತು.
“ನಿಮಗೆ ದುಬಾರಿ ದಂಡ ವಿಧಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರ ನೇತೃತ್ವದ ವಿಭಾಗೀಯ ಪೀಠವು ಇಂಥದ್ದೇ ಎರಡು ಅರ್ಜಿಗಳನ್ನು ಈಗಾಗಲೇ ವಜಾ ಮಾಡಿದೆ. ಈಗ ಸಲ್ಲಿಕೆ ಮಾಡಿರುವುದು ಪ್ರಚಾರ ಹಿತಾಸಕ್ತಿ ಹೊಂದಿರುವ ಅರ್ಜಿಯಾಗಿದೆ ಎಂದು ನ್ಯಾಯಾಲಯ ಟೀಕಿಸಿದೆ.
ಅಂತಿಮವಾಗಿ ಇಂಥದ್ದೇ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿರುವುದರಿಂದ ಹಾಲಿ ಅರ್ಜಿಯನ್ನು ಏಕಸದಸ್ಯ ಪೀಠವು ಸಿಜೆ ಪೀಠಕ್ಕೆ ವರ್ಗಾಯಿಸಿತು.
ಸುರ್ಜಿತ್ ಸಿಂಗ್ ಯಾದವ್ ಅವರು ಸಲ್ಲಿಸಿದ್ದ ಪಿಐಎಲ್ ಅನ್ನು ಮಾರ್ಚ್ 28ರಂದು ವಜಾ ಮಾಡಿತ್ತು. ಕಾರ್ಯಾಂಗ ಮತ್ತು ರಾಷ್ಟ್ರಪತಿಯು ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕೆ ವಿನಾ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದಿತ್ತು. ಏಪ್ರಿಲ್ 4ರಂದು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ್ದ ಹೈಕೋರ್ಟ್, ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಕೇಜ್ರಿವಾಲ್ ಅವರ ವೈಯಕ್ತಿಕ ನಿರ್ಧಾರ ಎಂದಿತ್ತು.
ಅಲ್ಲದೆ, "ಕೆಲ ಸಂದರ್ಭಗಳಲ್ಲಿ ವೈಯಕ್ತಿಕ ಹಿತಾಸಕ್ತಿಗಳು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಡಿಯಾಗಿರಬೇಕಾಗುತ್ತದೆ. ಅದರೆ, ಅದು ಅವರ ವೈಯಕ್ತಿಕ ನಿರ್ಧಾರ," ಎಂದರು.