
ಬಸ್ ಅತ್ಯಾಚಾರ ಪ್ರಕರಣದ ಆರೋಪಿ ದತ್ತಾತ್ರೇಯ ರಾಮದಾಸ್ ಗಾಡೆಯನ್ನು ಮಾರ್ಚ್ 12 ರವರೆಗೆ ಹನ್ನೆರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಪುಣೆ ನ್ಯಾಯಾಲಯ ಆದೇಶಿಸಿದೆ.
ಪುಣೆಯ ಸ್ವಾರ್‌ಗೇಟ್ ಪೊಲೀಸ್ ಠಾಣೆ ಎದುರೇ, ಸದಾ ಜನನಿಬಿಡವಾಗಿರುತ್ತಿದ್ದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ನಿಲ್ದಾಣದಲ್ಲಿ ನಿಂತಿದ್ದ ಬಸ್‌ನೊಳಗೆ 26 ವರ್ಷದ ಯುವತಿ ಮೇಲೆ ಇತ್ತೀಚೆಗೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣ ದೇಶಾದ್ಯಂತ ಆಕ್ರೋಶ, ಖಂಡನೆಗೆ ಕಾರಣವಾಗಿತ್ತು.
ಮಂಗಳವಾರ ಬೆಳಗ್ಗೆಯಿಂದ ತಲೆಮರೆಸಿಕೊಂಡಿದ್ದ ಗಾಡೆ ಮಹಾರಾಷ್ಟ್ರದ ಶಿರೂರು ತಾಲ್ಲೂಕಿನ ಗುನಾತ್ ಎಂಬ ಆತನ ಸ್ವಗ್ರಾಮದ ಕಬ್ಬಿನಗದ್ದೆಯೊಂದರಲ್ಲಿ ಅಡಗಿ ಕುಳಿತಿದ್ದ. ಶುಕ್ರವಾರ ರಾತ್ರಿ 1:30ರ ಸುಮಾರಿಗೆ ಪೊಲೀಸರು ಆತನನ್ನು ಸುತ್ತುವರೆದು ಬಂಧಿಸಿದ್ದರು ಎಂದು ವರದಿಯಾಗಿತ್ತು.
ಫೆಬ್ರವರಿ 25 ರಂದು ಬೆಳಿಗ್ಗೆ 5:30ರ ಸುಮಾರಿಗೆ ಅತ್ಯಾಚಾರ ಘಟನೆ ನಡೆದಿತ್ತು. ರಾತ್ರಿ ಸ್ವಾರ್‌ಗೇಟ್‌ನ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಿವಶಾಹಿ ಬಸ್‌ನಲ್ಲಿ ನಗರದ ಆಸ್ಪತ್ರೆಯೊಂದರ ವೈದ್ಯಕೀಯ ಸಿಬ್ಬಂದಿಯಾದ ಯುವತಿ ಮೇಲೆ ಆತ ಅತ್ಯಾಚಾರ ಎಸಗಿದ್ದ.
ಅದೇ ದಿನ ಬೆಳಿಗ್ಗೆ 9:30ರ ಸುಮಾರಿಗೆ ತನ್ನ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಾಥಮಿಕ ವಿಚಾರಣೆ ಬಳಿಕ ಘಟನೆ ನಡೆದ ಸಂಜೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.