ದಶಕದ ಕಾಲ ನಡೆದ ಕಾನೂನು ಸಮರವೊಂದರಲ್ಲಿ ಸ್ಥಳೀಯ ಫಾಸ್ಟ್ ಫುಡ್ ಕೇಂದ್ರದ ಪರ ತೀರ್ಪು ನೀಡಿರುವ ಪುಣೆ ನ್ಯಾಯಾಲಯ ತನ್ನ ಹೆಸರು ಬಳಸದಂತೆ ಅಮೆರಿಕದ ಫಾಸ್ಟ್ ಫುಡ್ ದೈತ್ಯ ಬರ್ಗರ್ ಕಿಂಗ್ ಕಾರ್ಪೊರೇಷನ್ ಸಲ್ಲಿಸಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಮೊಕದ್ದಮೆಯನ್ನು ವಜಾಗೊಳಿಸಿದೆ [ಬರ್ಗರ್ ಕಿಂಗ್ ಕಾರ್ಪೊರೇಷನ್ ಮತ್ತು ಅನಾಹಿತಾ ಇರಾನಿ ಇನ್ನಿತರರ ನಡುವಣ ಪ್ರಕರಣ].
ಕ್ಯಾಂಪ್ ಮತ್ತು ಕೋರೆಗಾಂವ್ ಪಾರ್ಕ್‌ನಲ್ಲಿರುವ ಪುಣೆಯ ಬರ್ಗರ್ ಕಿಂಗ್ ಜಾಯಿಂಟ್‌ಗಳ ಮಾಲೀಕರಾದ ಅನಾಹಿತಾ ಮತ್ತು ಶಪೂರ್ ಇರಾನಿ ವಿರುದ್ಧ ಜಾಗತಿಕವಾಗಿ ಸುಮಾರು 13,000 ಫಾಸ್ಟ್‌ಫುಡ್ ರೆಸ್ಟರಂಟ್‌ಗಳ ಜಾಲ ಹೊಂದಿರುವ ಬರ್ಗರ್ ಕಿಂಗ್ ಕಾರ್ಪೊರೇಷನ್ ಮೊಕದ್ದಮೆ ಹೂಡಿತ್ತು.
1954ರಲ್ಲಿ ಸ್ಥಾಪನೆಯಾದ ಅಮೆರಿಕದ ಕಾರ್ಪೊರೇಶನ್, 2014ರಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿತ್ತು. ತನ್ನದೇ ಹೆಸರಿನ ರೆಸ್ಟೋರೆಂಟ್ 2008ರಿಂದ ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿ ಅದು ದಾವೆ ಹೂಡಿತ್ತು. ತನ್ನ ಬ್ರಾಂಡ್‌ಗೆ ಪುಣೆಯ ರೆಸ್ಟರಂಟ್ ಹೆಸರು ಹಾನಿ ಉಂಟುಮಾಡುತ್ತಿದೆ ಎಂದು ದೂರಿತ್ತು. ಸ್ಥಳೀಯ ರೆಸ್ಟರಂಟ್ ಆ ಹೆಸರು ಬಳಸುವುದು ವಾಣಿಜ್ಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಅದು ಕೋರಿತ್ತು.
ಪುಣೆ ರೆಸ್ಟೋರೆಂಟ್ ಪರವಾಗಿ ತೀರ್ಪು ನೀಡಿದ ನ್ಯಾಯಾಧೀಶ ಸುನಿಲ್ ವೇದಪಾಠಕ್, ಅಮೆರಿಕ ಕಾರ್ಪೊರೇಶನ್ ಭಾರತದಲ್ಲಿ ತನ್ನ ವಾಣಿಜ್ಯ ಚಿಹ್ನೆ ನೋಂದಾಯಿಸುವ ಮೊದಲೇ 1992ರಿಂದ ನಗರದ ಬರ್ಗರ್ ಕಿಂಗ್ ರೆಸ್ಟರಂಟ್ ತನ್ನ ಹೆಸರು ಮತ್ತು ಬ್ರಾಂಡ್ ಬಳಸುತ್ತಿದೆ ಎಂದರು.
ಅಮೆರಿಕ ಮೂಲದ ಜಾಗತಿಕ ಕಂಪೆನಿಯಾದ ಬರ್ಗರ್ ಕಿಂಗ್ ಕಾರ್ಪೊರೇಷನ್ ಸುಮಾರು 30 ವರ್ಷಗಳ ಕಾಲ ತನ್ನ ಹೆಸರಿನಲ್ಲಿ ಭಾರತದಲ್ಲಿ ವಹಿವಾಟು ಮಾಡಿಲ್ಲ. ಆದರೆ ಪುಣೆಯ ರೆಸ್ಟರಂಟ್ ಗ್ರಾಹಕರಿಗೆ ಬರ್ಗರ್ ಕಿಂಗ್ ಬ್ರಾಂಡ್ ಅಡಿಯಲ್ಲಿ ನಿಯಮಿತವಾಗಿ ಆಹಾರ ಒದಗಿಸಿದ್ದು ಅದು ತನ್ನ ಹೆಸರನ್ನು ಬಳಸುತ್ತಿರುವುದು ಕಾನೂನುಬದ್ಧ ಮತ್ತು ಅಧಿಕೃತವಾಗಿ ಇದೆ ಎಂದು ನ್ಯಾಯಾಲಯ ನುಡಿದಿದೆ.
ಪುಣೆ ಸಂಸ್ಥೆಯು ತಮ್ಮ ವ್ಯವಹಾರವನ್ನು ದೀರ್ಘಕಾಲದವರೆಗೆ ಬರ್ಗರ್ ಕಿಂಗ್ ಹೆಸರಿನೊಂದಿಗೆ ಅಡೆತಡೆಯಿಲ್ಲದೆ ನಡೆಸುತ್ತಿದೆ. ಆದ್ದರಿಂದ, ಅದು ಆ ಹೆಸರಿನ ಪ್ರಾಮಾಣಿಕ ಮತ್ತು ಮೊದಲ ಬಳಕೆದಾರರಾಗಿದ್ದಾರೆಯೇ ವಿನಾ ಅಮೆರಿಕದ ಕಾರ್ಪೊರೇಷನ್ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಮೆರಿಕದ ಕಾರ್ಪೊರೇಷನ್ ಹೂಡಿದ್ದ ದಾವೆಯಿಂದಾಗಿ ತನಗೆ ಉಂಟಾದ ತೊಂದರೆ ಮತ್ತು ಕಿರುಕುಳಕ್ಕಾಗಿ ₹ 20 ಲಕ್ಷ ಪರಿಹಾರವನ್ನು ಪುಣೆಯ ರೆಸ್ಟರಂಟ್ ಕೋರಿತ್ತಾದರೂ ಅದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿದೆ.