[ಸೌದಿಯಲ್ಲಿ ಭಾರತೀಯನಿಗೆ ಶಿಕ್ಷೆ] ಅಗತ್ಯ ದತ್ತಾಂಶ ಲಭ್ಯವಾಗದಿರುವುದರಿಂದ ತನಿಖೆ ಮುಂದುವರಿಸಲಾಗಿಲ್ಲ: ರಾಜ್ಯ ಸರ್ಕಾರ

“ತನಿಖೆ ಯಾವ ಹಂತದಲ್ಲಿದೆ? ಶೈಲೇಶ್‌ ಕುಮಾರ್‌ ಅವರನ್ನು ಯಾವುದಾದರೂ ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸಬೇಕು ಎಂಬ ವಿಚಾರದ ಕುರಿತಾದ ತನಿಖೆ ಏನಾಗಿದೆ?” ಎಂದು ತನಿಖಾಧಿಕಾರಿಯನ್ನು ಪ್ರಶ್ನಿಸಿದ ಪೀಠ.
Shailesh Kumar and Karnataka HC
Shailesh Kumar and Karnataka HC
Published on

ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಸೌದಿಯಲ್ಲಿ ಬಂಧಿತನಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದತ್ತಾಂಶ ಲಭ್ಯವಾಗದಿರುವುದರಿಂದ ತನಿಖೆ ಮುಂದುವರಿಸಲಾಗಿಲ್ಲ ಎಂದು ತನಿಖಾಧಿಕಾರಿಯು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು.

ಶೈಲೇಶ್‌ ಕುಮಾರ್‌ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ತನಿಖಾಧಿಕಾರಿಯನ್ನು ಕುರಿತು ನ್ಯಾಯಾಲಯವು “ತನಿಖೆ ಯಾವ ಹಂತದಲ್ಲಿದೆ? ಏನೆಲ್ಲಾ ಆಗಿದೆ? ಶೈಲೇಶ್‌ ಕುಮಾರ್‌ ಅವರನ್ನು ಯಾವುದಾದರೂ ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸಬೇಕು ಎಂಬ ವಿಚಾರದ ಕುರಿತಾದ ತನಿಖೆ ಏನಾಗಿದೆ?” ಎಂದು ರಾಜ್ಯ ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿತು.

ಇದಕ್ಕೆ ತನಿಖಾಧಿಕಾರಿಯು “ಅಗತ್ಯ ದತ್ತಾಂಶ ಲಭ್ಯವಾಗದಿರುವುದರಿಂದ ತನಿಖೆ ಮುಂದುವರಿಸಲಾಗಿಲ್ಲ” ಎಂದು ಪೀಠಕ್ಕೆ ವಿವರಿಸಿದರು. ಈ ಮಧ್ಯೆ, ಕೇಂದ್ರ ಸರ್ಕಾರದ ಪರ ವಕೀಲ ಮಧುಕರ್‌ ದೇಶಪಾಂಡೆ ಅವರು “ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯು ಮೇಲ್ಮನವಿಯ ವಿಚಾರಣೆಯ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಬಹುದೇ? ಹೌದಾದರೆ, ಭಾರತ ಸರ್ಕಾರವು ಅವರಿಗೆ ವಕೀಲರ ನೆರವು ಒದಗಿಸಲಿದೆಯೇ? ಸೌದಿ ಅರೇಬಿಯಾದ ಸ್ಥಳೀಯ ಕಾನೂನಿನ ಅಡಿ ಶಿಕ್ಷೆ ಕಾಯಂಗೊಳಿಸುವ ಪ್ರಕ್ರಿಯೆಯ ವ್ಯಾಪ್ತಿ ಏನು? ಭಾರತದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಕಂಡುಬರುವ ಮಾಹಿತಿಯನ್ನು ಅಲ್ಲಿನ ನ್ಯಾಯಾಲಯದ ಮುಂದೆ ಇಡಬಹುದೇ?  ಭಾರತದಲ್ಲಿ ಪೊಲೀಸ್‌ ವಿಚಾರಣೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಮುಂದೂಡುವಂತೆ ಭಾರತೀಯ ರಾಯಭಾರ ಕಚೇರಿಯನ್ನು ಕೋರಬಹುದೇ?” ಎಂಬ ಮೂರು ಪ್ರಶ್ನೆಗಳಿಗೆ ಉತ್ತರಿಸಲು ಎರಡು ಕಾಲಾವಕಾಶ ನೀಡಬೇಕು ಎಂದು ಕೋರಿದರು.

Also Read
ಸೌದಿಯಲ್ಲಿ ಭಾರತದ ಪ್ರಜೆಗೆ ಶಿಕ್ಷೆ: ಕೇಂದ್ರ ಸರ್ಕಾರ ಗಂಭೀರತೆ ತೋರಬೇಕು ಎಂದು ಬೇಸರ ದಾಖಲಿಸಿದ ಹೈಕೋರ್ಟ್‌

ಇದಕ್ಕೆ ಒಪ್ಪಿದ ಪೀಠವು ವಿಚಾರಣೆಯನ್ನು ಆಗಸ್ಟ್‌ 31ಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ “ಶೈಲೇಶ್‌ ಕುಮಾರ್‌ ಅವರ ವಿಚಾರದಲ್ಲಿ ಕೇಂದ್ರ ಸರ್ಕಾರವು ಗಂಭೀರತೆ ತೋರಿಸಬೇಕು” ಎಂದು ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ರಾಜ್ಯದ ತನಿಖಾಧಿಕಾರಿಯ ನಡೆಯ ಬಗ್ಗೆಯೂ ಕಿಡಿಕಾರಿತ್ತು.

Kannada Bar & Bench
kannada.barandbench.com