
ಪ್ರಕರಣವೊಂದರಲ್ಲಿ ಐಷಾರಾಮಿ ಆಭರಣ ಕಂಪನಿಗೆ ಸೇರಿದ ಆಭರಣಗಳನ್ನು ಅದರ ಬ್ಯಾಂಕ್ ಲಾಕರ್‌ಗಳಿಂದ ವಶಪಡಿಸಿಕೊಂಡು ನಂತರ ಬಿಡುಗಡೆ ಮಾಡಲು ನಿರಾಕರಿಸಿದ್ದ ಆದಾಯ ತೆರಿಗೆ ಅಧಿಕಾರಿಗಳ ವರ್ತನೆಯು ಮನಸೋಇಚ್ಛೆಯಿಂದ ಕೂಡಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಟೀಕಿಸಿದೆ [ಡಿಲ್ಲಾನೊ ಐಷಾರಾಮಿ ಜ್ಯುವೆಲ್ಸ್ ಲಿಮಿಟೆಡ್ ಮತ್ತು ಬಟಿಂಡಾದ ಆದಾಯ ತೆರಿಗೆ ತನಿಖಾ ಇಲಾಖೆ ಉಪ ನಿರ್ದೇಶಕ ಇನ್ನಿತರರ ನಡುವಣ ಪ್ರಕರಣ].
ಆದಾಯ ತೆರಿಗೆ ಅಧಿಕಾರಿಗಳು ಶೋಧದ ಸಮಯದಲ್ಲಿ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಪಟ್ಟಿಯಲ್ಲಿನ ವಸ್ತುಗಳನ್ನು (ಸ್ಟಾಕ್ ಇನ್ ಟ್ರೇಡ್) ವಶಪಡಿಸಿಕೊಳ್ಳುವುದನ್ನು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 132 (1) (ಬಿ) (iii) ನಿರ್ಬಂಧಿಸುತ್ತದೆ ಎಂದು ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜಯ್ ವಶಿಷ್ಠ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಆಭರಣ ಕಂಪನಿಗೆ ಸೇರಿದ ಬ್ಯಾಂಕ್ ಲಾಕರ್‌ನಿಂದ ವಶಪಡಿಸಿಕೊಂಡ ಆಭರಣಗಳು ಕಂಪನಿಯ ಅವಶ್ಯಕ ವ್ಯಾಪಾರ ವ್ಯವಹಾರಗಳಲ್ಲಿ ಬಳಸಲಾಗುವ ವಸ್ತುಗಳಾಗಿದ್ದು ಬದಲಿಗೆ ಯಾವುದೇ ವೈಯಕ್ತಿಕ ನಿರ್ದೇಶಕರದ್ದೆಂದು ಭಾವಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಹಾಗೆ ಮಾಡಿದರೆ ಅದು ವೈಯಕ್ತಿಕ ನಿರ್ದೇಶಕರಿಂದ ಕಂಪನಿಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಕಾರಣವಾಗಲಿದ್ದು ಇದಕ್ಕೆ ಅನುಮತಿ ನೀಡಲಾಗದು ಎಂದು ನ್ಯಾಯಾಲಯ ವಿವರಿಸಿದೆ.
2023ರಲ್ಲಿ ಕಂಪನಿಯ ವಹಿವಾಟಿನಲ್ಲಿದ್ದ ಷೇರುಗಳನ್ನು ವಶಪಡಿಸಿಕೊಳ್ಳುವಲ್ಲಿ ಐಟಿ ಇಲಾಖೆ ಅನಿಯಂತ್ರಿತ, ಕಾನೂನುಬಾಹಿರ ಮತ್ತು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವರ್ತಿಸಿದೆ ಎಂದು ಅದು ತೀರ್ಮಾನಿಸಿದೆ.
ಆದಾಯ ತೆರಿಗೆ (ಐಟಿ) ಇಲಾಖೆಯು ದೆಹಲಿಯಲ್ಲಿರುವ ತನ್ನ ಬ್ಯಾಂಕ್ ಲಾಕರ್‌ಗಳಿಂದ ವಶಪಡಿಸಿಕೊಂಡ ಆಭರಣಗಳನ್ನು ಬಿಡುಗಡೆ ಮಾಡುವಂತೆ ಡಿಲ್ಲಾನೊ ಐಷಾರಾಮಿ ಜ್ಯುವೆಲ್ಸ್ ಸಲ್ಲಿಸಿದ ಮನವಿಯನ್ನು ಪೀಠ ವಿಚಾರಣೆ ನಡೆಸಿತು.
ಪ್ರಸ್ತುತ ಪ್ರಕರಣದ ಲಾಕರ್ ಕಂಪನಿಯ ಹೆಸರಿನಲ್ಲಿರುವುದರಿಂದ, ಅದರಲ್ಲಿರುವ ಆಭರಣಗಳು ಸಹ ಅದರ ಅವಶ್ಯಕ ವ್ಯಾಪಾರ ವ್ಯವಹಾರಗಳಲ್ಲಿ ಬಳಸಲಾಗುವ ವಸ್ತುವಿನ ಭಾಗವಾಗಿರುವುದು ತಾರ್ಕಿಕ ತೀರ್ಮಾನವಾಗಿದೆ ಎಂದ ನ್ಯಾಯಾಲಯ ದಿಲ್ಲನೊ ಅವರ ಮನವಿಯನ್ನು ಪುರಸ್ಕರಿಸಿ ಆಭರಣಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಐಟಿ ಇಲಾಖೆಗೆ ಸೂಚಿಸಿತು.