ನಾಲ್ವರನ್ನು ಕೊಂದಿದ್ದ ಪೊಲೀಸ್ ಅಧಿಕಾರಿಗೆ ಎರಡು ವರ್ಷ ಪೆರೋಲ್: ತನಿಖೆಗೆ ಪಂಜಾಬ್ ಹೈಕೋರ್ಟ್ ಆದೇಶ

ವರ್ಷಾನುಟ್ಟಲೆ ಪೆರೋಲ್ ಪಡೆಯುವ ಮೂಲಕ ತನ್ನ 25 ವರ್ಷಗಳ ಜೈಲು ಶಿಕ್ಷೆ ಜಾರಿಯಾಗುವುದನ್ನು ಮಾಜಿ ಪೊಲೀಸ್ ಅಧಿಕಾರಿ ತಪ್ಪಿಸುತ್ತಿದ್ದಾನೆ ಎಂದು ನ್ಯಾಯಾಲಯ ಕಂಡುಕೊಂಡಿದೆ.
Punjab and Haryana High Court, Prisoner
Punjab and Haryana High Court, Prisoner

ವೈದ್ಯಕೀಯ ದಾಖಲೆಗಳನ್ನು ತಿದ್ದಿ ಎರಡು ವರ್ಷ ಪೆರೋಲ್‌ ಪಡೆದು ಜೈಲಿನಿಂದ ಹೊರಗುಳಿಯಲು ಯಶಸ್ವಿಯಾಗಿದ್ದ ಕೊಲೆ ಅಪರಾಧಿ ಮಾಜಿ ಪೊಲೀಸ್‌ ಅಧಿಕಾರಿಯೊಬ್ಬನ ವಿರುದ್ಧ  ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ.

ನಾಲ್ಕು ಕೊಲೆ ಮಾಡಿದ ಅಪರಾಧಕ್ಕಾಗಿ 25 ವರ್ಷಗಳ ಕಾಲ ಜೈಲುಶಿಕ್ಷೆಗೆ ಗುರಿಯಾಗಿದ್ದ ಶಾಲಿಂದರ್ ಸಿಂಗ್ ಜೈಲಿನಿಂದ ಹೊರಗುಳಿಯಲು ಎಲ್ಲಾ ಯತ್ನ ಮಾಡಿದ್ದ. ಆ ಯತ್ನದಲ್ಲಿ ವೈದ್ಯಕೀಯ ದಾಖಲೆಗಳನ್ನು ತಿದ್ದಿದ್ದ ಎಂದು ನ್ಯಾ. ಮನೀಶಾ ಬಾತ್ರ ತಿಳಿಸಿದರು.

ಅರ್ಜಿದಾರರು ವೈದ್ಯಕೀಯ ದಾಖಲೆಗಳನ್ನು ಫೋರ್ಜರಿ ಮಾಡುವ ಮತ್ತು ತಿರುಚುವ ಮೂಲಕ ನ್ಯಾಯಾಲಯವನ್ನು ದಿಕ್ಕುತಪ್ಪಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅಪರಾಧ ನ್ಯಾಯವ್ಯವಸ್ಥೆಯನ್ನು ವಂಚಿಸಿದ ಅಂತಹ ನಿರ್ಲಜ್ಜ ವ್ಯಕ್ತಿ ವಿರುದ್ಧ ಸುಳ್ಳು ಸಾಕ್ಷ್ಯ ನೀಡಿದ್ದಕ್ಕಾಗಿ ಮತ್ತು ಬೆದರಿಕೆಯನ್ನು ಹತ್ತಿಕ್ಕುವುದಕ್ಕಾಗಿ ತನಿಖೆ ನಡೆಸಬೇಕು ಮತ್ತು ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್ (ವಿಚಕ್ಷಣಾ ವಿಭಾಗ) ಅವರಿಗೆ ನ್ಯಾಯಾಲಯ ಸೂಚಿಸಿದೆ.

ತಾವು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಮ್ಮ ವೈದ್ಯಕೀಯ ಪೆರೋಲ್‌ ಅವಧಿಯನ್ನು ನಾಲ್ಕು ತಿಂಗಳ ಕಾಲ ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

ಪೊಲೀಸ್ ಅಧಿಕಾರಿಯಾಗಿದ್ದ ಸಿಂಗ್ 2007ರಲ್ಲಿ ತನ್ನ ಪತ್ನಿ ಮತ್ತು ಮಗು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದ. 2011ರಲ್ಲಿ ಶಿಕ್ಷೆಯ ಸ್ವರೂಪವನ್ನು ಬದಲಿಸಿದ್ದ ಹೈಕೋರ್ಟ್‌ 25 ವರ್ಷಗಳ ಸೆರೆವಾಸ ವಿಧಿಸಿತ್ತು. 

2021ರಲ್ಲಿ ಆರು ವಾರಗಳ ಕಾಲ ಪೆರೋಲ್‌ ಪಡೆದಿದ್ದ ಆತ  ನಂತರ ಪೆರೋಲ್‌ ವಿಸ್ತರಣೆ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದ. ಅದಕ್ಕೂ ಅನುಮತಿ ನೀಡಲಾಗಿತ್ತು. ಕಳೆದ ವರ್ಷ ಆತ ಪ್ರಸ್ತುತ ಅರ್ಜಿ ಸಲ್ಲಿಸಿದ್ದ. ಕಾಲಕಾಲಕ್ಕೆ ಪೆರೋಲ್‌ ಅವಧಿ ವಿಸ್ತರಿಸಲು ಮಧ್ಯಂತರ ಆದೇಶ ನೀಡಲಾಗಿತ್ತು. ಕಾಯಿಲೆ ಇರುವ ಕಾರಣಕ್ಕೆ ಆತನನ್ನು ಜೈಲಿಗೆ ಕಳುಹಿಸಬಾರದೆಂದು ಆತನ ಪರ ವಕೀಲರು ಈ ಬಾರಿ ವಾದಿಸಿದ್ದರು. 

ಆದರೆ 2021ರಿಂದ ಜೈಲಿನಿಂದ ಹೊರಗಿರುವ ಸಿಂಗ್‌ ಹೇಳಿಕೊಂಡಷ್ಟು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿಲ್ಲ. ಅಲ್ಲದೆ ಆತ ಪೆರೋಲ್‌ ಅವಧಿ ವಿಸ್ತರಣೆಗಾಗಿ ವೈದ್ಯಕೀಯ ದಾಖಲೆಗಳನ್ನು ತಿರುಚಿದ್ದಾನೆ ಎಂದು ಸರ್ಕಾರ ವಾದಿಸಿತು.

ಸಂಬಂಧಪಟ್ಟ ದಾಖಲೆಗಳು ಹಾಗೂ ಪಂಜಾಬ್ ಉತ್ತಮ ನಡವಳಿಕೆಯ ಕೈದಿಗಳ (ತಾತ್ಕಾಲಿಕ ಬಿಡುಗಡೆ) ಕಾಯಿದೆ- 1962ನ್ನು ನ್ಯಾಯಾಲಯ ಈ ವೇಳೆ ಪರಿಶೀಲಿಸಿತು. ಕಾಯಿದೆ ಪ್ರಕಾರ ಕೈದಿಗೆ ಗರಿಷ್ಠ ಆರು ವಾರಗಳವರೆಗೆ ಮಾತ್ರ ಪೆರೋಲ್ ನೀಡಬಹುದಾಗಿತ್ತು.

ಆದರೂ ಸುಮಾರು 2 ವರ್ಷ ಮತ್ತು 8 ತಿಂಗಳು ಪೆರೋಲ್‌ ಮೇಲಿದ್ದ ಸಿಂಗ್‌ ತನ್ನ ಆರೋಗ್ಯ ಹದಗೆಟ್ಟಿದೆ ಎಂದು ಈ ಬಾರಿಯೂ ಪೆರೋಲ್‌ ಅವಧಿ ವಿಸ್ತರಿಸಲು ಕೋರಿದ್ದಾನೆ. ವರ್ಷಾನುಟ್ಟಲೆ ಪೆರೋಲ್‌ ಪಡೆಯುವ ಮೂಲಕ ತನ್ನ 25 ವರ್ಷಗಳ ಜೈಲು ಶಿಕ್ಷೆ ಜಾರಿಯಾಗುವುದನ್ನು ಮಾಜಿ ಪೊಲೀಸ್ ಅಧಿಕಾರಿ ತಪ್ಪಿಸುತ್ತಿದ್ದಾನೆ ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು. ಮೇ 29 ಅಥವಾ ಅದಕ್ಕೂ ಮೊದಲು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಅದು ಆದೇಶಿಸಿತು.

Kannada Bar & Bench
kannada.barandbench.com