ಹುತಾತ್ಮ ಹಿಂದೂ ಪ್ರವಾಸಿಗಳ ಸ್ಮಾರಕವಾಗಿ ಪಹಲ್ಗಾಮ್ ದಾಳಿ ತಾಣ: ಅರ್ಜಿ ತಿರಸ್ಕರಿಸಿದ ಪಂಜಾಬ್ ಹೈಕೋರ್ಟ್

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ 'ಹುತಾತ್ಮ' ಸ್ಥಾನಮಾನ ನೀಡಬೇಕೆಂದು ಕೋರಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
Pahalgam
Pahalgam
Published on

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ 'ಹುತಾತ್ಮ' ಸ್ಥಾನಮಾನ ನೀಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕುರಿತು ಯಾವುದೇ ನಿರ್ದೇಶನ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ದಾಳಿ ನಡೆದ ಸ್ಥಳವನ್ನು ಹುತಾತ್ಮ ಹಿಂದೂ ಕಾಶ್ಮೀರ ಕಣಿವೆ ಪ್ರವಾಸಿ ಸ್ಥಳ ಎಂದು ಘೋಷಿಸುವಂತೆ ಕೋರಿ ಹಾಗೂ ದಾಳಿಯ ಸಂತ್ರಸ್ತರಿಗೆ ಹುತಾತ್ಮ ಸ್ಥಾನಮಾನ ನೀಡುವಂತೆ ಕೋರಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು.

Also Read
ಪಹಲ್ಗಾಮ್ ದಾಳಿ: ಪಾಕಿಸ್ತಾನಕ್ಕೆ ಗಡೀಪಾರಾಗಬೇಕಿದ್ದ ಕುಟುಂಬಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರ

ಪ್ರಕರಣ ಸರ್ಕಾರದ ನೀತಿ ನಿರೂಪಣೆಯ ವ್ಯಾಪ್ತಿಗೆ ಬರಲಿದ್ದು ಇಂತಹ ವಿಚಾರಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮೀತ್ ಗೋಯೆಲ್ ಅವರಿದ್ದ ಪೀಠ ತಿಳಿಸಿತು.

Also Read
ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ ಸುಪ್ರೀಂ ಕೋರ್ಟ್: ಮೌನಾಚರಣೆ

ಒಂದು ನಿರ್ದಿಷ್ಟ ಸ್ಥಳವನ್ನು ಸ್ಮಾರಕ ಅಥವಾ ಇನ್ನಾವುದೇ ಬೇರೆಯ ಹೆಸರಿನಿಂದ ಕರೆಯುವುದಾಗಲಿ ಅಥವಾ ಮರಣ ಹೊಂದಿದವರನ್ನು ಹುತಾತ್ಮರು ಎಂದು ಘೋಷಿಸುವುದಾಗಲಿ ಇದೆಲ್ಲವೂ ಸರ್ಕಾರದ ನೀತಿ ನಿರ್ಧಾರದ ವಿಶೇಷ ವ್ಯಾಪ್ತಿಗೆ ಒಳಪಡುತ್ತವೆ," ಎಂದು ನ್ಯಾಯಾಲಯ ಹೇಳಿತು.

ಮುಂದುವರೆದು, " ಮೇಲಿನ ಕಾರಣಕ್ಕಾಗಿ ನ್ಯಾಯಾಲಯವು ಕಾರ್ಯಾಂಗದ ಕ್ಷೇತ್ರವಾದ ನೀತಿ ನಿರೂಪಣೆಯನ್ನು ಪ್ರವೇಶಿಸುವುದರಿಂದ ತನ್ನನ್ನು ನಿಯಂತ್ರಿಸಿಕೊಳ್ಳುತ್ತದೆ" ಎಂದು ಹೇಳಿತು.

ಆದರೆ ಅರ್ಜಿದಾರರು ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆಯಬಹುದು. ಕಾನೂನು ಪ್ರಕಾರವಾಗಿ ಸರ್ಕಾರ ಪತ್ರವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಗಣಿಸಬೇಕು ಎಂದು ಸೂಚಿಸಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

ಕಳೆದ ತಿಂಗಳು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಒಟ್ಟು 26 ಪ್ರವಾಸಿಗರು ಸಾವನ್ನಪ್ಪಿದ್ದರು. ಭಯೋತ್ಪಾದಕ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಸಿತ್ತು. ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಆಪರೇಷನ್ ಸಿಂಧೂರ್ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Ayush_Ahuja_v_Union_of_India_and_another
Preview
Kannada Bar & Bench
kannada.barandbench.com