ನ್ಯಾಯಾಲಯದ ಜಾಲತಾಣಗಳಲ್ಲಿ ಸೂಕ್ಷ್ಮ ಪ್ರಕರಣಗಳ ತೀರ್ಪು ಪ್ರಕಟಣೆಗೆ ತಡೆ: ಆದೇಶ ಎತ್ತಿಹಿಡಿದ ಪಂಜಾಬ್ ಹೈಕೋರ್ಟ್

ಸಂವಿಧಾನದ 19(1)(ಎ) ವಿಧಿಯಡಿ ಒದಗಿಸಲಾದ ಮಾಹಿತಿ ಹಕ್ಕು 21ನೇ ವಿಧಿಯಡಿ ಒದಗಿಸಲಾದ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳಿಗೆ ಅಧೀನವಾಗಿರುತ್ತದೆ ಎಂದು ನ್ಯಾಯಾಲಯ ನುಡಿದಿದೆ.
Punjab and Haryana High Court, e-courts
Punjab and Haryana High Court, e-courts
Published on

ಸೂಕ್ಷ್ಮ ಪ್ರಕರಣಗಳ ಆದೇಶಗಳು ಮತ್ತು ತೀರ್ಪುಗಳನ್ನು ನ್ಯಾಯಾಲಯಗಳ ಅಧಿಕೃತ ಜಾಲತಾಣ ಮತ್ತಿತರ ಕಡೆಗಳಲ್ಲಿ ಪ್ರಕಟಿಸುವುದರ ವಿರುದ್ಧ ತಾನು ನೀಡಿದ್ದ ಆಡಳಿತಾತ್ಮಕ ಆದೇಶ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್‌) ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ತಿರಸ್ಕರಿಸಿದೆ [ರೋಹಿತ್ ಮೆಹ್ತಾ ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇನ್ನಿತರರ ನಡುವಣ ಪ್ರಕರಣ].

ನ್ಯಾಯಾಲಯದ ಅನುಮತಿಯಿಲ್ಲದೆ ಲೈಂಗಿಕ ಅಪರಾಧಗಳನ್ನು ಒಳಗೊಂಡ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರ ಪ್ರಕಟಿಸುವುದರ ಮೇಲೆ ಸಂಪೂರ್ಣ ನಿಷೇಧ ವಿಧಿಸುವ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 73 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್)  ಸೆಕ್ಷನ್ 366 (3)ನ್ನು ಕೂಡ ವಕೀಲ ರೋಹಿತ್ ಮೆಹ್ತಾ ಅವರು ಸಲ್ಲಿಸಿದ್ದ ಪಿಐಎಲ್ ಪ್ರಶ್ನಿಸಿತ್ತು.

Also Read
[ಪೋಕ್ಸೋ] ಅಪ್ರಾಪ್ತರ ಗುರುತು ಬಹಿರಂಗಪಡಿಸದಿರುವ ನಿರ್ಬಂಧ ವಾಟ್ಸಾಪ್ ಗ್ರೂಪ್‌ಗಳಿಗೂ ಅನ್ವಯ: ಜಾರ್ಖಂಡ್ ಹೈಕೋರ್ಟ್

ಅನಾಮಧೇಯನಾಗಿ ಉಳಿಯುವ ಸಂತ್ರಸ್ತರ ಹಕ್ಕು ನೇರವಾಗಿ ಅವರ ಅಸ್ತಿತ್ವ ಮತ್ತು ಘನತೆಗೆ ಸಂಬಂಧಿಸಿದೆ ಎಂದು ಸೆಪ್ಟಂಬರ್ 20ರಂದು ನೀಡಿದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ  ಶೀಲ್ ನಾಗು  ಮತ್ತು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎಂಬುದು ಮಾನವನ ಅಸ್ತಿತ್ವಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದ್ದು  ಉಳಿದೆಲ್ಲಾ ಮೂಲಭೂತ ಹಕ್ಕುಗಳು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಹಕ್ಕಿನೆದುರು ಗೌಣವಾಗುತ್ತವೆ ಎಂದು ಅದು ಹೇಳಿದೆ.

ಲೈಂಗಿಕ ಅಪರಾಧಗಳು, ವೈವಾಹಿಕ ವಿವಾದಗಳು ಮತ್ತು ಬಾಲಾಪರಾಧಿಗಳನ್ನು ಒಳಗೊಂಡ ಪ್ರಕರಣಗಳ ತೀರ್ಪು ಇಲ್ಲವೇ ಆದೇಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ.

ಬಾಲ ನ್ಯಾಯ ಕಾಯಿದೆ, ಅಧಿಕೃತ ರಹಸ್ಯ ಕಾಯಿದೆ, ಗುಪ್ತಚರ ಸಂಸ್ಥೆಗಳು, ಕೌಟುಂಬಿಕ ಹಿಂಸೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಜಾಲತಾಣದಲ್ಲಿ ಪ್ರಕರಣದ ಶೋಧ, ದಾವೆ ಪಟ್ಟಿ ಮತ್ತಿತರ ಹುಡುಕಾಟದ ವಿಭಾಗಗಳಲ್ಲಿ ಕಕ್ಷಿದಾರರ ಹೆಸರನ್ನು ಮರೆಮಾಡಲು ಕಾರ್ಯವಿಧಾನ ರೂಪಿಸುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್ ಕಂಪ್ಯೂಟರ್ ಸಮಿತಿಯ ಆದೇಶವನ್ನು ಕೂಡ ಪಿಐಎಲ್ ಪ್ರಶ್ನಿಸಿತ್ತು.

ಅಂತಹ ಪ್ರಕರಣಗಳಲ್ಲಿ ಹಾಜರಾಗುವ ವಕೀಲರು ಆ ತೀರ್ಪುಗಳನ್ನು ಡೌನ್‌ಲೋಡ್ ಮಾಡಲು, ಹೈಕೋರ್ಟ್ ಜಾಲತಾಣದಲ್ಲಿ ವಿಶೇಷ ವಿಭಾಗ ಇದ್ದು ಅದು ಸಾಮಾನ್ಯ ಜನರಿಗೆ ಲಭ್ಯ ಇರುವುದಿಲ್ಲ.  

Also Read
ಗುರುತು ಬಹಿರಂಗ: ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮಕ್ಕೆ ನಿರಾಕರಿಸಿದ್ದ ಆದೇಶ ಎತ್ತಿಹಿಡಿದ ಕೇರಳ ಹೈಕೋರ್ಟ್

ಗೌಪ್ಯತೆಯ ಹಕ್ಕಿನ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ, ಸಂವಿಧಾನದ 19 (1) (ಎ) ಅಡಿಯಲ್ಲಿ ಒದಗಿಸಲಾದ ಮಾಹಿತಿಯ ಹಕ್ಕು 21ನೇ ವಿಧಿಯಡಿ ನೀಡಲಾದ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳಿಗೆ ಅಧೀನವಾಗಿದೆ ಎಂದು ನ್ಯಾಯಾಲಯ ಹೇಳಿದೆ.  ಆದ್ದರಿಂದ ಅರ್ಜಿದಾರರು ಕೋರಿರುವ ಮಾಹಿತಿಯ ಹಕ್ಕನ್ನು ವಿವಿಧ ನಿರ್ಬಂಧಗಳಿಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಅನಾಮಧೇಯವಾಗಿ ಉಳಿಯುವ ಸಂತ್ರಸ್ತರ ಹಕ್ಕನ್ನು ಅರ್ಜಿದಾರರ ಮಾಹಿತಿ ಹಕ್ಕಿಗೆ ಬಲಿನೀಡಲು ಅನುಮತಿಸಲಾಗದು ಎಂದು ನ್ಯಾಯಾಲಯ ನುಡಿದಿದೆ.

Kannada Bar & Bench
kannada.barandbench.com