ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಹೂಡಿರುವ ₹ 100 ಕೋಟಿ ಮೊತ್ತದ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪಂಜಾಬ್ ನ್ಯಾಯಾಲಯವೊಂದು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ನೀಡಿದೆ.
ಸಂಗ್ರೂರ್‌ನಲ್ಲಿರುವ ಸಿವಿಲ್ ನ್ಯಾಯಾಧೀಶ (ಕಿರಿಯ ವಿಭಾಗ) ರಮಣದೀಪ್ ಕೌರ್ ಅವರು ಮೇ 12ರಂದು ಈ ಆದೇಶ ನೀಡಿದ್ದಾರೆ. "ಸಾಮಾನ್ಯ ಪ್ರಕ್ರಿಯೆ ಹಾಗೂ ನೋಂದಾಯಿತ ಪೋಸ್ಟ್ ಮೂಲಕ ಪ್ರತಿವಾದಿಗೆ ನೋಟಿಸ್ ನೀಡಿ…” ಎಂದು ನ್ಯಾಯಾಲಯ ಸೂಚಿಸಿದೆ.
ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯು ಬಜರಂಗ ದಳಕ್ಕೆ ಮಾನಹಾನಿ ಮಾಡಿದೆ ಎಂದು ವಾದಿಸಿ ಹಿಂದೂ ಸುರಕ್ಷಾ ಪರಿಷತ್ತಿನ ಅಧ್ಯಕ್ಷ ಹಿತೇಶ್ ಭಾರದ್ವಾಜ್ ಅವರು ಮೊಕದ್ದಮೆ ಹೂಡಿದ್ದರು.
ರಾಜಕೀಯ ಪ್ರಣಾಳಿಕೆಯು ಹಿಂದೂ ಸುರಕ್ಷಾ ಪರಿಷತ್ತಿನ ಘಟಕವಾದ ಬಜರಂಗದಳವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದಂತಹ (ಸಿಮಿ) ಕಾನೂನುಬಾಹಿರ ಸಂಘಟನೆಗಳೊಂದಿಗೆ ಹೋಲಿಸಲಾಗಿದೆ ಎಂದು ವಕೀಲ ಲಲಿತ್ ಕುಮಾರ್ ಗರ್ಗ್ ಅವರ ಮೂಲಕ ಹೂಡಲಾದ ಮೊಕದ್ದಮೆಯಲ್ಲಿ ವಿವರಿಸಲಾಗಿದೆ.
"ಹಿಂದೂ ಸುರಕ್ಷಾ ಪರಿಷತ್ತಿನ ಆಶ್ರಯದಲ್ಲಿ ಬಜರಂಗದಳವು ಸಾರ್ವತ್ರಿಕತೆ, ಸಹಿಷ್ಣುತೆ, ಧಾರ್ವಿುಕ, ಏಕತೆ, ರಾಷ್ಟ್ರೀಯ ಸಮಗ್ರತೆ ಹಾಗೂ ಭಾರತ ಮಾತೆಯ ಸೇವೆಯಲ್ಲಿ ನಂಬಿಕೆ ಇರಿಸಿದೆ. ಹಾಗೆ ಮಾಡುವ ಮೂಲಕ ಧರ್ಮ ಮತ್ತು ಸೇವೆಯ ಸಾಕಾರಮೂರ್ತಿಗಳಾಗಿರುವ ಭಗವಾನ್ ರಾಮ ಮತ್ತು ಭಗವಾನ್ ಹನುಮಾನ್ ಅವರಿಂದ ಸ್ಫೂರ್ತಿ ಪಡೆಯಲಾಗಿದೆ” ಎಂದು ದಾವೆ ತಿಳಿಸಿದೆ.
ತಮ್ಮ ಸಂಘಟನೆಯು ಮನುಕುಲದ ಸೇವೆಗೆ ಮೀಸಲಾಗಿದ್ದು ಅದರ ಬದ್ಧತೆಯು ಪ್ರಶ್ನಾತೀತವಾಗಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.
ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಉಲ್ಲೇಖಿಸಿರುವ ಭಾರದ್ವಾಜ್ “ಅದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವುದರಿಂದ ಬಜರಂಗದಳದ ಪ್ರತಿಷ್ಠೆಗೆ ಧಕ್ಕೆಯಾಗಿದ್ದು ತಮ್ಮನ್ನು ನಿಂದಿಸಿ ಅಪಹಾಸ್ಯ ಮಾಡುವಂತಿದೆ” ಎಂದು ಒತ್ತಿ ಹೇಳಿದ್ದಾರೆ. ಮಾನಹಾನಿಗೆ ಪರಿಹಾರವಾಗಿ ₹ 100 ಕೋಟಿ ನೀಡಬೇಕು ಮತ್ತ ಕಾನೂನು ವೆಚ್ಚಕ್ಕೆಂದು ಹೆಚ್ಚುವರಿಯಾಗಿ ₹ 10 ಲಕ್ಷ ನೀಡಬೇಕೆಂದು ಮನವಿ ಮಾಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರಿಗೆ ನೋಟಿಸ್ ನೀಡಿ ಅವರು ಖುದ್ದು ಹಾಜರಿರುವಂತೆ ಸೂಚಿಸಿದ ನ್ಯಾಯಾಲಯ ಜುಲೈ 10ಕ್ಕೆ ಪ್ರಕರಣ ಮುಂದೂಡಿತು.
[ಆದೇಶದ ಪ್ರತಿಯನ್ನುಇಲ್ಲಿ ಓದಿ]