
ಸುಮಾರು 79,000 ಎಫ್‌ಐಆರ್‌ಗಳ ಕುರಿತು ಪಂಜಾಬ್ ಪೊಲೀಸರು ಶಾಸನಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳಿಸದೇ ಇರುವ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ [ಸರಜ್ ಮತ್ತು ಪಂಜಾಬ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪ್ರಕರಣಗಳ ತನಿಖೆ ಪೂರ್ಣಗೊಳಿಸುವ ಕುರಿತು ಕ್ರಿಯಾ ಯೋಜನೆ ರೂಪಿಸಿ ಅದರ ವರದಿಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ.
ಶಾಸನಬದ್ಧ ಅವಧಿ ಮುಗಿದರೂ ತಾರ್ಕಿಕ ತೀರ್ಮಾನಕ್ಕಾಗಿ 79,000 ಎಫ್‌ಐಆರ್‌ಗಳು ಎದುರು ನೋಡುತ್ತಿವೆ ಎಂಬುದು ದಿಗ್ಭ್ರಮೆಗೊಳಿಸುವಂತಿದೆ. ಸರ್ಕಾರ ಈ ಸಂಬಂಧ ಎರಡು ವಾರದೊಳಗೆ ಕ್ರಿಯಾ ಯೋಜನೆ ರೂಪಿಸಿ ಅದರ ವರದಿ ಸಲ್ಲಿಸಬೇಕು. ಕ್ರಿಯಾ ಯೋಜನೆಯಲ್ಲಿ ಎಫ್‌ಐಆರ್ ದಾಖಲಾದ ದಿನಾಂಕ, ತನಿಖೆ ಪೂರ್ಣಗೊಳಿಸಲು ನ್ಯಾಯಾಲಯ ನೀಡಿದ್ದ ಕಾಲಮಿತಿ ಹಾಗೂ ತನಿಖೆ ಪೂರ್ಣಗೊಳ್ಳಲು ಹಿಡಿಯುವ ಅವಧಿ ಕುರಿತು ವಿವರಗಳಿರಬೇಕು ಎಂದು ಅದು ಹೇಳಿದೆ.
ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು. ಒಂದು ತಿಂಗಳೊಳಗೆ ತನಿಖೆ ಮುಕ್ತಾಯಗೊಳಿಸುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಹಾಗಾಗಿ ಸೆಪ್ಟೆಂಬರ್ 2024ರಲ್ಲಿ ಸಂತ್ರಸ್ತರು ಮನವಿ ಹಿಂಪಡೆದಿದ್ದರು. ಆದರೆ ಪ್ರಕರಣದ ತನಿಖೆ ಪೂರ್ಣಗೊಳಿಸಲು ಪೊಲೀಸರು ವಿಫಲವಾದ ಕಾರಣ ಪ್ರಕರಣಕ್ಕೆ ಮರುಜೀವ ನೀಡುವಂತೆ ಕೋರಿ ಸಂತ್ರಸ್ತ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ತನಿಖೆ ವಿಳಂಬವಾಗಿರುವುದನ್ನು ಗಮನಿಸಿದ ನ್ಯಾಯಾಲಯ ಪಂಜಾಬ್ ರಾಜ್ಯದಲ್ಲಿ ನಿಗದಿತ ಶಾಸನಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳಿಸದಿರುವ ಎಲ್ಲಾ ಎಫ್‌ಐಆರ್‌ಗಳ ವಿವರ ನೀಡುವಂತೆ ಡಿಜಿಪಿಗೆ ಕಳೆದ ತಿಂಗಳು ನಿರ್ದೇಶಿಸಿತ್ತು.
ಅಂತಿಮ ವರದಿ ಸಲ್ಲಿಸುವ ನಿಗದಿತ ಗಡುವು ಮೀರಿದ 79,000 ಎಫ್ಐಆರ್ಗಳು ಬಾಕಿ ಉಳಿದಿವೆ ಎಂದು ಜನವರಿ 8 ರಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಡಿಎಸ್ ಸುಖಿಜಾ ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿರುವ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 30ರಂದು ನಡೆಸಲಿದೆ.