ಮಳಲಿ ಮಸೀದಿ ಐತಿಹಾಸಿಕ ಸ್ಮಾರಕವೋ ಮಸೀದಿಯೋ ಎಂಬುದನ್ನು ವಕ್ಫ್ ನ್ಯಾಯಮಂಡಳಿ ನಿರ್ಧರಿಸಲಾಗದು: ಹಿಂದೂ ಪಕ್ಷಕಾರರ ವಾದ

ಹಿಂದೂ ಪಕ್ಷಕಾರರು ಇಂದು ಮಂಡಿಸಿದ ವಾದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ (ಜೂನ್ 10) ಮುಂದೂಡಿತು.
ಮಳಲಿ ಮಸೀದಿ ಐತಿಹಾಸಿಕ ಸ್ಮಾರಕವೋ ಮಸೀದಿಯೋ ಎಂಬುದನ್ನು ವಕ್ಫ್ ನ್ಯಾಯಮಂಡಳಿ ನಿರ್ಧರಿಸಲಾಗದು:  ಹಿಂದೂ ಪಕ್ಷಕಾರರ ವಾದ

ಮಳಲಿ ಮಸೀದಿಯು ಐತಿಹಾಸಿಕ ಸ್ಮಾರಕವೋ ಮಸೀದಿಯೋ ಎಂಬುದನ್ನು ವಕ್ಫ್‌ ನ್ಯಾಯಮಂಡಳಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ವಿವಾದವನ್ನು ಸಿವಿಲ್‌ ನ್ಯಾಯಾಲಯ ಕೂಡಲೇ ತೀರ್ಮಾನಿಸಬೇಕು ಎಂದು ಹಿಂದೂ ಪಕ್ಷಕಾರರ ಪರ ವಕೀಲರು ಗುರುವಾರ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

Also Read
ಮಳಲಿ ಮಸೀದಿ ಪ್ರಕರಣ: ಸಿವಿಲ್‌ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಮೊದಲು ನಿರ್ಧರಿಸಲಿರುವ ಕೋರ್ಟ್‌

“ಹಿಂದೂ ಪಕ್ಷಕಾರರು ಸಲ್ಲಿಸಿರುವ ಅರ್ಜಿ ವಕ್ಫ್‌ ನ್ಯಾಯಮಂಡಳಿ ವ್ಯಾಪ್ತಿಗೆ ಬರುವುದಿಲ್ಲ. ನಾವು ಎಲ್ಲಿಯೂ ಅದು ವಕ್ಫ್‌ ಆಸ್ತಿಯೋ ಅಲ್ಲವೋ ಎಂಬುದನ್ನು ಪ್ರಶ್ನಿಸಿಲ್ಲ. ನಮ್ಮ ಕಕ್ಷೀದಾರರು ಅದೊಂದು ಚಾರಿತ್ರಿಕ ಸ್ಮಾರಕ ಇಲ್ಲವೇ ದೇಗುಲ ಎಂದು ಹೇಳಿದ್ದು ಅದರ ಸಂರಕ್ಷಣೆಗಾಗಿ ಮನವಿ ಮಾಡಿದ್ದಾರೆ” ಎಂದು ವಾದಿಸಿದ ನ್ಯಾಯವಾದಿ ಚಿದಾನಂದ ಎಂ ಕೆದಿಲಾಯ ಅವರು “ಅದು ಐತಿಹಾಸಿಕವೋ ಅಲ್ಲವೋ ಎಂಬುದನ್ನು ವಕ್ಫ್‌ ನ್ಯಾಯಮಂಡಳಿ ನಿರ್ಧರಿಸಲು ಬರುವುದಿಲ್ಲ. ಹೀಗಾಗಿ ಅದನ್ನು ಸಿವಿಲ್‌ ಕೋರ್ಟ್‌ ತಕ್ಷಣವೇ ನಿರ್ಧರಿಸಬೇಕು ಹೀಗಾಗಿ ಸಮೀಕ್ಷೆ ನಡೆಸಿದರೆ ಅಲ್ಲಿನ ಸ್ಮಾರಕ ಯಾವುದು ಎಂದು ತಿಳಿದು ಬರಲಿದೆ” ಎಂದು ನ್ಯಾಯಾಧೀಶೆ ಎಚ್‌ ಸುಜಾತಾ ಅವರಿಗೆ ವಿವರಿಸಿದರು.

Also Read
ಮಳಲಿ ಮಸೀದಿ ಸಮೀಕ್ಷೆಗಾಗಿ ಸಲ್ಲಿಸಿರುವ ಅರ್ಜಿ ಮೊದಲು ಆಲಿಸಬೇಕು: ಮಂಗಳೂರು ನ್ಯಾಯಾಲಯದಲ್ಲಿ ಹಿಂದೂ ಪಕ್ಷಕಾರರ ವಾದ

ಸುಮಾರು ಎರಡು ಗಂಟೆಗಳ ಕಾಲ ವಾದ ಮಂಡಿಸಿದ ನ್ಯಾಯವಾದಿ ಕೆದಿಲಾಯ ಅವರು “ವಕ್ಫ್‌ ನ್ಯಾಯಮಂಡಳಿ ಇಲ್ಲವೇ 1991ರ ಆರಾಧನಾ ಸ್ಥಳ ಕಾಯಿದೆಯಡಿ ಪ್ರಸಕ್ತ ಅರ್ಜಿಯನ್ನು ವಜಾ ಮಾಡಲು ಆಗದು. ಆರಾಧನಾ ಸ್ಥಳ ಕಾಯಿದೆಯಲ್ಲೂ ಚಾರಿತ್ರಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಹೇಳಲಾಗಿದೆ. ಯಾವುದೇ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತಂತೆ ಉಲ್ಲೇಖಿಸಲಾಗಿದೆ" ಎಂದರು.

Also Read
ರಾಮ ಜನ್ಮಭೂಮಿ ಹಾಗೂ ಮಳಲಿ ಮಸೀದಿ ವಿವಾದದ ನಡುವೆ ವ್ಯತ್ಯಾಸವಿದೆ: ಮಂಗಳೂರು ನ್ಯಾಯಾಲಯದಲ್ಲಿ ಮುಸ್ಲಿಂ ಪಕ್ಷಕಾರರ ವಾದ

"ಹೀಗಿರುವಾಗ ನಮ್ಮ ಕಕ್ಷೀದಾರರ ಕೋರಿಕೆಯಂತೆ ಮಸೀದಿಯು ಯಾವುದರ ಸ್ಮಾರಕ ಎನ್ನುವುದು ಅರಿವಾಗಬೇಕು. ಅದು ಸಮೀಕ್ಷೆ ಮೂಲಕ ಬಹಿರಂಗವಾದರೆ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಈಗ ಇರುವ ತಡೆಯಾಜ್ಞೆ ತೆರವು ಮಾಡಿದರೆ ಅಲ್ಲಿ ಮಸೀದಿ ನಿರ್ಮಾಣವಾಗುತ್ತದೆ. ಇದರಿಂದ ಚಾರಿತ್ರಿಕ ಸ್ಮಾರಕದ ಸಂರಕ್ಷಣೆ ಅಸಾಧ್ಯವಾಗುತ್ತದೆ” ಎಂದು ತಿಳಿಸಿದರು.

Also Read
ಮಂಗಳೂರು ಮಸೀದಿ ವಿವಾದ: ನವೀಕರಣ ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವ ಸಿವಿಲ್ ನ್ಯಾಯಾಲಯ

ಮಸೀದಿ ನವೀಕರಣಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ನ್ಯಾಯಾಲಯ ಮುಂದುವರೆಸಲು ನಿರ್ಧರಿಸಿತು. ಆದರೆ ತಡೆಯಾಜ್ಞೆ ಮುಂದುವರಿಕೆ ವಿರೋಧಿಸಿ ಪ್ರತಿವಾದಿ ಮುಸ್ಲಿಂ ಪಕ್ಷಕಾರರ ಪರ ವಕೀಲ ಎಂ ಪಿ ಶೆಣೈ ಮೆಮೊ ಸಲ್ಲಿಸಿದರು. ಈ ಮೊಮೊವನ್ನು 3ನೇ ವಾದಕಾಲೀನ ಅರ್ಜಿಯೊಂದಿಗೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ ನ್ಯಾಯಾಲಯ ಹಿಂದೂ ಪಕ್ಷಕಾರರು ಇಂದು ಮಂಡಿಸಿದ ವಾದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ನಾಳೆಗೆ (ಜೂನ್‌ 10) ಮುಂದೂಡಿತು.

Related Stories

No stories found.
Kannada Bar & Bench
kannada.barandbench.com