[ಪೋಕ್ಸೊ] ಬಾಲಕರನ್ನು ಅಪರಾಧಿಗಳಂತೆ ಕಾಣುವುದು ಕಾಯಿದೆ ಉದ್ದೇಶವಲ್ಲ ಎಂದು ವಾದ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

“ಪೋಕ್ಸೊ ಗಂಭೀರ ಪ್ರಕರಣವಾಗಿದ್ದು, ಇದರಲ್ಲಿ ರಾಜಿ ಮಾಡಿಸಲಾಗದು. ಹೀಗೆ ಮಾಡಿದರೆ ಇದು ಕೆಟ್ಟ ನಿದರ್ಶನವಾಗಲಿದೆ” ಎಂದು ರಾಜ್ಯ ಸರ್ಕಾರದ ವಕೀಲರ ವಾದ.
Karnataka HC and POCSO
Karnataka HC and POCSO

ಪಕ್ಷಕಾರರು ಸಂಧಾನಕ್ಕೆ ಮುಂದಾಗಿರುವುದರಿಂದ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿ ಆರೋಪಿಯಾಗಿರುವ ಬಾಲಕನ ವಿರುದ್ಧದ ಪ್ರಕರಣ ವಜಾ ಮಾಡಬೇಕು ಎಂದು ಕೋರಿರುವ ಮನವಿಯ ಕುರಿತಾದ ತೀರ್ಪನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ.

ಬೆಂಗಳೂರಿನ ಆರ್‌ ಟಿ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಆರೋಪಿ ಬಾಲಕ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ತೀಚೆಗೆ ನಡೆಸಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ಪ್ರತೀಕ್‌ ಚಂದ್ರಮೌಳಿ ಮತ್ತು ಕೆ ಎಸ್‌ ವಿದ್ಯಾಶ್ರೀ ಅವರು “ಹಾಲಿ ಪ್ರಕರಣದಲ್ಲಿ ಆಕ್ಷೇಪಾರ್ಹವಾದ ಅಪರಾಧಗಳು ವ್ಯಕ್ತಿಗತವಾಗಿದ್ದು, ಇದು ಇಬ್ಬರು ಅಪ್ರಾಪ್ತರ ನಡುವಿನ ವಿವಾದವಾಗಿದೆ. ಹೀಗಾಗಿ, ಈ ಪ್ರಕರಣದಲ್ಲಿ ಕಾನೂನಿನ ಪ್ರಕ್ರಿಯೆ ವಜಾ ಮಾಡುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ. ಬದಲಿಗೆ ಅರ್ಜಿದಾರರು ಮತ್ತು ಅಪ್ರಾಪ್ತ ಸಂತ್ರಸ್ತೆಯು ಉತ್ತಮ ಬದುಕು ರೂಪಿಸಿಕೊಳ್ಳಲು ಅನುವಾಗಲಿದೆ” ಎಂದಿದ್ದಾರೆ.

“ಮಕ್ಕಳ ಮೇಲಿನ ದಾಳಿ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಚಟುವಟಿಕೆಗಳನ್ನು ತಡೆಯಲು ಪೋಕ್ಸೊ ಕಾಯಿದೆ ಜಾರಿಗೆ ತರಲಾಗಿದ್ದು, ಅದಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಅಪ್ರಾಪ್ತರು ನೀಡುವ ಒಪ್ಪಿಗೆಯು ಕಾನೂನಿನ ಅಡಿ ಅಸ್ಪಷ್ಟ (ಗ್ರೇ ಏರಿಯಾ) ವ್ಯಾಪ್ತಿಗೆ ಬರುತ್ತದೆ. ಇದನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ” ಎಂದು ವಾದಿಸಿದ್ದಾರೆ.

“ಇಬ್ಬರು ಅಪ್ರಾಪ್ತ ಮಕ್ಕಳ ಒಪ್ಪಿಗೆಯ ಸಂಬಂಧದಿಂದಾಗಿ ಎರಡು ಕುಟುಂಬಗಳ ನಡುವೆ ವಿವಾದ ಸೃಷ್ಟಿಯಾದರೆ ಅದು ಎರಡು ಕುಟುಂಬಗಳಿಗೆ ಸೀಮಿತವಾಗಿರುತ್ತದೆ. ಅಪ್ರಾಪ್ತ ಬಾಲಕರ ವಿರುದ್ಧ ಪೋಕ್ಸೊ ಕಾಯಿದೆಯನ್ನು ದುರ್ಬಳಕೆ ಮಾಡಿ, ಅವರನ್ನು ಕ್ರಿಮಿನಲ್‌ಗಳ ರೀತಿ ಕಾಣುವುದು ಪೋಕ್ಸೊ ಕಾಯಿದೆಯ ಉದ್ದೇಶವಲ್ಲ” ಎಂದು ಹೇಳಿದ್ದಾರೆ.

“ಪೋಕ್ಸೊ ಕಾನೂನಿನಲ್ಲಿ ಅತ್ಯಗತ್ಯವಾಗಿ ಬದಲಾವಣೆ ಮಾಡಬೇಕಿದೆ. ಹೀಗಾದಲ್ಲಿ, ಯಾರಿಗೂ ಏನೂ ತೊಂದರೆ ಕೊಡದ, ಅಪಕ್ವ ವಯಸ್ಸಿನಲ್ಲಿ ಮಾಡಿದ ಕೆಲಸಕ್ಕೆ ಅಪ್ರಾಪ್ತ ಬಾಲಕರ ಬದುಕು ಮುರಾಬಟ್ಟೆಯಾಗುವುದಿಲ್ಲ. ಸಮಾಜದ ಬದಲಾಗುತ್ತಿದ್ದು, ಕಾನೂನಿನಲ್ಲೂ ಬದಲಾವಣೆಯಾಗಬೇಕಿದೆ. ಅದರಲ್ಲೂ ಪೋಕ್ಸೊ ಕಾಯಿದೆಯಂಥ ಕಾನೂನಿನಲ್ಲಿ ಬದಲಾವಣೆ ಮಾಡಬೇಕಿದ್ದು, ಅದು ಲಿಂಗ ಪಕ್ಷಪಾತಿ ಎನಿಸುವಂತಾಗಬಾರದು. ಅಲ್ಲದೇ, ಬದುಕಿನ ಅಪಕ್ವ ಕಾಲದಲ್ಲಿ ಮಾಡಿದ ಕೆಲಸಕ್ಕೆ ಬಾಲಕರ ಅತ್ಯಮೂಲ್ಯವಾದ ಅಪ್ರಾಪ್ತ ವಯಸ್ಸಿಗೆ ಕೆಡುಕಾಗದಂತೆ ಮಾಡಬೇಕು” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಪೋಕ್ಸೊ ಗಂಭೀರ ಪ್ರಕರಣವಾಗಿದ್ದು, ಇದರಲ್ಲಿ ರಾಜಿ ಮಾಡಿಸಲಾಗದು. ಹೀಗೆ ಮಾಡಿದರೆ ಇದು ಕೆಟ್ಟ ನಿದರ್ಶನವಾಗಲಿದೆ” ಎಂದು ವಾದಿಸಿದ್ದರು.

ಘಟನೆಯ ಹಿನ್ನೆಲೆ: 2021ರ ನವೆಂಬರ್‌ 21ರಂದು ಬಾಲಕಿಯ ತಂದೆಯು ಕಾಲೇಜಿಗೆ ತೆರಳಿದ್ದ ಬಾಲಕಿ ಮನೆಗೆ ಮರಳಿಲ್ಲ ಎಂದು ಆರ್‌ ಟಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್‌ 363 ಅಡಿ ಕಿಡ್ನ್ಯಾಪ್‌ ಪ್ರಕರಣ ದಾಖಲಿಸಿದ್ದರು. ಅರ್ಜಿದಾರ ಬಾಲಕ ಮತ್ತು ಬಾಲಕಿಯ ಫೋನ್‌ಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಅವರಿಬ್ಬರೂ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ವಾಪಸಾಗುತ್ತಿದ್ದಾರೆ ಎಂದು ಪತ್ತೆ ಹಚ್ಚಿದ್ದರು. ಆನಂತರ ಬಾಲಕನನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿ ಮೂರು ದಿನ ಪೊಲೀಸರು ವಶಕ್ಕೆ ಪಡೆದಿದ್ದರು. ಇದೇ ರೀತಿ ಬಾಲಕನ ತಂದೆಯೂ ಅದೇ ಠಾಣೆಯಲ್ಲಿ ಪುತ್ರ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು.

ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಬಾಲಕನ ವಿರುದ್ಧ ಸಲ್ಲಿಸಿದ್ದ ಪ್ರಾಥಮಿಕ ವರದಿಯಲ್ಲಿ ಐಪಿಸಿ 363ರ (ಅಪಹರಣ) ಜೊತೆಗೆ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್‌ 5 ಮತ್ತು 6ನ್ನು ಸೇರ್ಪಡೆ ಮಾಡಿದ್ದರು. ಆನಂತರ 2011ರ ನವೆಂಬರ್‌ 30ರಂದು ಬಾಲ ನ್ಯಾಯ ಮಂಡಳಿಯು ಬಾಲಕನಿಗೆ ಜಾಮೀನು ಮಂಜೂರು ಮಾಡಿತ್ತು.

ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರೋಪಪಟ್ಟಿ ಸಲ್ಲಿಸಿಲ್ಲ. ಪೋಕ್ಸೊ ಮತ್ತು ಬಾಲ ನ್ಯಾಯ ಕಾಯಿದೆ ಅನ್ವಯ ವಿಚಾರಣೆಯು ಮೂರು ತಿಂಗಳಲ್ಲಿ ಮುಗಿಯಬೇಕು ಎಂದಿದೆ. ಇದನ್ನು ಪರಿಗಣಿಸಿ ಬಾಲಕ ಮತ್ತು ಬಾಲಕಿಯ ಕುಟುಂಬ ಸದಸ್ಯರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ, ಬಾಲಕನ ವಿರುದ್ಧದ ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ವಿಸ್ತೃತವಾಗಿ ಪರಿಗಣಿಸಬೇಕಿದೆ. ಹೀಗಾಗಿ, ಹೆಚ್ಚಿನ ತನಿಖೆಗೆ ತಡೆ ನೀಡಲಾಗಿದೆ ಎಂದು ವಿಚಾರಣೆ ಮುಂದೂಡಿತ್ತು. ಆನಂತರ ಉಭಯ ಪಕ್ಷಕಾರರ ವಾದ ಆಲಿಸಿ, ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ.

Kannada Bar & Bench
kannada.barandbench.com