ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ತಮಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಮ್ಮನ್ನು ದೋಷಿ ಎಂದು ನೀಡಿರುವ ತೀರ್ಪಿಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ಏಪ್ರಿಲ್ 29ರಂದು (ನಾಳೆ) ವಿಚಾರಣೆ ನಡೆಸಲಿದ್ದಾರೆ [ರಾಹುಲ್ ಗಾಂಧಿ ಮತ್ತು ಪೂರ್ಣೇಶ್ ಮೋದಿ ನಡುವಣ ಪ್ರಕರಣ].
ಈ ಹಿಂದೆ ರಾಹುಲ್ ಮೇಲ್ಮನವಿಯ ವಿಚಾರಣೆಯಿಂದ ಹಿಂದೆ ಸರಿದಿದ್ದ ನ್ಯಾ. ಗೀತಾ ಗೋಪಿ ಅರ್ಜಿಯ ವಿಚಾರಣೆಗೆ ಹೊಸ ಪೀಠ ನಿಯೋಜಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಪರ ವಕೀಲ ಪಂಕಜ್ ಚಂಪನೇರಿ ಅವರು ತುರ್ತು ವಿಚಾರಣೆ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ಪ್ರಸ್ತಾಪಿಸಿದ್ದರು.
ಗುಜರಾತ್ ಹೈಕೋರ್ಟ್ ಜಾಲತಾಣದ ಪ್ರಕಾರ ನ್ಯಾಯಮೂರ್ತಿ ಪ್ರಚ್ಚಕ್ ಅವರು ಮನವಿಯನ್ನು ಏಪ್ರಿಲ್ 29 ರ ಶನಿವಾರದಂದು ಆಲಿಸುವ ಸಾಧ್ಯತೆ ಇದೆ.
ತನ್ನನ್ನು ತಪ್ಪಿತಸ್ಥ ಎಂದು ಘೋಷಿಸಿದ ತೀರ್ಪನ್ನು ಅಮಾನತುಗೊಳಿಸುವಂತೆ ರಾಹುಲ್ ಮಾಡಿದ್ದ ಮನವಿಯನ್ನು ಏಪ್ರಿಲ್ 20 ರಂದು ಸೂರತ್‌ನ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ರಾಜ್ಯದ ಕೋಲಾರದಲ್ಲಿ 2019ರಲ್ಲಿ ನಡೆದಿದ್ದ ಚುನಾವಣಾ ಸಮಾವೇಶದಲ್ಲಿ ʼಎಲ್ಲಾ ಕಳ್ಳರಿಗೆ ಮೋದಿ ಉಪನಾಮ ಇದೆʼ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೋಷಿ ಎಂದು ಘೋಷಿಸಿತ್ತು. ಪರಿಣಾಮ ಕೇರಳದ ವಯನಾಡ್ ಸಂಸತ್ ಸದಸ್ಯತ್ವವನ್ನು ರಾಹುಲ್ ಕಳೆದುಕೊಂಡಿದ್ದರು.