ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪೌರತ್ವ ರದ್ದುಗೊಳಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿಯ ಸಂಬಂಧ ಅಲಾಹಾಬಾದ್ ಹೈಕೋರ್ಟ್‌ನ ಪರಿಗಣನೆಯಲ್ಲಿರುವ ಇದೇ ರೀತಿಯ ಅರ್ಜಿಯ ಸ್ಥಿತಿಗತಿ ತಿಳಿದ ನಂತರವಷ್ಟೇ ವಿಚಾರಣೆ ನಡೆಸುವುದಾಗಿ ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ಎರಡು ಹೈಕೋರ್ಟ್‌ಗಳು ಒಂದೇ ಪ್ರಕರಣವನ್ನು ಏಕಕಾಲದಲ್ಲಿ ಆಲಿಸುವುದು ಸರಿ ಹೋಗದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಅಲಾಹಾಬಾದ್ ಹೈಕೋರ್ಟ್‌ನಲ್ಲಿನ ವಿಚಾರಣೆಯ ಸ್ಥಿತಿಗತಿ ಬಗ್ಗೆ ವಿವರ ನೀಡುವಂತೆ ಕೇಂದ್ರ ಸರ್ಕಾರದ ಸ್ಥಾಯಿ ವಕೀಲ (ಸಿಜಿಎಸ್‌ಸಿ) ಅಪೂರ್ವ್ ಕುರುಪ್ ಅವರನ್ನು ನ್ಯಾಯಮೂರ್ತಿ ಮನಮೋಹನ್ ಕೇಳಿದರು.
ಅಲಾಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಲಾದ ಮನವಿಯ ಪ್ರತಿಯನ್ನು ಕೂಡ ನ್ಯಾಯಾಲಯ ಬಯಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಾಹಾಬಾದ್ ಹೈಕೋರ್ಟ್‌ನಿಂದ ವಿವರ ಪಡೆದ ನಂತರ ಪ್ರಕರಣದ ವಿಚಾರಣೆ ಮುಂದುವರಿಸಬೇಕೆ ಎಂದು ನಿರ್ಧರಿಸುವುದಾಗಿ ಅದು ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 9 ರಂದು ನಡೆಯಲಿದೆ.