ಗೌರಿ ಕೊಲೆಗೆ ಆರ್‌ಎಸ್‌ಎಸ್‌ ತಳುಕು: ಮಾನಹಾನಿ ದಾವೆ ರದ್ದು ಕೋರಿ ಬಾಂಬೆ ಹೈಕೋರ್ಟ್‌ ಕದತಟ್ಟಿದ ರಾಹುಲ್‌ ಗಾಂಧಿ

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ವಿರುದ್ಧ ಮುಂಬೈ ವಕೀಲ ಧ್ರುತಿಮಾನ್‌ ಜೋಶಿ ನೀಡಿದ ದೂರಿನ ಅನ್ವಯ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲಾಗಿದೆ.
Rahul Gandhi, Bombay High Court
Rahul Gandhi, Bombay High Court

ತಮ್ಮ ವಿರುದ್ಧದ ಮಾನಹಾನಿ ದಾವೆಯ ಕುರಿತು ಮುಂಬೈ ನ್ಯಾಯಾಲಯವು ಸಂಜ್ಞೇಯ ಪರಿಗಣಿಸಿ ಆದೇಶ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಸದರಿ ಪ್ರಕರಣವು ಇಂದು ನ್ಯಾಯಮೂರ್ತಿ ಎಸ್‌ ವಿ ಕೊತ್ವಾಲ್‌ ಅವರ ಮುಂದೆ ವಿಚಾರಣೆಗೆ ಪಟ್ಟಿಯಾಗಿದ್ದು, ಅದನ್ನು ಡಿಸೆಂಬರ್‌ 5ಕ್ಕೆ ಮುಂದೂಡಲಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಅವರ ಕೊಲೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಿ ರಾಹುಲ್‌ ಗಾಂಧಿ ಆಪಾದಿಸಿದ್ದಾರೆ ಎಂದು ರಾಹುಲ್‌ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ವಿರುದ್ಧ ಮುಂಬೈ ವಕೀಲ ಧ್ರುತಿಮಾನ್‌ ಜೋಶಿ ನೀಡಿದ ದೂರಿನ ಅನ್ವಯ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲಾಗಿದೆ.

ಸಂಸತ್‌ನ ಹೊರಗೆ 2017ರ ಸೆಪ್ಟೆಂಬರ್‌ನಲ್ಲಿ ರಾಹುಲ್‌ ಅವರು ರಾಷ್ಟ್ರೀಯ ಮಾಧ್ಯಮಗಳ ಜೊತೆ ಮಾತನಾಡುವಾಗ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ದೂರುದಾರ ವಕೀಲ ಹೇಳಿದ್ದಾರೆ. ಇಂಥದ್ದೇ ಹೇಳಿಕೆಯನ್ನು ಯೆಚೂರಿ ಅವರು ಬೇರೆ ಸ್ಥಳದಲ್ಲಿ ರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ್ದರು ಎನ್ನಲಾಗಿದೆ.  

ಆರ್‌ಎಸ್‌ಎಸ್‌ನ ಕಾರ್ಯಕರ್ತನಾಗಿರುವುದರಿಂದ ರಾಹುಲ್‌ ಹೇಳಿಕೆಯಿಂದ ಅವಮಾನಿತನಾಗಿದ್ದು, ಸಾರ್ವಜನಿಕವಾಗಿ ಆ ಹೇಳಿಕೆಯಿಂದ ಆ ಸಂಘಟನೆಯ ಜೊತೆ ಗುರುತಿಸಿಕೊಂಡಿರುವುದಕ್ಕೆ ನಿಂದನೆ ಮಾಡಿದಂತಾಗಿದೆ. 2019ರ ಫೆಬ್ರವರಿ 18ರಂದು ಬೊರಿವೆಲಿ ಮ್ಯಾಜಿಸ್ಟ್ರೇಟ್‌ ಅವರು ರಾಹುಲ್‌ ಮತ್ತು ಯೆಚೂರಿ ವಿರುದ್ದ ಸಂಜ್ಞೇಯ ಪರಿಗಣಿಸಿದ್ದು, ಸೋನಿಯಾ ಗಾಂಧಿ ಅವರ ವಿರುದ್ಧದ ದೂರು ವಜಾ ಮಾಡಿದ್ದರು.

Also Read
ಮೋದಿ ಉಪನಾಮ ಹೇಳಿಕೆ: ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ವಿರುದ್ಧದ ದೋಷಿ ಆದೇಶಕ್ಕೆ ಸುಪ್ರೀಂ ತಡೆ

2019ರ ಜುಲೈ 4ರಂದು ಬೊರಿವಿಲಿ ನ್ಯಾಯಾಲಯದ ಮುಂದೆ ರಾಹುಲ್‌ ಮತ್ತು ಯೆಚೂರಿ ಹಾಜರಾಗಿ, ಅರ್ಜಿ ಸಲ್ಲಿಸಿದ್ದರು. ಇಬ್ಬರಿಗೂ ಜಾಮೀನು ದೊರೆತಿದ್ದು, ನ್ಯಾಯಾಲಯವು ವಿಚಾರಣೆ ಮುಂದುವರಿಸಿದೆ.

ತಾನು ಮತ್ತು ಯೆಚೂರಿ ಅವರು ವಿಭಿನ್ನ ಸ್ಥಳಗಳಲ್ಲಿ ಹೇಳಿಕೆ ನೀಡಿದ್ದು, ಅವುಗಳೆರಡನ್ನೂ ಒಟ್ಟಿಗೆ ವಿಚಾರಣೆ ನಡೆಸಲಾಗದು. ಈ ಹಿನ್ನೆಲೆಯಲ್ಲಿ ದೂರು ವಜಾ ಮಾಡಬೇಕು ಎಂದು ಕೋರಿದ್ದ ರಾಹುಲ್‌ ಅರ್ಜಿಯನ್ನು 2019ರ ನವೆಂಬರ್‌ನಲ್ಲಿ ಮ್ಯಾಜಿಸ್ಟ್ರೇಟ್‌ ವಜಾ ಮಾಡಿದ್ದರು. ಇದನ್ನೇ ರಾಹುಲ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com