ಮೋದಿ ಉಪನಾಮ ಕುರಿತು ತಾನು ನೀಡಿದ್ದ ಹೇಳಿಕೆ ವಿರುದ್ಧ ದಾಖಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತನ್ನನ್ನು ದೋಷಿ ಎಂದು ತೀರ್ಪು ನೀಡಿ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಮನವಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಸಂಸತ್ ಸದಸ್ಯತ್ವದಿಂದ ರಾಹುಲ್ ಅವರನ್ನು ಅನರ್ಹಗೊಳಿಸಿರುವುದರಿಂದ ಅವರಿಗೆ ಯಾವುದೇ ಎದುರಿಸಲಾಗದಂತಹ ಅಥವಾ ಮಾರ್ಪಡಿಸಲಾಗದಂತಹ ನಷ್ಟ ಉಂಟಾಗದು ಎಂದು ನ್ಯಾಯಾಧೀಶ ರಾಬಿನ್ ಮೊಗೇರ ಹೇಳಿದ್ದಾರೆ.
ರಾಹುಲ್ ಮನವಿ ತಿರಸ್ಕಾರಕ್ಕೆ ನ್ಯಾಯಾಲಯ ನೀಡಿದ ಆರು ಕಾರಣಗಳೇನು ಎಂಬುದರ ವಿವರ ಇಲ್ಲಿದೆ:
ನರೇಂದ್ರ ಮೋದಿ ವಿರುದ್ಧ ಕೆಲ ಅವಹೇಳನಕಾರಿ ಟೀಕೆ ಮಾಡಿದ ಗಾಂಧಿಯವರು ಮೋದಿ ಉಪನಾಮ ಹೊಂದಿದ ವ್ಯಕ್ತಿಗಳನ್ನು ಕಳ್ಳರೊಂದಿಗೆ ಹೋಲಿಸಿದರು. ಹೀಗಾಗಿ ದೂರುದಾರ ಪೂರ್ಣೇಶ್ ಮೋದಿ ಅವರ ಪ್ರತಿಷ್ಠೆಗೂ ಧಕ್ಕೆಯಾಯಿತು. ದೂರುದಾರರು ಮಾಜಿ ಸಚಿವರಾಗಿದ್ದು ಸಾರ್ವಜನಿಕ ಜೀವನದಲ್ಲಿರುವ ಅವರ ಪ್ರತಿಷ್ಠೆಗೆ ಇಂತಹ ಮಾನಹಾನಿಕರ ಹೇಳಿಕೆಗಳು ಖಂಡಿತ ಧಕ್ಕೆ ಉಂಟು ಮಾಡುತ್ತವೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಾಕ್ಷಿಗಳನ್ನು ಪ್ರಶ್ನಿಸಲು ಗಾಂಧಿ ಅವರಿಗೆ ಎಲ್ಲಾ ಅವಕಾಶಗಳನ್ನು ನೀಡಲಾಗಿತ್ತು ಎಂದು ದಾಖಲೆಗಳಿಂದ ತಿಳಿದು ಬರುತ್ತದೆ. ಆದ್ದರಿಂದ ರಾಹುಲ್ ನ್ಯಾಯೋಚಿತ ವಿಚಾರಣೆಯಿಂದ ವಂಚಿತರಾಗಿದ್ದಾರೆ ಎಂಬ ವಾದವನ್ನು ಒಪ್ಪುವುದಿಲ್ಲ.
ರಾಹುಲ್ ಭಾಷಣ ಅರ್ಜಿದಾರ ಪೂರ್ಣೇಶ್ ಮೋದಿ ಅವರಿಗೆ ಮಾನಸಿಕ ಯಾತನೆ ಉಂಟು ಮಾಡಿದೆ.
ಸಂಸತ್ ಸದಸ್ಯತ್ವದಿಂದ ರಾಹುಲ್ ಅವರನ್ನು ಅನರ್ಹಗೊಳಿಸಿರುವುದರಿಂದ ಅವರಿಗೆ ಯಾವುದೇ ಎದುರಿಸಲಾಗದಂತಹ ಅಥವಾ ತುಂಬಿಕೊಡಲಾಗದಂತಹ ನಷ್ಟ ಅಥವಾ ಧಕ್ಕೆ ಒದಗಿದೆ ಎಂದು ಹೇಳಲಾಗದು.
ಶಿಕ್ಷೆಗೆ ತಡೆ ನೀಡದಿದ್ದರೆ ಅದು ತಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ರಾಹುಲ್ ವಿವರಿಸಿಲ್ಲ.
ಸಿಆರ್‌ಪಿಸಿ ಸೆಕ್ಷನ್ ಅಡಿಯಲ್ಲಿನ ಶಿಕ್ಷೆಯನ್ನು ಅಮಾನತ್ತಿನಲ್ಲಿಡುವ ಅಥವಾ ತಡೆ ಹಿಡಿಯುವ ಅಧಿಕಾರ ವಿವೇಚನೆಗೊಳಪಟ್ಟಿದ್ದು ಅಂತಹ ಅಧಿಕಾರವನ್ನು ಸಲೀಸಾಗಿ ಮತ್ತು ಯಾಂತ್ರಿಕವಾಗಿ ಚಲಾಯಿಸಿದರೆ, ಇದು ನ್ಯಾಯ ವಿತರಣಾ ವ್ಯವಸ್ಥೆ ಬಗೆಗಿನ ಸಾರ್ವಜನಿಕ ಗ್ರಹಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಂತಹ ಆದೇಶ ನೀಡಿದರೆ ನ್ಯಾಯಾಂಗದ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸ ಅಲುಗಾಡುತ್ತದೆ. ಇನ್ನು ತನ್ನ ವಿರುದ್ಧದ ಶಿಕ್ಷೆ ಅಮಾನತುಗೊಳಿಸುವಂತಹ ಯಾವುದೇ ವಾದವನ್ನು ರಾಹುಲ್ ಮಂಡಿಸಿಲ್ಲ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]