ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು ನೀಡಿದ ರಾಜಸ್ಥಾನ ಹೈಕೋರ್ಟ್

ಬೇರೊಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಈಚೆಗೆ ಜಾಮೀನು ನೀಡಿತ್ತು.
Rajasthan High Court (Jodhpur bench), Asaram Bapu
Rajasthan High Court (Jodhpur bench), Asaram BapuAsaram Bapu (asharamjibapu.org)
Published on

ಅಪ್ರಾಪ್ತ ಬಾಲಕಿ ಮೇಲೆ 2013ರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಬೇರೊಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಈಚೆಗೆ ಜಾಮೀನು ನೀಡಿತ್ತು. ಇದಾದ ಕೆಲ ದಿನಗಳಲ್ಲಿ ನ್ಯಾಯಮೂರ್ತಿಗಳಾದ ದಿನೇಶ್‌ ಮೆಹ್ತಾ ಮತ್ತು ವಿನೀತ್‌ ಕುಮಾರ್‌ ಮಾಥುರ್‌ ಅವರಿದ್ದ ಹೈಕೋರ್ಟ್‌ ಪೀಠ ಅಸಾರಾಂ ಅವರಿಗೆ ಜಾಮೀನು ನೀಡಿತು.

Also Read
ವೈದ್ಯಕೀಯ ಕಾರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಸುಪ್ರೀಂ ಮಧ್ಯಂತರ ಜಾಮೀನು

ಸೂರತ್ ಆಶ್ರಮದಲ್ಲಿ ಶಿಷ್ಯೆಯೊಬ್ಬರ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಾರ್ಚ್ 31ರವರೆಗೆ ಜಾಮೀನು ನೀಡಿದ್ದು ಪ್ರಸ್ತುತ ಪ್ರಕರಣದಲ್ಲಿಯೂ ಹೈಕೋರ್ಟ್‌ ಅದೇ ರೀತಿಯ ಜಾಮೀನು ಮಂಜೂರು ಮಾಡಿದೆ.

ಅಸಾರಾಂ ಪರ ಹಿರಿಯ ವಕೀಲ ದೇವದತ್‌ ಕಾಮತ್, ವಕೀಲರಾದ ರಾಜೇಶ್ ಗುಲಾಬ್ ಇನಾಮದಾರ್ ಹಾಗೂ ಶಾಶ್ವತ್ ಆನಂದ್ ವಾದ ಮಂಡಿಸಿದ್ದರು .

2013ರ ಆಗಸ್ಟ್‌ನಲ್ಲಿ ಜೋಧ್‌ಪುರದ ಮನೈ ಗ್ರಾಮದಲ್ಲಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಏಪ್ರಿಲ್‌ನಲ್ಲಿ ಅಸಾರಾಂ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.

Also Read
ಅನಾರೋಗ್ಯ ಪೀಡಿತ ತಂದೆಯನ್ನು ನೋಡಲು ಗುಜರಾತ್ ಹೈಕೋರ್ಟ್‌ನಿಂದ ತಾತ್ಕಾಲಿಕ ಜಾಮೀನು ಕೋರಿದ ಅಸಾರಾಂ ಬಾಪು ಪುತ್ರ

ಅಸಾರಾಂ ವಿರುದ್ಧ ಐಪಿಸಿ, ಬಾಲಾಪರಾಧ ಕಾಯಿದೆ, ಪೋಕ್ಸೊ ಕಾಯಿದೆಯಡಿ ಕಳ್ಳಸಾಗಣೆ, ಅತ್ಯಾಚಾರ, ಮಹಿಳೆಯ ಘನತೆಗೆ ದಕ್ಕೆ ತರುವುದು, ಅಕ್ರಮ ಬಂಧನ, ಬೆದರಿಕೆ ಮುಂತಾದ ಆರೋಪ ನಿಗದಿಪಡಿಸಲಾಗಿತ್ತು. ಅಸಾರಾಂ ಬಂಧನವಾದ ಬಳಿಕ, ಸೂರತ್‌ನ ಇಬ್ಬರು ಮಹಿಳೆಯರು ಕೂಡ 2002 ಮತ್ತು 2005 ರ ನಡುವೆ ಅಸಾರಾಮ್ ಮತ್ತು ಅವರ ಮಗ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ದೂರಿದ್ದರು.

ಜೋಧಪುರ ಅತ್ಯಾಚಾರ ಪ್ರಕರಣದ ಕ್ರಿಮಿನಲ್ ವಿಚಾರಣೆ 2014 ರಲ್ಲಿ ಆರಂಭವಾಗಿ ನಾಲ್ಕು ವರ್ಷಗಳ ಕಾಲ ನಡೆಯಿತು. ವಿಚಾರಣೆಯ ಅವಧಿಯಲ್ಲಿ, ಒಂಬತ್ತು ಸಾಕ್ಷಿಗಳ ಮೇಲೆ ದಾಳಿ ನಡೆದು, ಅದರಲ್ಲಿ ಮೂವರು ಸಾಕ್ಷಿಗಳು ಹತರಾಗಿದ್ದರು. ಅಂತಿಮವಾಗಿ, ಅಸಾರಾಂ 2018ರಲ್ಲಿ ಶಿಕ್ಷೆಗೆ ಒಳಗಾಗಿದ್ದರು. 2022ರಲ್ಲಿ, ತಮ್ಮ ಶಿಕ್ಷೆ  ಅಮಾನತುಗೊಳಿಸುವಂತೆ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅದು ತಿರಸ್ಕೃತವಾಗಿತ್ತು.

Kannada Bar & Bench
kannada.barandbench.com