ವೈದ್ಯಕೀಯ ಕಾರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಸುಪ್ರೀಂ ಮಧ್ಯಂತರ ಜಾಮೀನು

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಅಸಾರಾಂ ಬಾಪುಗೆ ಮಾರ್ಚ್ 31, 2025ರವರೆಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತು.
Asaram Bapu, Supreme Court
Asaram Bapu, Supreme Court
Published on

ಅತ್ಯಾಚಾರ ಪ್ರಕರಣದ ಅಪರಾಧಿ, ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ .

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಅಸಾರಾಂ ಬಾಪುಗೆ ಮಾರ್ಚ್ 31, 2025ರವರೆಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತು.

Also Read
ಅನಾರೋಗ್ಯ ಪೀಡಿತ ತಂದೆಯನ್ನು ನೋಡಲು ಗುಜರಾತ್ ಹೈಕೋರ್ಟ್‌ನಿಂದ ತಾತ್ಕಾಲಿಕ ಜಾಮೀನು ಕೋರಿದ ಅಸಾರಾಂ ಬಾಪು ಪುತ್ರ

ತಮ್ಮ ಜೈಲು ಶಿಕ್ಷೆ ಅಮಾನತುಗೊಳಿಸುವಂತೆ ಅಸಾರಾಂ ಸಲ್ಲಿಸಿದ್ದ ಮನವಿಯನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಲಾಗಿದೆ . ಅಸಾರಾಮ್ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಲು ಅನುಕೂಲವಾಗುವಂತೆ ಮಾನವೀಯ ಆಧಾರದ ಮೇಲೆ ಜಾಮೀನು ಆದೇಶ ಪ್ರಕಟಿಸಲಾಗಿದೆ.

ಕೆಲ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ಜಾಮೀನು ಅವಧಿ ಮುಕ್ತಾಯದ ಬಳಿಕ ಅವರ ವೈದ್ಯಕೀಯ ಸ್ಥಿತಿಯನ್ನು ಮರುಮೌಲ್ಯಮಾಪನ ಮಾಡುವಂತೆ ಆದೇಶಿಸಿದೆ.

ಹಿರಿಯ ವಕೀಲರಾದ ದೇವದತ್‌ ಕಾಮತ್ ಮತ್ತು ದಾಮ ಶೇಷಾದ್ರಿ ನಾಯ್ಡು ಮತ್ತು ವಕೀಲ ರಾಜೇಶ್ ಗುಲಾಬ್ ಇನಾಮದಾರ್ ಅವರು ಅಸಾರಾಂ ಬಾಪು ಪರವಾಗಿ ವಾದ ಮಂಡಿಸಿದರು. ಅಸಾರಾಂ ಅವರ ಶಿಕ್ಷೆ ಕೇವಲ ಸಂತ್ರಸ್ತೆಯ ಸಾಕ್ಷ್ಯವನ್ನು ಆಧರಿಸಿದೆ. ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ಅಸಂಗತತೆಗಳಿವೆ ಎಂದು ಅವರು ವಾದಿಸಿದರು.

ಆದರೆ ನ್ಯಾಯಾಲಯ ಪ್ರಕರಣದ ಅರ್ಹತೆ ಆಧಾರದಲ್ಲಿ ವಿಚಾರಣೆ ನಡೆಸದೆ ಅಸಾರಂ ಅವರ ವೃದ್ಧಾಪ್ಯ, ಈಗಾಗಲೇ ಹೃದಯಾಘಾತಕ್ಕೆ ಅವರು ಒಳಗಾಗಿರುವುದು ಮತ್ತಿತರ ವೈದ್ಯಕೀಯ ಅಂಶಗಳನ್ನು ಉಲ್ಲೇಖಿಸಿ ಮಧ್ಯಂತರ ವೈದ್ಯಕೀಯ ಜಾಮೀನನ್ನಷ್ಟೇ ನೀಡಿತು.

ವಕೀಲರ ಮನವಿಯನ್ನು ಸರ್ಕಾರ ವಿರೋಧಿಸಿತು. ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣ ಅತ್ಯಂತ ಗಂಭೀರವಾಗಿದ್ದು ಅವರು ಜೈಲಿನಲ್ಲೇ ಚಿಕಿತ್ಸೆ ಪಡೆಯುವಂತಹ ವೈದ್ಯಕೀಯ ಸೌಲಭ್ಯಗಳು ಸಾಕಷ್ಟಿವೆ ಎಂದರು.

Also Read
ಅತ್ಯಾಚಾರ ಪ್ರಕರಣ: ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

ಸೂರತ್ ಆಶ್ರಮದಲ್ಲಿ ಶಿಷ್ಯೆಯೊಬ್ಬರ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಸಂಬಂಧ ಜನವರಿ 2023 ರಲ್ಲಿ ಗಾಂಧಿನಗರದ ಸೆಷನ್ಸ್ ನ್ಯಾಯಾಲಯ ಅಸಾರಾಂ ಬಾಪು ಅವರನ್ನು ದೋಷಿ ಎಂದು ಘೋಷಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಗುಜರಾತ್‌ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಈ ಮಧ್ಯೆ, ಜೈಲಿನಿಂದ ಮಧ್ಯಂತರ ಬಿಡುಗಡೆ ಕೋರಿ ಅಸಾರಾಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಆಗಸ್ಟ್‌ನಲ್ಲಿ ಗುಜರಾತ್‌ ಹೈಕೋರ್ಟ್‌ ಮನವಿ ತಿರಸ್ಕರಿಸಿತ್ತು. ಶಿಕ್ಷೆಯ ವಿರುದ್ಧದ ಮೇಲ್ಮನವಿ ಬಾಕಿ ಉಳಿದಿರುವಾಗ ಅಸಾರಾಂ ಅವರನ್ನು ಜೈಲಿನಿಂದ ಮಧ್ಯಂತರ ಬಿಡುಗಡೆಗೆ ಅನುಮತಿಸಲು ಯಾವುದೇ ಅಸಾಧಾರಣ ಕಾರಣವಿಲ್ಲ ಎಂದಿತ್ತು. ಹೀಗಾಗಿ ಅಸಾರಾಂ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

Kannada Bar & Bench
kannada.barandbench.com