ಪೆರೋಲ್ ಕೋರಿ ಅಸಾರಾಮ್ ಬಾಪು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ರಾಜಸ್ಥಾನ ಹೈಕೋರ್ಟ್

ಅತ್ಯಾಚಾರ ಪ್ರಕರಣದಲ್ಲಿ ಅಸಾರಾಮ್ ದೋಷಿ ಎಂದು 2018ರಲ್ಲಿ ಜೋಧಪುರ ನ್ಯಾಯಾಲಯ ತೀರ್ಪು ನೀಡಿತ್ತು. ಕಳೆದ ವರ್ಷ ಗುಜರಾತ್ ನ್ಯಾಯಾಲಯ ಭಕ್ತೆಯ ಮೇಲೆ ಅತ್ಯಾಚಾರ ಎಸಗಿದ ಮತ್ತೊಂದು ಪ್ರಕರಣದಲ್ಲಿ ಆತನನ್ನು ದೋಷಿ ಎಂದು ಘೋಷಿಸಿತ್ತು.
ರಾಜಸ್ಥಾನ ಹೈಕೋರ್ಟ್
ರಾಜಸ್ಥಾನ ಹೈಕೋರ್ಟ್

ಜೋಧಪುರದ ಜಿಲ್ಲಾ ಪೆರೋಲ್ ಸಲಹಾ ಸಮಿತಿ (ಡಿಪಿಎಸಿ) ತನ್ನ ಪೆರೋಲ್ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಜೋಧಪುರ ಪೀಠ ಇತ್ತೀಚೆಗೆ ವಜಾಗೊಳಿಸಿದೆ.

ಜೋಧಪುರದ ಕೇಂದ್ರ ಕಾರಾಗೃಹದಲ್ಲಿ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಮ್ 2013ರಿಂದ ಜೈಲಿನಲ್ಲಿದ್ದಾರೆ. 

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ 2018ರಲ್ಲಿ ಮೊದಲ ಬಾರಿಗೆ ಅಸಾರಾಮ್‌ಗೆ ಶಿಕ್ಷೆ ವಿಧಿಸಲಾಗಿತ್ತು. ಕಳೆದ ವರ್ಷ ಗುಜರಾತ್ ನ್ಯಾಯಾಲಯ ಭಕ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಆತನನ್ನು ದೋಷಿ ಎಂದು ಘೋಷಿಸಿತ್ತು. ಎರಡೂ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಏಕಕಾಲದಲ್ಲಿ ಜಾರಿಯಲ್ಲಿದೆ.

ರಾಜಸ್ಥಾನದಲ್ಲಿ 2021ರ ಹೊಸ ಪೆರೋಲ್ ನಿಯಮಾವಳಿ ಪ್ರಕಾರ ರಾಜ್ಯದ ಹೊರಗಿನ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಕೈದಿಗೆ ಪೆರೋಲ್ ಪಡೆಯಲು ಅನುಮತಿ ಇಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜೇಂದ್ರ ಪ್ರಕಾಶ್ ಸೋನಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಪ್ರತಿಕೂಲ ಪೊಲೀಸ್ ವರದಿಗಳಿಂದಾಗಿ ಜೋಧಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರೋಲ್ ಕೋರಿ ಅಸಾರಾಮ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜೇಂದ್ರ ಪ್ರಕಾಶ್ ಸೋನಿ
ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜೇಂದ್ರ ಪ್ರಕಾಶ್ ಸೋನಿ

ಜೋಧಪುರ ಮತ್ತು ಗುಜರಾತ್ ಎರಡೂ ಪ್ರಕರಣಗಳಲ್ಲಿ ನೀಡಲಾದ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಶಿಕ್ಷೆಯನ್ನು ಅಸಾರಾಮ್‌ ಈಗಾಗಲೇ ಅನುಭವಿಸಿದ್ದಾರೆ, ಇದರಿಂದಾಗಿ ಅವರು ಪೆರೋಲ್ ಪಡೆಯಲು ಅರ್ಹರಾಗಿದ್ದಾರೆ ಎಂಬುದು ಹೈಕೋರ್ಟ್ ಎದುರು ಅಸಾರಾಮ್ ಪರ ವಕೀಲರು ವಾದಿಸಿದ್ದರು.

ಪೆರೋಲ್ ಪಡೆಯುವುದಕ್ಕಾಗಿ ಅವರು ಸಲ್ಲಿಸಿದ ಅರ್ಜಿಯನ್ನು 1958ರ ಹಳೆಯ ಪೆರೋಲ್ ನಿಯಮಾವಳಿ ಅಡಿಯಲ್ಲಿ ಮಾತ್ರ ಪರಿಗಣಿಸಬೇಕೆ ವಿನಾ 2021ರ ಹೊಸ ಪೆರೋಲ್ ನಿಯಮಾವಳಿ ಅಡಿಯಲ್ಲಿ ಅಲ್ಲ ಎಂದು ವಾದಿಸಲಾಯಿತು.

ಜೋಧಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಮ್ ಅವರ ಪೆರೋಲ್ ಅರ್ಜಿಯನ್ನು ಹಳೆಯ ಪೆರೋಲ್ ನಿಯಮಾವಳಿ ಅಡಿಯಲ್ಲಿ ಪರಿಗಣಿಸಲಾಗಿದೆ. ಆದರೆ ಗುಜರಾತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಮ್ ಅವರ ಪೆರೋಲ್ ಪ್ರಕರಣವನ್ನು 2021ರ ಪೆರೋಲ್ ನಿಯಮಾವಳಿ ಅಡಿಯಲ್ಲಿ ಪರಿಶೀಲಿಸಲಾಗಿದೆ. ಇದು ಮತ್ತೊಂದು ರಾಜ್ಯದ ನ್ಯಾಯಾಲಯದಿಂದ ಶಿಕ್ಷೆಗೊಳಗಾದರೆ ಕೈದಿ ಪೆರೋಲ್ ಪಡೆಯಲು ಅರ್ಹರಲ್ಲ ಎಂದು ಹೇಳುತ್ತದೆ ಎಂಬುದಾಗಿ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಾದ ಆಲಿಸಿದ ನ್ಯಾಯಾಲಯ ಅಸಾರಾಮ್ ಅವರ ಪೆರೋಲ್ ಅರ್ಜಿಯನ್ನು ಎರಡು ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ ಎಂದಿತು. ಮೊದಲನೆಯದಾಗಿ, ಅವರು ತಮ್ಮ ಎರಡು ಅರ್ಜಿಗಳಲ್ಲಿ ಪೆರೋಲ್ ಪಡೆಯಲು ವಿಭಿನ್ನ ಕಾರಣಗಳನ್ನು ನೀಡಿರುವುದು ಮತ್ತು ಎರಡನೆಯದಾಗಿ, ಅವರ ಬಿಡುಗಡೆ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪೊಲೀಸರು ವರದಿಗಳಿವೆ ಎಂಬುದಾಗಿ ತಿಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Asha Ram v State Of Rajasthan.pdf
Preview

Related Stories

No stories found.
Kannada Bar & Bench
kannada.barandbench.com