
ಜೈಪುರ, ಜೋಧ್‌ಪುರ ಹಾಗೂ ಉದಯಪುರ ನಗರಗಳ ರಸ್ತೆಗಳಿಂದ ಬೀದಿ ನಾಯಿ ಮತ್ತು ಬೀಡಾಡಿ ಪ್ರಾಣಿಗಳನ್ನು ತೆರೆವುಗೊಳಿಸುವುದಕ್ಕಾಗಿ ವಿಶೇಷ ಅಭಿಯಾನ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಅಭಿಯಾನದ ವೇಳೆ ತಮಗೆ ಅಡ್ಡಿಪಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡುವುದು ಸೇರಿದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸ್ವತಂತ್ರರು ಎಂದು ನ್ಯಾಯಮೂರ್ತಿಗಳಾದ ಕುಲದೀಪ್ ಮಾಥುರ್ ಮತ್ತು ರವಿ ಚಿರಾನಿಯಾ ಅವರಿದ್ದ ಪೀಠ ಹೇಳಿದೆ.
ಆದರೆ ಅಭಿಯಾನದ ವೇಳೆ ಪ್ರಾಣಿಗಳಿಗೆ ಸಾಧ್ಯವಾದಷ್ಟು ಹಾನಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೆ ಬೀದಿ ನಾಯಿಗಳು, ಬೀಡಾಡಿ ಪ್ರಾಣಿಗಳ ಬಗ್ಗೆ ನಾಗರಿಕರು ದೂರು ಸಲ್ಲಿಸಬೇಕಾದ ದೂರವಾಣಿ ಸಂಖ್ಯೆ ಇಲ್ಲವೇ ಇಮೇಲ್ ಐಡಿಯನ್ನು ಅಧಿಕಾರಿಗಳು ಒದಗಿಸಬೇಕು. ಪುರಸಭೆಗಳು ಅಥವಾ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ನಿರ್ವಹಿಸುವ ಆಶ್ರಯ ಕೇಂದ್ರಗಳಲ್ಲಿ ಪ್ರಾಣಿಗಳಿಗೆ ಆಹಾರ ನೀಡಬಯಸುವವರು ಆಹಾರ ನೀಡಬಹುದು ಎಂದು ಅದು ಹೇಳಿದೆ.
"ಸಾಮಾನ್ಯ ಜನರು ತಮ್ಮ ಭಾವನೆಗಳು ಅಥವಾ ಧಾರ್ಮಿಕ ನಂಬಿಕೆಗಳಿಂದಾಗಿ ಅಥವಾ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಅವುಗಳಿಗೆ ಆಹಾರ ನೀಡಲು ಅಥವಾ ಅವುಗಳನ್ನು ನೋಡಿಕೊಳ್ಳಲು ಬಯಸಿದರೆ, ಅವರು ಅಂತಹ ಚಟುವಟಿಕೆಗಳನ್ನು ಪುರಸಭೆಗಳು ಅಥವಾ ಖಾಸಗಿ ವ್ಯಕ್ತಿ/ಸಂಸ್ಥೆಗಳು ನಿರ್ವಹಿಸುವ ನಾಯಿ ಆಶ್ರಯ ಕೇಂದ್ರಗಳು ಮತ್ತು ಪಶು ಕೇಂದ್ರಗಳು ಇಲ್ಲವೇ ಗೋಶಾಲೆಗಳಲ್ಲಿ ಅದನ್ನು ಮಾಡಬಹುದು" ಎಂದು ಪೀಠ ವಿವರಿಸಿತು.
ರಸ್ತೆಗಳಿಂದ ಬೀದಿ ಪ್ರಾಣಿಗಳನ್ನು ತೆರವುಗೊಳಿಸುವಂತೆ ಮತ್ತು ವಾಹನಗಳ ಮುಕ್ತ ಸಂಚಾರಕ್ಕಾಗಿ ನಿಯಮಿತವಾಗಿ ಗಸ್ತು ತಿರುಗುವಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಅಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ನಾಯಿ ಕಡಿತ, ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಹೆಚ್ಚು ಸಾವು- ನೋವು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.
ರಾಜ್ಯ ಸರ್ಕಾರ ಮತ್ತು ಪುರಸಭೆ ಸಂಸ್ಥೆಗಳು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ತಮಗೆ ಸಮಯಾವಕಾಶ ಅಗತ್ಯವಿದೆ ಎಂದು ಸೋಮವಾರ ಕೋರಿದ್ದವು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ನಿರ್ದೇಶನಗಳನ್ನು ನೀಡಬೇಕಿದೆ ಎಂದ ನ್ಯಾಯಾಲಯ ಸೆಪ್ಟೆಂಬರ್ 8ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.