ನಾಯಿ ಕಡಿತ, ಬೀದಿ ಪ್ರಾಣಿಗಳ ಹಾವಳಿ: ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ರಾಜಸ್ಥಾನ ಹೈಕೋರ್ಟ್

ವರದಿಗಳ ಪ್ರಕಾರ ರಾಜಸ್ಥಾನದಲ್ಲಿ ನಾಯಿ ಕಡಿತ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು 2022ರಲ್ಲಿ 88,029; 2023 ರಲ್ಲಿ 1,03,533; ಮತ್ತು 2024 ರಲ್ಲಿ 1,40,543, ಜನವರಿ 2025ರೊಂದರಲ್ಲಿಯೇ 15,062 ಪ್ರಕರಣಗಳು ಪತ್ತೆಯಾಗಿದ್ದವು.
ನಾಯಿ ಕಡಿತ, ಬೀದಿ ಪ್ರಾಣಿಗಳ ಹಾವಳಿ: ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ರಾಜಸ್ಥಾನ ಹೈಕೋರ್ಟ್
Published on

ನಾಯಿ ಕಡಿತ ಪ್ರಕರಣಗಳು ಮತ್ತು ಸಾರ್ವಜನಿಕ ರಸ್ತೆ, ಹೆದ್ದಾರಿಗಳಲ್ಲಿ ಬೀದಿ ಪ್ರಾಣಿಗಳ ಹಾವಳಿಯಿಂದ ರಾಜಸ್ಥಾನದಲ್ಲಿ ಹಲವು ಸಾವು ನೋವು ವರದಿಯಾದ ಹಿನ್ನೆಲೆಯಲ್ಲಿ ರಾಜ್ಯದ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಭಾರತದಲ್ಲಿ ನಾಯಿ ಕಡಿತ ಪ್ರಕರಣಗಳ ಬಗ್ಗೆ ಆತಂಕಕಾರಿ ಅಂಕಿ ಅಂಶಗಳನ್ನು ಒದಗಿಸಿತ್ತು. ಇದನ್ನು ಉಲ್ಲೇಖಿಸಿದ್ದ ಮಾಧ್ಯಮ ವರದಿಗಳನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಕುಲದೀಪ್ ಮಾಥುರ್ ಮತ್ತು ರವಿ ಚಿರಾನಿಯಾ ಅವರಿದ್ದ ಪೀಠ "ಬೀದಿ ನಾಯಿಗಳು ಮತ್ತು ಹಸುಗಳು ನಗರದ ರಸ್ತೆಗಳಲ್ಲಿ ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಭೀತಿ ಉಂಟು ಮಾಡಿದ್ದು  ಇದರಿಂದಾಗಿ ಈ ರಸ್ತೆಗಳು ನಾಗರಿಕರಿಗೆ ಹೆಚ್ಚು ಅಸುರಕ್ಷಿತವಾಗಿವೆ. ಬೀದಿ ನಾಯಿ, ಹಸು ಮತ್ತಿತರ ಪ್ರಾಣಿಗಳ ಕಾರಣದಿಂದಾಗಿ ಇಂತಹ ಘಟನೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ... ಅದು ಏನೇ ಇರಲಿ, ಮೇಲಿನ ಸಮಸ್ಯೆಗೆ ಜವಾಬ್ದಾರಿಯುತ ಅಧಿಕಾರಿಗಳು ತಕ್ಷಣ ಗಮನಹರಿಸಬೇಕಿದೆ. ಆದ್ದರಿಂದ, ನಾವು ಸುದ್ದಿ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೇವೆ” ಎಂದು ವಿವರಿಸಿದೆ.

Also Read
ರೇಬಿಸ್, ಬೀದಿ ನಾಯಿ ಕಡಿತದಿಂದ ಹಲವು ಸಾವು: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್

ಮಾಧ್ಯಮ ವರದಿಗಳ ಪ್ರಕಾರ ರಾಜಸ್ಥಾನದಲ್ಲಿ ನಾಯಿ ಕಡಿತ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು 2022ರಲ್ಲಿ 88,029; 2023 ರಲ್ಲಿ 1,03,533; ಮತ್ತು 2024 ರಲ್ಲಿ 1,40,543, ಜನವರಿ 2025ರೊಂದರಲ್ಲಿಯೇ 15,062 ಪ್ರಕರಣಗಳು ಪತ್ತೆಯಾಗಿದ್ದವು.

"ರಾಜಸ್ಥಾನ ಸರ್ಕಾರವು 2018 ರಲ್ಲಿ 2009-2010 ರಿಂದ 2018 ರವರೆಗಿನ ಹತ್ತು ವರ್ಷಗಳ ದತ್ತಾಂಶವನ್ನು ಒಳಗೊಂಡಿರುವ ವರದಿಯನ್ನು ಪ್ರಕಟಿಸಿತ್ತು. ಈ ದತ್ತಾಂಶ ರಾಜಸ್ಥಾನ ರಾಜ್ಯದಲ್ಲಿ ಬೀದಿ ಪ್ರಾಣಿಗಳಿಂದ ಉಂಟಾದ ಸಾವುಗಳ ಅಂಕಿಅಂಶಗಳನ್ನು ನಿರ್ದಿಷ್ಟವಾಗಿ ಒಳಗೊಂಡಿತ್ತು. 2018 ರಲ್ಲಿ 185 ಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದರು. ಬೀದಿ ಪ್ರಾಣಿಗಳಿಂದಾಗಿ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, 2018 ರ ನಂತರ ರಾಜ್ಯ ಸರ್ಕಾರ ಕ್ರೋಢೀಕೃತ  ದತ್ತಾಂಶ ಬಿಡುಗಡೆ ಮಾಡಿಲ್ಲ" ಎಂದು ನ್ಯಾಯಾಲಯ ತಿಳಿಸಿತು.

"ಸಾಕು ನಾಯಿಗಳನ್ನು ಪಾಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಅದರ ನಿಯಂತ್ರಣ ಮತ್ತು ಸುರಕ್ಷತೆಗೆ ಮಾಲೀಕರು ಜವಾಬ್ದಾರರು. ಅವುಗಳಿಂದ ಜನರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು. ಸಾಕುಪ್ರಾಣಿ ಪ್ರಿಯರು ಸಾಕುಪ್ರಾಣಿಗಳ ಸುರಕ್ಷತೆಗಾಗಿ ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನ ಜನರ ಸುರಕ್ಷತೆಗಾಗಿ ನಿಯಮಿತವಾಗಿ ಲಸಿಕೆ ಮತ್ತಿತರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ ಅವರೆಲ್ಲರೂ ತಮ್ಮ ಮನೆಗಳಲ್ಲಿ ನಾಯಿಯನ್ನು ಸಾಕುಪ್ರಾಣಿಯಾಗಿ ಇಟ್ಟುಕೊಂಡು ಅವುಗಳನ್ನು ಸರಿಯಾಗಿ ನಿರ್ವಹಿಸುವ ತಮ್ಮ ನೈತಿಕ ಜವಾಬ್ದಾರಿನಿರ್ವಹಿಸುತ್ತಿಲ್ಲ. ಇದರಿಂದಾಗಿ ಅವುಗಳನ್ನು ರಸ್ತೆಯಲ್ಲಿ ಬಿಡಲಾಗುತ್ತಿದ್ದು, ಇದು ಸಮಾಜದಲ್ಲಿ ಅಪಾಯ ಉಂಟುಮಾಡುತ್ತಿದೆ" ಎಂದು ನ್ಯಾಯಾಲಯ ವಿವರಿಸಿದೆ.

Also Read
ಬೀದಿ ನಾಯಿ ಕಡಿತ: ಪರಿಹಾರ ನೀಡಿಕೆಗಾಗಿ ಜಿಲ್ಲಾ ಸಂಸ್ಥೆಗಳ ರಚನೆಗೆ ಕೇರಳ ಹೈಕೋರ್ಟ್ ಆದೇಶ

ರಾಜ್ಯದ ಪ್ರಸ್ತಾವಿತ ರಾಜಸ್ಥಾನ ರಸ್ತೆ ಸುರಕ್ಷತಾ ಮಸೂದೆ- 2022 ಈ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ವರದಿಯಾಗಿದೆ. ಆದ್ದರಿಂದ, ಇದನ್ನು ಜಾರಿಗೆ ತರಲಾಗಿದೆಯೇ ಎಂಬುದರ ಕುರಿತು ನ್ಯಾಯಾಲಯ ಸ್ಪಷ್ಟೀಕರಣವನ್ನು ಕೇಳಿತು.

ನ್ಯಾಯಾಲಯವು ವಿವಿಧ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳಿಂದ ಪ್ರತಿಕ್ರಿಯೆ ಕೋರಿದ್ದು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳೆದುರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ (ಪಿಐಎಲ್) ನೋಂದಾಯಿಸಲು ನಿರ್ದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 11 ರಂದು ನಡೆಯಲಿದೆ.

Kannada Bar & Bench
kannada.barandbench.com