ಲ್ಯಾಮಿನೇಟೆಡ್ ಕಾಗದದ ಲೋಟ, ತಟ್ಟೆಗಳ ಮೇಲೆ ರಾಜಸ್ಥಾನ ಸರ್ಕಾರ ವಿಧಿಸಿದ್ದ ನಿಷೇಧವನ್ನು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ [ಖಂಡೇಲ್‌ವಾಲ ಪೇಪರ್ ಇಂಡಸ್ಟ್ರೀಸ್ ಮತ್ತು ರಾಜಸ್ಥಾನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡುವಣ ಪ್ರಕರಣ].
ಪ್ಲಾಸ್ಟಿಕ್ ಲೇಪಿತ ಕಾಗದದ ಲೋಟ, ತಟ್ಟೆಗಳು, ಶೇ 95ರಷ್ಟು ಕಾಗದ ಮತ್ತು ಶೇ 5ರಷ್ಟು ಕಡಿಮೆ ಸಾಂದ್ರತೆಯ ಪಾಲಿಥಿಲೀನ್‌ನ (ಎಲ್‌ಡಿಪಿಇ) ತೆಳುವಾದ ಪದರವನ್ನು ಒಳಗೊಂಡಿದ್ದು, ಅವು ಏಕ-ಬಳಕೆಯ ಪ್ಲಾಸ್ಟಿಕ್ ಸರಕುಗಳಾಗಿ ಎನ್ನುವುದನ್ನು ಪ್ರಕರಣವನ್ನು ಆಲಿಸಿದ ನ್ಯಾ. ಸಮೀರ್ ಜೈನ್ ಗಮನಿಸಿದರು.
ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಭಾಗವಾಗಿ ಲ್ಯಾಮಿನೇಟೆಡ್ ಪೇಪರ್ ಕಪ್‌ಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಮುಚ್ಚುವಂತೆ ನಿರ್ದೇಶಿಸಿದ್ದ ರಾಜಸ್ಥಾನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಆರ್‌ಎಸ್‌ಪಿಸಿಬಿ) ಸೂಚನೆ ಪ್ರಶ್ನಿಸಿ ಅಂತಹ ಉತ್ಪನ್ನಗಳ ತಯಾರಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಆದೇಶವನ್ನು ಎತ್ತಿಹಿಡಿಯಲಾಗಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆಗಸ್ಟ್ 2021ರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಾವಳಿ ಅಡಿಯಲ್ಲಿ ಅಧಿಸೂಚನೆ ಹೊರಡಿಸಿ, ಜುಲೈ 1, 2022ರಿಂದ ಜಾರಿಗೆ ಬರುವಂತೆ, ಗುರುತಿಸಲಾದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ಸಂಗ್ರಹ, ವಿತರಣೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿತ್ತು. ಅದರಂತೆ, ಏಪ್ರಿಲ್ ಮತ್ತು ಜುಲೈ 2022ರಲ್ಲಿ, ಅರ್ಜಿದಾರರು ವ್ಯವಹಾರ ನಡೆಸದಂತೆ ಆರ್‌ಎಸ್‌ಪಿಸಿಬಿ ಸೂಚಿಸಿತ್ತು.
ಆದರೆ ವಿಧಿಸಿರುವ ನಿಷೇಧದಲ್ಲಿ ಲ್ಯಾಮಿನೇಟೆಡ್ ಪೇಪರ್ ಕಪ್‌ಗಳ ಪ್ರಸ್ತಾಪ ಇಲ್ಲ ಎಂದು ವಾದಿಸಿ ತಯಾರಕರು ನ್ಯಾಯಾಲಯದ ಮೊರೆ ಹೋಗಿದ್ದರು. ಅಧಿಸೂಚನೆಯು 19 ನಿರ್ದಿಷ್ಟ ಉತ್ಪನ್ನಗಳನ್ನು ಮಾತ್ರ ನಿಷೇಧಿಸಿದೆ. ಎಲ್ಲಾ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲ ಎಂಬುದು ಅವರ ವಾದವಾಗಿತ್ತು.
ಈ ವಾದಕ್ಕೆ ಆರ್‌ಎಸ್‌ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿತು. ನಿಷೇಧ ವಿಧಿಸಿದ ದಿನದಿಂದಲೂ ಪ್ಲಾಸ್ಟಿಕ್ ಕಪ್‌ಗಳನ್ನು ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು ಈ ಉದ್ದೇಶಕ್ಕಾಗಿ ವಿಶೇಷವಾಗಿ ರಚಿಸಲಾದ ರಾಷ್ಟ್ರೀಯ ಕಾರ್ಯಪಡೆ ಲ್ಯಾಮಿನೇಟೆಡ್ ಕಪ್‌ಗಳ ನಿಷೇಧಿಸುವ ಕುರಿತಂತೆ ಜೂನ್ 2022ರಲ್ಲಿ ಚರ್ಚಿಸಿತ್ತು ಎಂದಿತು.
ವಾದ ಆಲಿಸಿದ ನ್ಯಾಯಾಲಯ ಅರ್ಜಿಗಳನ್ನು ತಿರಸ್ಕರಿಸಿತು. ಅಂತಹ ಕಾಗದದ ಕಪ್‌ಗಳನ್ನು ನಿಜವಾಗಿಯೂ ನಿಷೇಧಿಸಲಾಗಿದೆ ಎಂದು ಅದು ತಿಳಿಸಿತು. ಈ ಸಂಬಂಧ ಮತ್ತೊಂದು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.