ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ತಮ್ಮನ್ನು ಬಿಡುಗಡೆ ಮಾಡವಂತೆ ಕೋರಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳಾದ ನಳಿನಿ ಶ್ರೀಹರನ್ ಮತ್ತು ಪಿ ರವಿಚಂದ್ರನ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಪ್ರತಿಕ್ರಿಯೆಯನ್ನು ಕೇಳಿದೆ [ಆರ್ ಪಿ ರವಿಚಂದ್ರನ್ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಅಕ್ಟೋಬರ್ 14, 2022 ಕ್ಕೆ ಪ್ರಕರಣ ಮುಂದೂಡಿತು.
ಇದೇ ಬಗೆಯ ಪರಿಹಾರ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಕಳೆದ ಜೂನ್‌ನಲ್ಲಿ ತಿರಸ್ಕರಿಸಿತ್ತು. ತನಗೆ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಇರುವ ಸಮಾನ ಅಧಿಕಾರವಿಲ್ಲ ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಅರ್ಜಿದಾರರು ತೆರಳುವಂತೆ ಅದು ಸೂಚಿಸಿತ್ತು.
ರಾಜೀವ್ ಗಾಂಧಿ ಹತ್ಯೆಯ ಏಳು ಅಪರಾಧಿಗಳಲ್ಲಿ ಒಬ್ಬರಾದ ಎ ಜಿ ಪೇರರಿವಾಳನ್ ಬಿಡುಗಡೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ನಳಿನಿ ಮತ್ತು ರವಿಚಂದ್ರನ್ ಅವಲಂಬಿಸಿದ್ದಾರೆ.
ಸೆಪ್ಟೆಂಬರ್ 2018ರಲ್ಲಿ ತಮಿಳುನಾಡು ಸರ್ಕಾರವು ಮಾಡಿದ್ದ ಶಿಫಾರಸಿನ ಆಧಾರದ ಮೇಲೆ ಪೇರರಿವಾಳನ್‌ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿ ಅಡಿಯಲ್ಲಿ ಅಸಾಧಾರಣ ಅಧಿಕಾರ ಚಲಾಯಿಸಿ ಆತನನ್ನು ಬಿಡುಗಡೆಗೊಳಿಸಿತ್ತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಇತರ ಆರು ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.