ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿನ ಅಪರಾಧಿ ಎ ಜಿ ಪೇರರಿವಾಳನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ [ಎ ಜಿ ಪೇರರಿವಾಳನ್ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ].
ಸಂವಿಧಾನದ 161ನೇ ವಿಧಿಯಡಿ ಪೇರರಿವಾಳನ್ ದೋಷಮುಕ್ತಿಗೆ ತೀರ್ಮಾನ ಕೈಗೊಳ್ಳಲು ತಮಿಳುನಾಡು ರಾಜ್ಯಪಾಲರು ಬಹಳಷ್ಟು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಹಾಗೂ ಎ ಎಸ್ ಬೋಪಣ್ಣ ಅವರಿದ್ದ ಪೀಠ 142ನೇ ವಿಧಿಯಡಿ ಅಧಿಕಾರ ಚಲಾಯಿಸಿ ಬಿಡುಗಡೆಗೆ ಆದೇಶಿಸಿತು.
"ಸೂಕ್ತ ಪರಿಗಣನೆಗಳ ಆಧಾರದ ಮೇಲೆ ರಾಜ್ಯ ಸಚಿವ ಸಂಪುಟ ನಿರ್ಧಾರ (ಶಿಕ್ಷೆ ಕಡಿತಕ್ಕೆ) ತೆಗೆದುಕೊಂಡಿದೆ. 142ನೇ ವಿಧಿ ಬಳಸಿ ಅಪರಾಧಿಯನ್ನು ಬಿಡುಗಡೆ ಮಾಡುವುದು ಸೂಕ್ತವಾಗಿದೆ" ಎಂದು ನ್ಯಾಯಾಲಯ ಆದೇಶಿಸಿತು.
ಶಿಕ್ಷೆ ಕಡಿತ ಅಥವಾ ಕ್ಷಮಾದಾನಕ್ಕಾಗಿ ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿರುವಾಗ ಇಂತಹ ಅರ್ಜಿಗಳನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸುವ ರಾಜ್ಯಪಾಲರ ಅಧಿಕಾರ ಕುರಿತ ಪ್ರಧಾನ ವಿಷಯ ಸುಪ್ರೀಂ ಕೋರ್ಟ್ ಮುಂದಿತ್ತು. ಸಂವಿಧಾನದ 161ನೇ ವಿಧಿಯಡಿ ಪೇರರಿವಾಳನ್ ಮನವಿ ಸ್ವೀಕರಿಸಲು ರಾಜ್ಯಪಾಲರು ನಿರಾಕರಿಸಿದ್ದರಿಂದ ಆತ ನ್ಯಾಯಾಲಯದ ಮೆಟ್ಟಿಲೇರಿದ್ದ.
ಸಂವಿಧಾನದ 161ನೇ ವಿಧಿಯಡಿ ರಾಜ್ಯಪಾಲರ ಅಧಿಕಾರ ಚಲಾವಣೆಗೆ ವಿವರಣೆಗೆ ನಿಲುಕದ ವಿಳಂಬ ಇರಬೇಕಿಲ್ಲ ಮತ್ತು ಅದನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಮರು ರಾಮ್ ತೀರ್ಪಿನ ಪ್ರಕಾರ ರಾಜ್ಯಪಾಲರು ಕೇವಲ ಸಾಧನವವಾಗಿದ್ದಾರೆ. ಪ್ರಕರಣವನ್ನು ರಾಜ್ಯಪಾಲರಿಗೆ ಮರಳಿಸುವಂತಹ ಪರಿಣಾಮ ನಮ್ಮ ಮೇಲೆ ಮೂಡಿಲ್ಲ," ಎಂದು ಅದು ವಿವರಿಸಿತು.