ರಾಜೀವ್ ಹತ್ಯೆ ದೋಷಿಯ ಶಿಕ್ಷೆ ಕಡಿಮೆ ಮಾಡುವ ಕುರಿತ ಶಿಫಾರಸ್ಸು ಬದಿಗಿಟ್ಟಿರುವ ರಾಜ್ಯಪಾಲ: ಸುಪ್ರೀಂ ಕೋರ್ಟ್ ಅಸಮಾಧಾನ

ರಾಜ್ಯಪಾಲ ಭವಾರಿಲಾಲ್ ಪುರೋಹಿತ್ ಮುಂದಿರುವ ಪ್ರಕರಣವು “ದೊಡ್ಡ ಪಿತೂರಿ”ಯ ಭಾಗವಾಗಿದ್ದು, ಅವರು “ಸಿಬಿಐ ವರದಿಗಾಗಿ ಕಾಯುತ್ತಿದ್ದಾರೆ” ಎಂದು ನ್ಯಾಯಾಲಯಕ್ಕೆ ತಮಿಳುನಾಡು ಸರ್ಕಾರ ವಿವರಿಸಿದೆ.
Rajiv Gandhi assassination, Supreme Court
Rajiv Gandhi assassination, Supreme Court

ಮಾಜಿ ಪ್ರಧಾನ ಮಂತ್ರಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ದೋಷಿಯಾದ ಎ ಜಿ ಪೆರಾರಿವಾಲನ್‌ ಅವರ ಶಿಕ್ಷೆಯನ್ನು ಕಡಿಮೆ ಮಾಡುವ ಸಂಬಂಧ ತಮಿಳುನಾಡು ಸರ್ಕಾರದ ಶಿಫಾರಸನ್ನು ರಾಜ್ಯಪಾಲರು ಕಳೆದ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವುದಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಅಜಯ್‌ ರಸ್ತೋಗಿ ಮತ್ತು ಹೇಮಂತ್‌ ಗುಪ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ರಾಜ್ಯ ಸರ್ಕಾರದ ಶಿಫಾರಸಿಗೆ ಸಂಬಂಧಿಸಿದಂತೆ ಇನ್ನೂ ಏಕೆ ರಾಜ್ಯಪಾಲರು ನಿರ್ಧಾರ ಕೈಗೊಂಡಿಲ್ಲ ಎಂಬುದನ್ನು ಪತ್ತೆಹಚ್ಚುವಂತೆ ತಮಿಳುನಾಡಿನ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಬಾಲಾಜಿ ಶ್ರೀನಿವಾಸನ್‌ ಅವರಿಗೆ ಸೂಚಿಸಿದೆ.

ರಾಜ್ಯಪಾಲ ಭವಾರಿಲಾಲ್‌ ಪುರೋಹಿತ್‌ ಮುಂದಿರುವ ಪ್ರಕರಣವು “ದೊಡ್ಡ ಪಿತೂರಿ”ಯ ಭಾಗವಾಗಿದ್ದು, ಅವರು “ಸಿಬಿಐ ವರದಿಗಾಗಿ ಕಾಯುತ್ತಿದ್ದಾರೆ” ಎಂದು ನ್ಯಾಯಾಲಯಕ್ಕೆ ಶ್ರೀನಿವಾಸನ್‌ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಹೀಗೆ ಹೇಳಿದೆ.

“ನಾವು ನ್ಯಾಯವ್ಯಾಪ್ತಿಯನ್ನು ಚಲಾಯಿಸ ಬಯಸುವುದಿಲ್ಲ, ರಾಜ್ಯಪಾಲರ ಮುಂದೆ ಎರಡು ವರ್ಷಗಳಿಂದ ಶಿಫಾರಸು ಹೇಗೆ ಬಾಕಿ ಉಳಿದಿದೆ ಎಂಬುದರ ಬಗ್ಗೆ ನಮಗೆ ಸಮಾಧಾನವಿಲ್ಲ.”

ನಿಲೋಫರ್‌ ನಿಶಾ ಪ್ರಕರಣದಲ್ಲಿ ಶಿಕ್ಷೆ ಕಡಿಮೆ ಮಾಡುವ ಅಧಿಸೂಚನೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಸಂವಿಧಾನದ 142ನೇ ವಿಧಿಯ ಅನ್ವಯ ತನ್ನ ಅಧಿಕಾರ ಚಲಾಯಿಸಿ ಕೈದಿಗಳನ್ನು ಬಿಡುಗಡೆಗೊಳಿಸಿತ್ತು ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರು ತಗಾದೆ ಎತ್ತಿದರು.

ಶಿಕ್ಷೆ ಕಡಿಮೆ ಮಾಡುವುದು ರಾಜ್ಯಪಾಲರ ವಿವೇಚನಾಧಿಕಾರವಾಗಿದ್ದು, ಇದು ಅಪರಾಧ ಸಂಹಿತೆ ಪ್ರಕ್ರಿಯೆಗೆ (ಸಿಆರ್‌ಪಿಸಿ) ಒಡಪಡುವುದಿಲ್ಲ ಎಂದು ಶಂಕರನಾರಾಯಣನ್‌ ವಾದ ವಿಸ್ತರಿಸಿದರು.

ಸುಪ್ರೀಂ ಕೋರ್ಟ್‌ ರಾಜ್ಯಪಾಲರಿಗೆ ಹೇಗೆ ನಿರ್ದೇಶನ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಹಾಗೂ ಕಾನೂನಿನ ಅಂಶಗಳನ್ನು ಸಲ್ಲಿಸುವಂತೆ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.

ರಾಜೀವ್‌ ಹತ್ಯೆ ಪ್ರಕರಣದ ಹಿಂದಿನ "ದೊಡ್ಡ ಪಿತೂರಿಗೆ" ಸಂಬಂಧಿಸಿದ ತನಿಖೆಯು ಇಂಗ್ಲೆಂಡ್‌ ಮತ್ತು ಶ್ರೀಲಂಕಾಕ್ಕೆ ವಿಸ್ತರಿಸಿದ್ದು, ಔಪಚಾರಿಕ ಮನವಿಗೆ ಕೇಂದ್ರೀಯ ತನಿಖಾ ದಳವು ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಎನ್‌ ನಟರಾಜ್‌ ನ್ಯಾಯಾಲಯಕ್ಕೆ ವಿವರಿಸಿದರು.

Also Read
ಮಹಾತ್ಮ ಗಾಂಧಿ ಪ್ರತಿಮೆಯನ್ನು ಪೂಜಾ ಸ್ಥಳ ಎಂದು ಪರಿಗಣಿಸಲು ಸಾಧ್ಯವಿಲ್ಲ: ರಾಜ್ಯ ಹೈಕೋರ್ಟ್

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ರಾವ್‌ ಅವರು ಹೀಗೆಂದರು:

“ಕಳೆದ 20 ವರ್ಷಗಳಿಂದ ಈ ದೊಡ್ಡ ಪಿತೂರಿ ತನಿಖೆ ಬಾಕಿ ಇದ್ದು, ಅದು ಇನ್ನೂ ಮುಂದುವರೆದಿದೆ. ನೀವು ಇನ್ನೂ ಇಂಗ್ಲೆಂಡ್‌ ಇತ್ಯಾದಿ ಕಡೆಗಳಿಂದ ಔಪಚಾರಿಕ ಮನವಿಗೆ ಪ್ರತಿಕ್ರಿಯೆ ಪಡೆಯುವುದರಲ್ಲೇ ಇದ್ದೀರಾ?”
ನ್ಯಾ. ಎಲ್‌ ನಾಗೇಶ್ವರ ರಾವ್‌

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ 1991ರಲ್ಲಿ ಪೆರಾರಿವಾಲನ್‌ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಗಾಂಧಿ ಹತ್ಯೆಗೆ ಬಳಸಲಾಗಿದ್ದ ಸ್ಫೋಟಕಕ್ಕೆ ಪಿತೂರಿಗಾರ ಶಿವರಾಸನ್‌ ಅವರಿಗೆ 9 ವೋಲ್ಟ್‌ ಬ್ಯಾಟರಿ ಪೂರೈಸಿದ ಆರೋಪ ಮಾಡಲಾಗಿತ್ತು. 20 ವರ್ಷಗಳನ್ನು ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಖೈದಿಯಾಗಿ ಕಳೆದಿರುವ ಪೆರಾರಿವಾಲನ್‌ ಅವರ ಶಿಕ್ಷೆಯನ್ನು 2014ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಆಜೀವ ಶಿಕ್ಷೆಯನ್ನಾಗಿ ಮಾರ್ಪಡಿಸಿತ್ತು. 2018ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ಸರ್ಕಾರವು ಪೆರಾರಿವಾಲನ್‌ ಮತ್ತು ಇತರ ಆರು ಮಂದಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಈ ಸಂಬಂಧದ ಶಿಫಾರಸ್ಸು ರಾಜ್ಯಪಾಲರ ಬಳಿಯೇ ಕಳೆದ ಎರಡು ವರ್ಷಗಳಿಂದ ಇದೆ.

Related Stories

No stories found.
Kannada Bar & Bench
kannada.barandbench.com